ಮಂಗೋಲಿಯ ವಿರುದ್ಧ ಭಾರತದ ಫುಟ್ಬಾಲ್ ತಂಡಕ್ಕೆ ಭರ್ಜರಿ ಜಯ
PC : @IFTWC
ಹೊಸದಿಲ್ಲಿ: ಥಾಯ್ಲೆಂಡ್ ನಲ್ಲಿ ಸೋಮವಾರ ನಡೆದ ಎಎಫ್ಸಿ ಏಶ್ಯನ್ ಕಪ್ ಕ್ವಾಲಿಫೈಯರ್ ನ ತನ್ನ ಮೊದಲ ಪಂದ್ಯದಲ್ಲಿ ಭಾರತೀಯ ಮಹಿಳಾ ಫುಟ್ಬಾಲ್ ತಂಡವು ಮಂಗೋಲಿಯ ತಂಡವನ್ನು 13-0 ಗೋಲುಗಳ ಅಂತರದಿಂದ ಮಣಿಸಿದೆ. ಈ ಮೂಲಕ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ.
ಏಕಪಕ್ಷೀಯವಾಗಿ ಸಾಗಿದ ಪಂದ್ಯದಲ್ಲಿ ಸಂಗೀತಾ 8ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು. ಪ್ಯಾರಿ ಅವರು ಐದು ಬಾರಿ (29ನೇ, 45ನೇ, 46ನೇ, 52ನೇ, 55ನೇ ನಿಮಿಷ) ಗೋಲು ಗಳಿಸಿ ಪಂದ್ಯದ ಹೀರೋವಾಗಿ ಹೊರಹೊಮ್ಮಿದರು. ಸೌಮ್ಯಾ(20ನೇ, 59ನೇ ನಿಮಿಷ), ರಿಂಪಾ ಹಲ್ದಾರ್(67ನೇ ನಿ.), ಮಾಳವಿಕಾ(71ನೇ ನಿಮಿಷ), ಪ್ರಿಯದರ್ಶಿನಿ(73ನೇ, 86ನೇ ನಿಮಿಷ) ಹಾಗೂ ಗ್ರೇಸ್ ಡಾಂಗ್ಮಿ(75ನೇ ನಿಮಿಷ)ಉಳಿದ ಗೋಲು ಗಳಿಸಿದರು.
4 ತಿಂಗಳ ನಂತರ ಭಾರತದ ಮಹಿಳಾ ತಂಡವು ಮೊದಲ ಗೆಲುವು ದಾಖಲಿಸಿದೆ. ಈ ವರ್ಷಾರಂಭದಲ್ಲಿ ಪಿಂಕ್ ಲೇಡೀಸ್ ಕಪ್ ನಲ್ಲಿ ಜೋರ್ಡನ್ ತಂಡದ ವಿರುದ್ಧ ತನ್ನ ಕೊನೆಯ ಗೆಲುವು ದಾಖಲಿಸಿತ್ತು. ರಶ್ಯ, ದಕ್ಷಿಣ ಕೊರಿಯಾ ಹಾಗೂ ಉಜ್ಬೇಕಿಸ್ತಾನ ತಂಡಗಳ ವಿರುದ್ಧ ಸೋತಿರುವ ಭಾರತ ತಂಡವು ಫಿಫಾ ರ‍್ಯಾಂಕಿಂಗ್ನಲ್ಲಿ 70ನೇ ಸ್ಥಾನಕ್ಕೆ ಕುಸಿದಿದೆ.
ಸ್ವದೇಶದಲ್ಲಿ ನಡೆದಿದ್ದ ಹಿಂದಿನ ಆವೃತ್ತಿಯ ಎಎಫ್ಸಿ ಮಹಿಳೆಯರ ಏಶ್ಯನ್ ಕಪ್ ಪಂದ್ಯಾವಳಿಯಿಂದ ಭಾರತ ತಂಡವು ಕೋವಿಡ್-19 ಕಾರಣಕ್ಕೆ ಹಿಂದೆ ಸರಿದಿತ್ತು. ಭಾರತ ತಂಡ ತಂಗಿದ್ದ ಶಿಬಿರದಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿತ್ತು.
ಮುಖ್ಯ ಕೋಚ್ ಕ್ರಿಸ್ಪಿನ್ ಚೆಟ್ರಿ ಮಾರ್ಗದರ್ಶನದಲ್ಲಿ ಭಾರತ ತಂಡವು ಆಸ್ಟ್ರೇಲಿಯದಲ್ಲಿ ನಡೆಯಲಿರುವ 2026ರ ಆವೃತ್ತಿಯ ಪಂದ್ಯಾವಳಿಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದೆ.
ಭಾರತ ತಂಡವು ಅರ್ಹತಾ ಸುತ್ತಿನಲ್ಲಿ ಮಂಗೋಲಿಯ(126ನೇ ರ‍್ಯಾಂಕ್), ಟಿಮೋರ್ ಲೆಸ್ಟೆ(158ನೇ ರ‍್ಯಾಂಕ್), ಇರಾಕ್(173ನೇ ರ‍್ಯಾಂಕ್) ಹಾಗೂ ಆತಿಥೇಯ ಥಾಯ್ಲೆಂಡ್(46ನೇ ರ‍್ಯಾಂಕ್)ತಂಡಗಳನ್ನು ಎದುರಿಸಲಿದ್ದು, ಗ್ರೂಪ್ ವಿನ್ನರ್ ಫೈನಲ್ ಗೆ ಅರ್ಹತೆ ಪಡೆಯಲಿದೆ.
ಭಾರತ ತಂಡವು ಇನ್ನು 6 ದಿನಗಳ ನಂತರ ಟಿಮೋರ್ ಲೆಸ್ಟೆ ತಂಡವನ್ನು ಎದುರಿಸಲಿದೆ.