IND Vs SA T20 | ನಾಳೆ ಡಿ.19 ರಂದು ಅಹ್ಮದಾಬಾದ್ ನಲ್ಲಿ ಕೊನೆಯ ಟಿ-20 ಪಂದ್ಯ
ಗೆದ್ದರೆ ಸರಣಿ; ಇಲ್ಲದಿದ್ದರೆ ಸಮಬಲ!
Photo Credit : PTI
ಅಹ್ಮದಾಬಾದ್, ಡಿ.18: ಆತಿಥೇಯ ಭಾರತ ಕ್ರಿಕೆಟ್ ತಂಡ ಶುಕ್ರವಾರ ನಡೆಯಲಿರುವ ಐದನೇ ಹಾಗೂ ಕೊನೆಯ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಟೆಸ್ಟ್ ಪಂದ್ಯವನ್ನು 2-0 ಅಂತರದಿಂದ ಗೆದ್ದಿರುವ ಹಾಗೂ ಏಕದಿನ ಸರಣಿಯಲ್ಲಿ ಕೊನೆಯ ತನಕ ಹೋರಾಟ ನೀಡಿದ್ದ ದಕ್ಷಿಣ ಆಫ್ರಿಕಾ ತಂಡ ಕೊನೆಯ ಟಿ-20 ಪಂದ್ಯವನ್ನು ಜಯಿಸಿ ಭಾರತ ತಂಡಕ್ಕೆ ಸರಣಿ ಗೆಲುವನ್ನು ನಿರಾಕರಿಸುವ ವಿಶ್ವಾಸದಲ್ಲಿದೆ.
ಬುಧವಾರ ದಟ್ಟ ಮಂಜಿನಿಂದಾಗಿ ಲಕ್ನೊದಲ್ಲಿ ನಡೆಯಬೇಕಾಗಿದ್ದ ನಾಲ್ಕನೇ ಟಿ-20 ಪಂದ್ಯವು ಒಂದೂ ಎಸೆತ ಕಾಣದೆ ರದ್ದಾಗಿತ್ತು. ಇದು ನಿರೀಕ್ಷಿತ ಫಲಿತಾಂಶವಾಗಿರಲಿಲ್ಲ. ಸ್ವದೇಶದಲ್ಲಿ ನಡೆಯಲಿರುವ ಮುಂಬರುವ ಟಿ-20 ವಿಶ್ವಕಪ್‌ನಲ್ಲಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಗುರಿ ಇಟ್ಟುಕೊಂಡಿರುವ ಭಾರತ ತಂಡ ಟಿ-20 ಪಂದ್ಯಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಬಹುತೇಕ ಬಗೆಹರಿಸಿಕೊಂಡಿದೆ. ಆದರೆ ದಕ್ಷಿಣ ಆಫ್ರಿಕಾ ತಂಡ ಸೀಮಿತ ಓವರ್ ಕ್ರಿಕೆಟಿಗೆ ಸಂಬಂಧಿಸಿ ಸೂಕ್ತ ಸಂಯೋಜನೆಯನ್ನು ರೂಪಿಸಿಲ್ಲ.
ಅಹ್ಮದಾಬಾದ್‌ನಲ್ಲಿ ಮಂಜಿನ ಕಾಟದ ಭಯವಿಲ್ಲ. ಹಗಲಿನ ತಾಪಮಾನ 30 ಡಿಗ್ರಿ ಇದೆ. ಈ ವರ್ಷ ರಾತ್ರಿ ವೇಳೆ ನಡೆದಿರುವ 8 ಪಂದ್ಯಗಳ ಪೈಕಿ ಆರು ಬಾರಿ ಮೊದಲು ಬ್ಯಾಟಿಂಗ್ ಮಾಡಿದ್ದ ತಂಡ ಜಯಶಾಲಿಯಾಗಿದೆ.
ದಕ್ಷಿಣ ಆಫ್ರಿಕಾದ ಆಟಗಾರ ಮಾರ್ಕೊ ಜಾನ್ಸನ್ ಪಾಲಿಗೆ ಭಾರತದ ಕ್ರಿಕೆಟ್ ಪ್ರವಾಸ ಸ್ಮರಣೀಯವಾಗಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ನಲ್ಲೂ ಜಾನ್ಸನ್ ಮಿಂಚಿದ್ದಾರೆ. ಐದನೇ ಪಂದ್ಯವನ್ನು ಜಯಿಸಿ ಸರಣಿಯನ್ನು ಸಮಬಲಗೊಳಿಸುವ ವಿಶ್ವಾಸದಲ್ಲಿದ್ದಾರೆ.
ಭಾರತ ತಂಡವು ಗೆಲುವಿನ ಓಟದಲ್ಲಿದ್ದರೂ ನಾಯಕ ಸೂರ್ಯಕುಮಾರ್ ಯಾದವ್ ಕಳೆದ ವರ್ಷ ಅಕ್ಟೋಬರ್‌ನಿಂದ ಅರ್ಧಶತಕವನ್ನೇ ಗಳಿಸಿಲ್ಲ. ಅಕ್ಟೋಬರ್ ನಂತರ 21 ಇನಿಂಗ್ಸ್‌ಗಳಲ್ಲಿ 119.5ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 239 ರನ್ ಗಳಿಸಿದ್ದಾರೆ.
ಟೀಮ್ ನ್ಯೂಸ್:
ಮೂರನೇ ಟಿ-20 ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ಜಸ್‌ಪ್ರಿತ್ ಬುಮ್ರಾ ನಾಲ್ಕನೇ ಟಿ-20 ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಲಭ್ಯವಿದ್ದರು. ತವರು ಮೈದಾನ ಅಹ್ಮದಾಬಾದ್‌ನಲ್ಲಿ ಬುಮ್ರಾ ಆಡುವುದು ಬಹುತೇಕ ಖಚಿತ. ಗಾಯಗೊಂಡಿರುವ ಶುಭಮನ್ ಗಿಲ್ ಬದಲಿಗೆ ಕೇರಳದ ಬ್ಯಾಟರ್ ಸಂಜು ಸ್ಯಾಮ್ಸನ್ ಆಡುವ ಸಾಧ್ಯತೆಯಿದೆ.
ದಕ್ಷಿಣ ಆಫ್ರಿಕಾ ತಂಡ ತನ್ನ ಆಡುವ 11ರ ಬಳಗದಲ್ಲಿ ಒಂದೆರಡು ಬದಲಾವಣೆ ಮಾಡುವ ನಿರೀಕ್ಷೆ ಇದೆ.
► ಪಿಚ್ ಹಾಗೂ ವಾತಾವರಣ
ಭಾರತದ ಈ ಭಾಗದಲ್ಲಿ ನವೆಂಬರ್, ಡಿಸೆಂಬರ್ ಹಾಗೂ ಜನವರಿ ಮೊದಲಾರ್ಧದಲ್ಲಿ ಅಂತರ್‌ರಾಷ್ಟ್ರೀಯ ಪಂದ್ಯದ ಆತಿಥ್ಯವಹಿಸಬಹುದು. ಏಕೆಂದರೆ ಈ ಅವಧಿಯಲ್ಲಿ ಇಲ್ಲಿನ ವಾತಾವರಣ ತಂಪಾಗಿರುವುದಿಲ್ಲ. ಹಗಲು ದೀರ್ಘವಾಗಿರುತ್ತದೆ. ಮಂಜು ಹಾಗೂ ದಟ್ಟ ಹೊಗೆಯ ಸಮಸ್ಯೆ ಇಲ್ಲ. ಅಹ್ಮದಾಬಾದ್ ಸರಣಿಯ ರೋಚಕ ಪಂದ್ಯಕ್ಕೆ ವೇದಿಕೆಯಾಗಬಹುದು.
ತಂಡಗಳು
ಭಾರತ(ಸಂಭಾವ್ಯ): 1. ಅಭಿಷೇಕ್ ಶರ್ಮಾ, 2. ಶುಭಮನ್ ಗಿಲ್/ಸಂಜು ಸ್ಯಾಮ್ಸನ್, 3. ಸೂರ್ಯಕುಮಾರ ಯಾದವ್(ನಾಯಕ), 4. ತಿಲಕ್ ವರ್ಮಾ, 5. ಜಿತೇಶ್ ಶರ್ಮಾ(ವಿಕೆಟ್ ಕೀಪರ್), 6. ಹಾರ್ದಿಕ್ ಪಾಂಡ್ಯ, 7. ಶಿವಂ ದುಬೆ, 8. ಹರ್ಷಿತ್ ರಾಣಾ/ವಾಶಿಂಗ್ಟನ್ ಸುಂದರ್, 9. ಅರ್ಷದೀಪ ಸಿಂಗ್, 10. ಜಸ್‌ಪ್ರಿತ್ ಬುಮ್ರಾ, 11. ವರುಣ್ ಚಕ್ರವರ್ತಿ.
ದಕ್ಷಿಣ ಆಫ್ರಿಕಾ(ಸಂಭಾವ್ಯ): 1. ಕ್ವಿಂಟನ್ ಡಿಕಾಕ್(ವಿಕೆಟ್ ಕೀಪರ್), 2. ರೀಝಾ ಹೆಂಡ್ರಿಕ್ಸ್, 3. ಏಡೆನ್ ಮರ್ಕ್ರಮ್(ನಾಯಕ), 4. ಡೆವಾಲ್ಡ್ ಬ್ರೆವಿಸ್, 5. ಡೇವಿಡ್ ಮಿಲ್ಲರ್, 6. ಡೊನೊವನ್ ಫೆರೇರ, 7. ಮಾರ್ಕೊ ಜಾನ್ಸನ್, 8. ಕಾರ್ಬಿನ್ ಬಾಷ್, 9. ಜಾರ್ಜ್ ಲಿಂಡ್/ಕೇಶವ ಮಹಾರಾಜ್/ಅನ್ರಿಚ್ ನೋಟ್ಜೆ, 10. ಲುಂಗಿ ಗಿಡಿ, 11. ಒಟ್ನೀಲ್ ಬಾರ್ಟ್‌ಮನ್.
ಪಂದ್ಯ ಆರಂಭದ ಸಮಯ: ರಾತ್ರಿ 7:00