×
Ad

ʼಸೋತʼ ಆಫ್ರಿಕಾ, ʼವಿಶ್ವʼ ಗೆದ್ದ ಭಾರತ!

ಭಾರತದ ಮಹಿಳೆಯರ ಮುಕುಟಕ್ಕೆ ಚೊಚ್ಚಲ ವಿಶ್ವಕಪ್‌ ಕಿರೀಟ

Update: 2025-11-03 00:01 IST

Photo: x/@BCCIWomen

ಮುಂಬೈ: ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ(87 ರನ್, 78 ಎಸೆತ, 7 ಬೌಂಡರಿ,2 ಸಿಕ್ಸರ್, 36 ರನ್‌ ಗೆ 2 ವಿಕೆಟ್)ಹಾಗೂ ದೀಪ್ತಿ ಶರ್ಮಾ(58 ರನ್, 58 ಎಸೆತ, 3 ಬೌಂಡರಿ, 1 ಸಿಕ್ಸರ್, 39 ರನ್‌ ಗೆ 5 ವಿಕೆಟ್) ಅವರ ಆಲ್‌ ರೌಂಡ್‌ ಆಟದ ನೆರವಿನಿಂದ ಭಾರತದ ಮಹಿಳಾ ಕ್ರಿಕೆಟ್ ತಂಡವು ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್ ಅಂತರದಿಂದ ಮಣಿಸಿದೆ. ಈ ಮೂಲಕ ಇದೇ ಮೊದಲ ಬಾರಿ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.

ಈ ಹಿಂದೆ 2005 ಹಾಗೂ 2017ರಲ್ಲಿ ಫೈನಲ್‌ ನಲ್ಲಿ ಮುಗ್ಗರಿಸಿದ್ದ ಭಾರತ ತಂಡ ಈ ಬಾರಿ ತವರು ನೆಲದಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮಿರುಗುವ ಟ್ರೋಫಿ ಹಾಗೂ 40 ಕೋಟಿ ರೂಪಾಯಿ ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಮೊತ್ತ ಮೊದಲ ಬಾರಿ ಫೈನಲ್ ಗೆ ತಲುಪಿದ್ದ ದಕ್ಷಿಣ ಆಫ್ರಿಕಾ ತಂಡವು ರನ್ನರ್ಸ್ ಅಪ್ ಗೆ ತೃಪ್ತಿಪಟ್ಟುಕೊಂಡಿದ್ದು, 20 ಕೋಟಿ ರೂಪಾಯಿ ಬಹುಮಾನ ಗೆದ್ದಿದೆ.

ರವಿವಾರ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡವು ವಿಶ್ವಕಪ್ ಫೈನಲ್‌ ನಲ್ಲಿ ಎರಡನೇ ಗರಿಷ್ಠ ಸ್ಕೋರ್(298 ರನ್)ಗಳಿಸಿತು. ಗೆಲ್ಲಲು 299 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ನಾಯಕಿ ಲೌರಾ ವೊಲ್ವಾರ್ಟ್(101 ರನ್, 98 ಎಸೆತ, 11 ಬೌಂಡರಿ, 1 ಸಿಕ್ಸರ್) ಶತಕದ ಹೊರತಾಗಿಯೂ 45.3 ಓವರ್ಗಳಲ್ಲಿ 246 ರನ್‌ ಗೆ ಆಲೌಟಾಯಿತು.

ಭಾರತ ತಂಡವು 7 ಬೌಲರ್ಗಳನ್ನು ದಾಳಿಗಿಳಿಸಿದ್ದು, ಈ ಪೈಕಿ ದೀಪ್ತಿ ಶರ್ಮಾ(5-39)ಯಶಸ್ವಿ ಪ್ರದರ್ಶನ ನೀಡಿದರು. ಶೆಫಾಲಿ ವರ್ಮಾ(2-36)ಆಲ್‌ ರೌಂಡ್‌ ಪ್ರದರ್ಶನದಿಂದ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News