ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು: ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತಕ್ಕೆ ಆಸೀಸ್ ಎದುರಾಳಿ
PC | X
ಮುಂಬೈ: ಲೆಗ್ ಸ್ಪಿನ್ನರ್ ಅಲಾನಾ ಕಿಂಗ್ಸ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ, ಮಹಿಳಾ ವಿಶ್ವಕಪ್ ಲೀಗ್ ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಳು ವಿಕೆಟ್‍ಗಳ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಗೆಲುವಿನೊಂದಿಗೆ ಗುರುವಾರ ನವಿಮುಂಬೈನಲ್ಲಿ ನಡೆಯುವ ಸೆಮಿಫೈನಲ್‍ನಲ್ಲಿ ಆಸ್ಟ್ರೇಲಿಯಾ ತಂಡ ಅತಿಥೇಯ ಭಾರತವನ್ನು ಎದುರಿಸಲು ಸಜ್ಜಾಗಿದೆ.
ಭಾನುವಾರ ನಡೆಯುವ ಲೀಗ್ ಹಂತದ ಇನ್ನೊಂದು ಪಂದ್ಯದಲ್ಲಿ ಭಾರತ ಬಾಂಗ್ಲಾ ವಿರುದ್ಧ ಗೆಲುವು ಸಾಧಿಸಿದರೂ, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲೇ ಉಳಿಯಲಿದೆ.
ಕಳಿಂಗ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕಿಂಗ್ 7 ಓವರ್ ಗಳಲ್ಲಿ 18 ರನ್‍ಗಳಿಗೆ 7 ವಿಕೆಟ್ ಕಬಳಿಸಿ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇದರಿಂದ ಕೇವಲ 24 ಓವರ್ ಗಳಲ್ಲಿ 97 ರನ್‍ಗಳಿಗೆ ದಕ್ಷಿಣ ಆಫ್ರಿಕಾ ಆಲೌಟ್ ಆಯಿತು. ಆಸ್ಟ್ರೇಲಿಯಾ 199 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಗುರಿ ತಲುಪಿತು. ಕಿಂಗ್ ಒಂದು ಪಂದ್ಯದಲ್ಲಿ ಏಳು ವಿಕೆಟ್ ಗಳಿಸಿರುವುದು ಅವರ ಜೀವನಶ್ರೇಷ್ಠ ಸಾಧನೆಯಾಗಿದೆ. ಇದು ಆಸ್ಟ್ರೇಲಿಯನ್ ಆಟಗಾರ್ತಿಯೊಬ್ಬರ ಶ್ರೇಷ್ಠ ಸಾಧನೆಯೂ ಆಗಿದ್ದು, ಮಹಿಳಾ ವಿಶ್ವಕಪ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಗರಿಷ್ಠ ವಿಕೆಟ್ ಗಳಿಸಿದ ಖ್ಯಾತಿಗೂ ಅವರು ಪಾತ್ರರಾದರು.
ಶನಿವಾರದ ಪಂದ್ಯದಲ್ಲಿನ ಸೋಲಿನ ಬಳಿಕ ದಕ್ಷಿಣ ಆಫ್ರಿಕಾ 7 ಪಂದ್ಯಗಳಿಂದ 10 ಅಂಕ ಸಂಪಾದಿಸಿ ಎರಡನೇ ಸ್ಥಾನದಲ್ಲಿದ್ದು, ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ ವಿರುದ್ಧ ಮೊದಲ ಸೆಮಿಫೈನಲ್‍ನಲ್ಲಿ ಸೆಣೆಸಲಿದೆ. ಭಾನುವಾರದ ಕೊನೆಯ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧ ಸೆಣೆಸಲಿದ್ದು, ಈ ಪಂದ್ಯವನ್ನು ಗೆದ್ದಲ್ಲಿ ಇಂಗ್ಲೆಂಡ್ ಎರಡನೇ ಸ್ಥಾನಕ್ಕೆ ಏರಲಿದೆ.