×
Ad

ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟಿ20 ಸರಣಿ ಗೆದ್ದು ಇತಿಹಾಸ ಬರೆದ ಭಾರತದ ಮಹಿಳಾ ಕ್ರಿಕೆಟ್ ತಂಡ

Update: 2025-07-13 21:28 IST

PC : PTI 

ಲಂಡನ್, ಜು.13: ಬರ್ಮಿಂಗ್‌ ಹ್ಯಾಮ್‌ನಲ್ಲಿ ಶನಿವಾರ ನಡೆದ 5ನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡ ಕೊನೆಯ ಎಸೆತದಲ್ಲಿ 5 ವಿಕೆಟ್‌ಗಳ ಅಂತರದಿಂದ ರೋಚಕ ಜಯ ಸಾಧಿಸಿದೆ. ಈ ಪಂದ್ಯವನ್ನು ಸೋತ ಹೊರತಾಗಿಯೂ ಭಾರತದ ಮಹಿಳೆಯರ ಕ್ರಿಕೆಟ್ ತಂಡವು ಇದೇ ಮೊದಲ ಬಾರಿ ಇಂಗ್ಲೆಂಡ್ ನೆಲದಲ್ಲಿ ಮಹಿಳೆಯರ ಟಿ-20 ಸರಣಿಯನ್ನು 3-2 ಅಂತರದಿಂದ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್‌ ಗೆ ಇಳಿಸಲ್ಪಟ್ಟ ಭಾರತ ತಂಡವು ಶೆಫಾಲಿ ವರ್ಮಾ ಅವರ ಸ್ಫೋಟಕ ಇನಿಂಗ್ಸ್(75 ರನ್, 41 ಎಸೆತ, 13 ಬೌಂಡರಿ, 1 ಸಿಕ್ಸರ್)ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 167 ರನ್ ಗಳಿಸಿದೆ. ಕೇವಲ 23 ಎಸೆತಗಳಲ್ಲಿ ತನ್ನ ಅರ್ಧಶತಕವನ್ನು ತಲುಪಿರುವ ಶೆಫಾಲಿ 13 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು. ಮಹಿಳೆಯರ ಟಿ-20 ಪಂದ್ಯದಲ್ಲಿ 2ನೇ ವೇಗದ ಅರ್ಧಶತಕ ಗಳಿಸಿದ ಭಾರತೀಯ ಆಟಗಾರ್ತಿ ಎನಿಸಿಕೊಂಡರು.

ಉಪ ನಾಯಕಿ ಸ್ಮೃತಿ ಮಂಧಾನ (8 ರನ್)ಸತತ ಬೌಂಡರಿಗಳನ್ನು ಸಿಡಿಸುವುದರೊಂದಿಗೆ ಭಾರತದ ಇನಿಂಗ್ಸ್‌ಗೆ ಆಕ್ರಮಣಕಾರಿ ಆರಂಭ ಒದಗಿಸಿದರು. ಆದರೆ ಅವರು ಅರ್ಲೊಟ್ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಜೆಮಿಮಾ ರೊಡ್ರಿಗಸ್(1ರನ್) ಕೂಡ ಲಿನ್ಸೆ ಸ್ಮಿತ್‌ ಗೆ ಕ್ಲೀನ್‌ಬೌಲ್ಡ್ ಆದರು.

ಶೆಫಾಲಿ ವರ್ಮಾ ಹಾಗೂ ಹರ್ಮನ್‌ಪ್ರಿತ್ ಕೌರ್ 3ನೇ ವಿಕೆಟ್‌ನಲ್ಲಿ 43 ಎಸೆತಗಳಲ್ಲಿ 66 ರನ್ ನಿರ್ಣಾಯಕ ಜೊತೆಯಾಟ ನಡೆಸಿದರು. ಕೌರ್ 15 ರನ್ ಗಳಿಸಿ ಚಾರ್ಲಿ ಡೀನ್‌ಗೆ(3-23) ವಿಕೆಟ್ ಒಪ್ಪಿಸಿದರು.

ಶೆಫಾಲಿ ವರ್ಮಾ ಅವರು ವೊಂಗ್ ಎಸೆದ 7ನೇ ಓವರ್‌ನಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 20 ರನ್ ಗಳಿಸಿದರು. 14ನೇ ಓವರ್‌ನಲ್ಲಿ ಶೆಫಾಲಿ ಇನಿಂಗ್ಸ್ ಅಂತ್ಯವಾಯಿತು.

ರಿಚಾ ಘೋಷ್ 16 ಎಸೆತಗಳಲ್ಲಿ 24 ರನ್ ಕೊಡುಗೆ ನೀಡಿದರು. ರಾಧಾ ಯಾದವ್ 14 ರನ್ ಸೇರಿಸಿದರು. ಭಾರತ ತಂಡವು ಕೊನೆಯ 41 ಎಸೆತಗಳಲ್ಲಿ 56 ರನ್ ಗಳಿಸುವಲ್ಲಿ ಶಕ್ತವಾಯಿತು. ಚಾರ್ಲಿ ಡಿಯನ್ ಇಂಗ್ಲೆಂಡ್‌ನ ಅತ್ಯಂತ ಯಶಸ್ವಿ ಬೌಲರ್(3-23) ಎನಿಸಿಕೊಂಡರು.

10.4 ಓವರ್‌ ಗಳಲ್ಲಿ 101 ರನ್ ಜೊತೆಯಾಟ ನಡೆಸಿದ ಆರಂಭಿಕ ಆಟಗಾರ್ತಿಯರಾದ ಸೋಫಿಯಾ ಡಂಕ್ಲೆ ಹಾಗೂ ಡೇನಿಯಲ್ ವ್ಯಾಟ್-ಹಾಜ್ ಇಂಗ್ಲೆಂಡ್ ತಂಡದ ರನ್ ಚೇಸ್‌ಗೆ ಉತ್ತಮ ಆರಂಭ ಒದಗಿಸಿದರು. ಡಂಕ್ಲೆ 30 ಎಸೆತಗಳಲ್ಲಿ 46 ರನ್ ಗಳಿಸಿದರೆ, ವ್ಯಾಟ್-ಹಾಜ್ ಅವರು 37 ಎಸೆತಗಳಲ್ಲಿ 56 ರನ್ ಗಳಿಸಿದರು.

ಇಂಗ್ಲೆಂಡ್ ತಂಡಕ್ಕೆ ಕೊನೆಯ ಓವರ್‌ ನಲ್ಲಿ ಗೆಲ್ಲಲು 6 ರನ್ ಅಗತ್ಯವಿದ್ದಾಗ ಪಂದ್ಯವು ರೋಚಕ ಘಟ್ಟ ತಲುಪಿತು. ಅರುಂಧತಿ ರೆಡ್ಡಿ, ನಾಯಕಿ ಟಮ್ಮಿ ಬೀಮೌಂಟ್(30 ರನ್) ಹಾಗೂ ಆ್ಯಮಿ ಜೋನ್ಸ್ (10 ರನ್) ವಿಕೆಟ್ ಪಡೆದು ಒತ್ತಡ ಸೃಷ್ಟಿಸಿದರು. ಆಗ ಇಂಗ್ಲೆಂಡ್ ಗೆಲುವಿಗೆ 3 ಎಸೆತಗಳಲ್ಲಿ 5 ರನ್ ಅಗತ್ಯವಿತ್ತು.

ಸೋಫಿ ಎಕ್ಲೆಸ್ಟೋನ್(4 ರನ್) ಹಾಗೂ ಪೈಜ್ ಸ್ಕೋಲ್ಫೀಲ್ಡ್ (2 ರನ್)ಅಂತಿಮ ಎಸೆತದಲ್ಲಿ ಇಂಗ್ಲೆಂಡ್‌ಗೆ ಗೆಲುವು ತಂದುಕೊಟ್ಟರು. ಅರುಂಧತಿ ರೆಡ್ಡಿ 47 ರನ್‌ಗೆ 2 ವಿಕೆಟ್‌ ಗಳನ್ನು ಪಡೆದರು.

ಇಂಗ್ಲೆಂಡ್ ಪರ 3 ವಿಕೆಟ್‌ಗಳನ್ನು ಚಾರ್ಲಿ ಡೀನ್ ಪಂದ್ಯಶ್ರೇಷ್ಠ ಹಾಗೂ ಸರಣಿಯಲ್ಲಿ ಒಟ್ಟು 10 ವಿಕೆಟ್‌ಗಳನ್ನು ಪಡೆದ ಶ್ರೀ ಚರಣಿ ಸರಣಿಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದರು.

ಇದೀಗ ಉಭಯ ತಂಡಗಳು ಜುಲೈ 16ರಿಂದ ಸೌತಾಂಪ್ಟನ್‌ ನಲ್ಲಿ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಯತ್ತ ತನ್ನ ಗಮನ ಹರಿಸಲಿವೆ.

ಸಂಕ್ಷಿಪ್ತ ಸ್ಕೋರ್

ಭಾರತದ ಮಹಿಳಾ ತಂಡ: 20 ಓವರ್‌ಗಳಲ್ಲಿ 167/7

(ಶೆಫಾಲಿ ವರ್ಮಾ 75, ರಿಚಾ ಘೋಷ್ 24, ಚಾರ್ಲಿ ಡೀನ್ 3-23, ಸೋಫಿ ಎಕ್ಲೆಸ್ಟೋನ್ 2-28)

ಇಂಗ್ಲೆಂಡ್ ಮಹಿಳಾ ತಂಡ: 20 ಓವರ್‌ಗಳಲ್ಲಿ 168/5

(ಡ್ಯಾನಿ ವ್ಯಾಟ್-ಹಾಜ್ 56, ಸೋಫಿಯಾ ಡಂಕ್ಲೆ 46, ಟಮ್ಮಿ ಬೀಮೌಂಟ್ 30, ದೀಪ್ತಿ ಶರ್ಮಾ 2-31, ಅರುಂಧತಿ ರೆಡ್ಡಿ 2-47)

ಪಂದ್ಯಶ್ರೇಷ್ಠ: ಚಾರ್ಲಿ ಡೀನ್

ಸರಣಿಶ್ರೇಷ್ಠ: ಶ್ರೀಚರಣಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News