×
Ad

ಏಶ್ಯ ಕಪ್‌ ಗೆ ಭಾರತದ ಅಂಡರ್-19 ಕ್ರಿಕೆಟ್ ತಂಡ ಪ್ರಕಟ; ಆಯುಷ್ ಮ್ಹಾತ್ರೆ ನಾಯಕ, ವಿಹಾನ್ ಮಲ್ಹೋತ್ರಾ ಉಪ ನಾಯಕ

Update: 2025-11-28 20:26 IST

ಆಯುಷ್ ಮ್ಹಾತ್ರೆ | Photo Credit : PTI 

ಹೊಸದಿಲ್ಲಿ, ನ.28: ದುಬೈನಲ್ಲಿ ಡಿಸೆಂಬರ್ 12ರಿಂದ 21ರ ತನಕ ನಡೆಯಲಿರುವ ಎಸಿಸಿ ಪುರುಷರ ಅಂಡರ್-19 ಏಶ್ಯಕಪ್ ಟೂರ್ನಿಗಾಗಿ ಬಿಸಿಸಿಐನ ಜೂನಿಯರ್ ಕ್ರಿಕೆಟ್ ಸಮಿತಿಯು ಶುಕ್ರವಾರ 15 ಸದಸ್ಯರನ್ನು ಒಳಗೊಂಡ ಭಾರತದ ಅಂಡರ್-19 ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ.

ಆಯುಷ್ ಮ್ಹಾತ್ರೆ ನಾಯಕನಾಗಿ ನೇಮಕಗೊಂಡಿದ್ದು, ವಿಹಾನ್ ಮಲ್ಹೋತ್ರಾ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ. ಎಲ್ಲರ ಕಣ್ಣು ಯುವ ಆಟಗಾರ ವೈಭವ್ ಸೂರ್ಯವಂಶಿ ಮೇಲೆ ನೆಟ್ಟಿದೆ. ಎಮರ್ಜಿಂಗ್ ಏಶ್ಯ ಕಪ್‌ ನಲ್ಲಿ ಭಾರತ ‘ಎ’ ತಂಡ ಫೈನಲ್‌ ಗೆ ತಲುಪುವಲ್ಲಿ ವಿಫಲವಾಗಿದ್ದರೂ ವೈಭವ್ ಬ್ಯಾಟಿಂಗ್ ವೈಭವದಿಂದ ಮಿಂಚಿದ್ದರು.

ಎಸಿಸಿ ಪುರುಷರ ಅಂಡರ್-19 ಏಶ್ಯ ಕಪ್ ಟೂರ್ನಿಯನ್ನು ಏಕದಿನ ಮಾದರಿಯಲ್ಲಿ ಆಡಲಾಗುತ್ತಿದೆ.

ಮುಂಬೈ ಬ್ಯಾಟರ್ ಆಯುಷ್ ಮ್ಹಾತ್ರೆ ಸದ್ಯ ಉತ್ತಮ ಫಾರ್ಮ್‌ನಲ್ಲಿರದಿದ್ದರೂ ನಾಯಕನಾಗಿ ಆಯ್ಕೆಯಾಗಿದ್ದಾರೆ. 2025ರ ಆವೃತ್ತಿಯ ಐಪಿಎಲ್‌ನಲ್ಲಿ ಋತುರಾಜ್ ಗಾಯಕ್ವಾಡ್ ಬದಲಿಗೆ ಚೆನ್ನೈ ತಂಡದ ಪರ ಆಡಿದ್ದ ಆಯುಷ್ ಗಮನಾರ್ಹ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್ ಕ್ರಿಕೆಟ್ ಪ್ರವಾಸದ ವೇಳೆ ನಾಲ್ಕು ಏಕದಿನ ಪಂದ್ಯಗಳಲ್ಲಿ ಕೇವಲ 27 ರನ್ ಗಳಿಸಿದ್ದರು. ಆದರೆ ಎರಡು ಪಂದ್ಯಗಳ ಯೂತ್ ಟೆಸ್ಟ್‌ನಲ್ಲಿ 340 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡಿದ್ದರು. ಆಸ್ಟ್ರೇಲಿಯದಲ್ಲಿ ನಡೆದ 3 ಏಕದಿನ ಪಂದ್ಯಗಳಲ್ಲಿ ಕೇವಲ 10 ರನ್ ಗಳಿಸಿದ್ದರು.

ಗುರುವಾರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ವಿದರ್ಭ ವಿರುದ್ಧ 110 ಎಸೆತಗಳಲ್ಲಿ ಔಟಾಗದೆ 53 ರನ್ ಗಳಿಸುವುದರೊಂದಿಗೆ ಮುಂಬೈ ತಂಡಕ್ಕೆ ಏಳು ವಿಕೆಟ್‌ ಗಳ ಗೆಲುವು ತಂದುಕೊಟ್ಟಿದ್ದರು.

ಭಾರತ ಹಾಗೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡಗಳ ನಡುವಿನ ಗ್ರೂಪ್ ಪಂದ್ಯವು ಡಿಸೆಂಬರ್ 14ರಂದು ಎಸಿಸಿ ಅಕಾಡೆಮಿಯಲ್ಲಿ ನಡೆಯಲಿದೆ. ಭಾರತದ ಯುವ ತಂಡವು ಭಾರೀ ನಿರೀಕ್ಷೆಗಳೊಂದಿಗೆ ಪಂದ್ಯಾವಳಿಯನ್ನು ಪ್ರವೇಶಿಸಲಿದೆ.

‘ಎ’ ಗುಂಪಿನಲ್ಲಿರುವ ಭಾರತ ತಂಡವು ಪಾಕಿಸ್ತಾನ ವಿರುದ್ಧ ಹೈವೋಲ್ಟೇಜ್ ಪಂದ್ಯವನ್ನಾಡುವ ಮೊದಲು ಡಿ.12ರಂದು ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಕ್ವಾಲಿಫೈಯರ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ‘ಎ’ ಗುಂಪಿನಲ್ಲಿರುವ ಇನ್ನೆರಡು ಕ್ವಾಲಿಫೈಯರ್ ತಂಡಗಳು ಯಾವುದೆಂದು ಇನ್ನೂ ನಿರ್ಧಾರವಾಗಿಲ್ಲ.

‘ಬಿ’ ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಹಾಗೂ ಒಂದು ಕ್ವಾಲಿಫೈಯರ್ ತಂಡವಿದೆ.

ಏಶ್ಯ ಕಪ್ ಪಂದ್ಯಾವಳಿಯು ಡಿಸೆಂಬರ್ 12ರಂದು ಆರಂಭವಾಗಲಿದ್ದು, ಡಿ.21ರಂದು ಕೊನೆಯ ಪಂದ್ಯ ನಡೆಯಲಿದೆ.

ಅಂಡರ್-19 ಮಟ್ಟದ ಟೂರ್ನಿಯಲ್ಲಿ ಈ ತನಕ ಭಾರತ ತಂಡವು ಪ್ರಾಬಲ್ಯ ಸಾಧಿಸುತ್ತಾ ಬಂದಿದೆ. ಇತ್ತೀಚೆಗೆ ಅಸ್ಥಿರ ಪ್ರದರ್ಶನ ನೀಡುತ್ತಿರುವ ಭಾರತ ತಂಡವು ಈ ಬಾರಿ ಪ್ರಾದೇಶಿಕ ಮಟ್ಟದಲ್ಲಿ ತನ್ನ ಪಾರಮ್ಯವನ್ನು ಹೆಚ್ಚಿಸಿಕೊಳ್ಳುವ ಗುರಿ ಇಟ್ಟುಕೊಂಡಿದೆ.

►ಏಶ್ಯ ಕಪ್ ಟೂರ್ನಿಗೆ ಭಾರತದ ಅಂಡರ್-19 ತಂಡ

ಆಯುಷ್ ಮ್ಹಾತ್ರೆ(ನಾಯಕ), ವೈಭವ್ ಸೂರ್ಯವಂಶಿ, ವಿಹಾನ್ ಮಲ್ಹೋತ್ರಾ(ಉಪ ನಾಯಕ), ವೇದಾಂತ್ ತ್ರಿವೇದಿ, ಅಭಿಜ್ಞ ಕುಂಡು(ವಿಕೆಟ್‌ಕೀಪರ್), ಹರ್‌ವಂಶ್ ಸಿಂಗ್(ವಿಕೆಟ್ ಕೀಪರ್), ಯುವರಾಜ್ ಗೋಹಿಲ್, ಕನಿಷ್ಕ ಚೌಹಾಣ್, ಖಿಲನ್ ಎ.ಪಟೇಲ್, ನಮನ್ ಪುಷ್ಪಕ್, ಡಿ.ದೀಪೇಶ್, ಹೆನಿಲ್ ಪಟೇಲ್, ಕಿಶನ್ ಕುಮಾರ ಸಿಂಗ್, ಉದ್ದವ್ ಮೋಹನ್, ಆ್ಯರೊನ್ ಜಾರ್ಜ್.

ಮೀಸಲು ಆಟಗಾರರು: ರಾಹುಲ್ ಕುಮಾರ್, ಹೇಮಚುಡೇಶನ್, ಬಿ.ಕೆ. ಕಿಶೋರ್, ಆದಿತ್ಯ ರಾವುತ್.

ಅಂಡರ್-19 ಏಶ್ಯ ಕಪ್ ಗ್ರೂಪ್‌ ಗಳು:

ಗ್ರೂಪ್ ಎ: ಭಾರತ, ಪಾಕಿಸ್ತಾನ, ಕ್ವಾಲಿಫೈಯರ್ 1, ಕ್ವಾಲಿಫೈಯರ್ 3

ಗ್ರೂಪ್ ಬಿ: ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ, ಕ್ವಾಲಿಫೈಯರ್ 2

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News