2026ರಲ್ಲಿ ಭಾರತದ ಕ್ರಿಕೆಟ್ | ಸೂರ್ಯಕುಮಾರ್ ಫಾರ್ಮ್, ಗಂಭೀರ್ ಕಾರ್ಯ ವೈಖರಿ ಮೇಲೆ ಎಲ್ಲರ ಚಿತ್ತ
ಸೂರ್ಯಕುಮಾರ್ , ಗೌತಮ್ ಗಂಭೀರ್ | Photo Credit : PTI
ಹೊಸದಿಲ್ಲಿ, ಜ.1: ಭಾರತೀಯ ಕ್ರಿಕೆಟ್ ತಂಡವು 2026ರ ಸಾಲಿನಲ್ಲಿ ಮೂರು ವಿಶ್ವ ಪ್ರಶಸ್ತಿಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದು, ಟೆಸ್ಟ್ ತಂಡವಾಗಿ ಅಗ್ರ ಸ್ಥಾನಕ್ಕೇರುವುದು ಭಾರೀ ಸವಾಲಾಗಿದೆ. ಅಂಡರ್-19 ವಿಶ್ವಕಪ್ (ಜನವರಿ–ಫೆಬ್ರವರಿ), ಪುರುಷರ ಟಿ-20 ವಿಶ್ವಕಪ್ (ಫೆಬ್ರವರಿ–ಮಾರ್ಚ್) ಹಾಗೂ ಮಹಿಳೆಯರ ಟಿ-20 ವಿಶ್ವಕಪ್ (ಜೂನ್) ಈ ವರ್ಷ ನಡೆಯಲಿದೆ. ಭಾರತದ ಕೋಚ್ ಗೌತಮ್ ಗಂಭೀರ್ ಹಾಗೂ ಟಿ-20 ತಂಡದ ನಾಯಕ ಸೂರ್ಯಕುಮಾರ ಯಾದವ್ ಖ್ಯಾತಿಗೆ ಧಕ್ಕೆಯಾಗಿದ್ದು, ಈ ಇಬ್ಬರ ಮೇಲೆಯೇ ಎಲ್ಲರ ಚಿತ್ತ ಹರಿದಿದೆ.
ಸೂರ್ಯಕುಮಾರ್ ಟಿ-20 ಫಾರ್ಮ್
2024ರ ಟಿ-20 ವಿಶ್ವಕಪ್ ತನಕವೂ ಸೂರ್ಯಕುಮಾರ್ ಅವರು ಭಾರತದ ಶ್ರೇಷ್ಠ ಟಿ-20 ಬ್ಯಾಟರ್ ಆಗಿದ್ದರು. ಮೆಗಾ ಸ್ಪರ್ಧೆಯಲ್ಲಿ ಭಾರತವು ವಿಶ್ವಕಪ್ ಟ್ರೋಫಿ ಗೆದ್ದ ನಂತರ ಹಿರಿಯ ಬ್ಯಾಟರ್‌ಗೆ ನಾಯಕತ್ವದ ಜವಾಬ್ದಾರಿ ಲಭಿಸಿತು. 2024ರ ಜುಲೈ ಹಾಗೂ ಅಕ್ಟೋಬರ್‌ನಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ವಿರುದ್ಧ ಉತ್ತಮ ಪ್ರದರ್ಶನ ನೀಡಿ ತನ್ನ ಮೇಲಿಟ್ಟಿದ್ದ ವಿಶ್ವಾಸ ಉಳಿಸಿಕೊಂಡರು. 2024ರ ಅ.12ರಂದು ಬಾಂಗ್ಲಾದೇಶ ವಿರುದ್ಧ 35 ಎಸೆತಗಳಲ್ಲಿ 75 ರನ್ ಗಳಿಸಿದ್ದರು. ಆದರೆ ಇದು ಟಿ-20 ಕ್ರಿಕೆಟ್‌ನಲ್ಲಿ ಸೂರ್ಯ ಗಳಿಸಿದ ಕೊನೆಯ ಅರ್ಧಶತಕವಾಗಿದೆ.
ಸೂರ್ಯ ಆ ನಂತರದ ಇನಿಂಗ್ಸ್ ಗಳಲ್ಲಿ 2025ರ ಅಂತ್ಯದವರೆಗೆ ಇನ್ನೂ 22 ಪಂದ್ಯಗಳನ್ನು ಆಡಿದ್ದರು. ಕೇವಲ ಎರಡು ಬಾರಿ ಮಾತ್ರ 25 ರನ್ ದಾಟಿದ್ದರು. 2025ರ ಏಶ್ಯಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಔಟಾಗದೆ 47 ರನ್ ಅವರ ಗರಿಷ್ಠ ಮೊತ್ತವಾಗಿತ್ತು. ಕಳಪೆ ದಾಖಲೆಯ ಹೊರತಾಗಿಯೂ ಟಿ-20 ವಿಶ್ವಕಪ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಗಿಲ್ ಕೈಬಿಟ್ಟ ಕಾರಣ ಸೂರ್ಯಕುಮಾರ್ ತಮ್ಮ ನಾಯಕತ್ವವನ್ನು ಉಳಿಸಿಕೊಂಡಿದ್ದಾರೆ.
ಗೌತಮ್ ಗಂಭೀರ್ ಕೋಚಿಂಗ್
ಭಾರತೀಯ ಕ್ರಿಕೆಟ್ ತಂಡದ ಮೊದಲ ವರ್ಷದ ಕೋಚಿಂಗ್ ಅವಧಿಯಲ್ಲಿ ಗೌತಮ್ ಗಂಭೀರ್ ಅವರು ಏಶ್ಯಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಮಾರ್ಗದರ್ಶನ ನೀಡಿದ್ದರು. ಆದರೆ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡವು ಗಂಭೀರ್ ಕೋಚಿಂಗ್‌ನಲ್ಲಿ ನೀರಸ ಪ್ರದರ್ಶನ ನೀಡಿದೆ.
ಟಿ-20 ವಿಶ್ವಕಪ್ ಟೂರ್ನಿಯ ನಂತರ 2024ರ ಜುಲೈ ನಲ್ಲಿ ಗಂಭೀರ್ ಅವರು ಭಾರತದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ಆ ಬಳಿಕ ಭಾರತ ತಂಡವು 19 ಟೆಸ್ಟ್ ಪಂದ್ಯಗಳಲ್ಲಿ 7ರಲ್ಲಿ ಗೆಲುವು, 10ರಲ್ಲಿ ಸೋಲು ಹಾಗೂ 2ರಲ್ಲಿ ಡ್ರಾ ಸಾಧಿಸಿದೆ. ಗಂಭೀರ್ ಕೋಚಿಂಗ್ ನಲ್ಲಿ ಭಾರತವು ಸ್ವದೇಶದಲ್ಲಿ ಎರಡು ಟೆಸ್ಟ್ ಸರಣಿಗಳನ್ನು ಗೆದ್ದಿದ್ದು, ಮೂರರಲ್ಲಿ ಸೋತಿದೆ (ಸ್ವದೇಶದಲ್ಲಿ ಎರಡು ಹಾಗೂ ಆಸ್ಟ್ರೇಲಿಯಾದಲ್ಲಿ ಒಂದು). ಸ್ವದೇಶದಲ್ಲಿ ಸತತ ಎರಡು ಟೆಸ್ಟ್ ಸರಣಿಗಳಲ್ಲಿ ಕ್ಲೀನ್‌ಸ್ವೀಪ್ ಗೆ ಒಳಗಾಗಿರುವುದು ಭಾರತಕ್ಕೆ ತೀವ್ರ ಹಿನ್ನಡೆಯಾಗಿತ್ತು.
ಭಾರತವು 2025–27 ಆವೃತ್ತಿಯಲ್ಲಿ ಇನ್ನೂ 9 ಟೆಸ್ಟ್ ಪಂದ್ಯಗಳನ್ನು ಆಡಲು ಬಾಕಿ ಇದೆ. ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆಯಲು ಭಾರತ ತಂಡವು ಕನಿಷ್ಠ ಆರು ಟೆಸ್ಟ್ ಪಂದ್ಯಗಳಲ್ಲಿ ಗೆಲ್ಲಬೇಕಿದೆ.
ಗಂಭೀರ್ ಕೋಚ್ ಆದ ನಂತರ 2024ರಲ್ಲಿ ಸ್ವದೇಶದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 0–3 ಅಂತರದಿಂದ ಟೆಸ್ಟ್ ಸರಣಿ ಸೋತಿತ್ತು. 2013ರ ಫೆಬ್ರವರಿಯಿಂದ ಅಕ್ಟೋಬರ್ 2024ರ ತನಕ ಭಾರತವು ಸ್ವದೇಶದಲ್ಲಿ ಒಂದೂ ಟೆಸ್ಟ್ ಸರಣಿಯನ್ನು ಸೋತಿರಲಿಲ್ಲ. ಕಿವೀಸ್ ಪಡೆ ಭಾರತದ ಗೆಲುವಿನ ಓಟಕ್ಕೆ ಕಡಿವಾಣ ಹಾಕಿತು. 2025ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮತ್ತೊಮ್ಮೆ ಟೆಸ್ಟ್ ಸರಣಿಯನ್ನು 0–2 ಅಂತರದಿಂದ ಸೋತಿತ್ತು.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರಂತಹ ಹಿರಿಯ ಆಟಗಾರರ ನಿವೃತ್ತಿ, ಹೊಸ ತಲೆಮಾರಿನ ಆಟಗಾರರು ಟೆಸ್ಟ್‌ಗೆ ಅಗತ್ಯವಿರುವ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳದೇ ಇರುವುದು, ಬೌಲರ್‌ಗಳು ಒತ್ತಡಕ್ಕೆ ಸಿಲುಕಿರುವುದು ಭಾರತದ ಟೆಸ್ಟ್ ಸರಣಿ ಸೋಲಿಗೆ ಕಾರಣವಾಗಿದೆ.