ಇಂಡಿಗೊ ಬಿಕ್ಕಟ್ಟು: ಬಸ್ ಗಳಲ್ಲಿ ಪ್ರಯಾಣಿಸಿದ ದೇಶೀಯ ಕ್ರಿಕೆಟ್ ತಂಡಗಳು
Photo credit: PTI
ಮುಂಬೈ: ಇಂಡಿಗೊ ವಿಮಾನ ಬಿಕ್ಕಟ್ಟು ಭಾರತದ ದೇಶೀಯ ಕ್ರಿಕೆಟಿಗರ ಪ್ರಯಾಣ ಯೋಜನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಪೈಲಟ್ಗಳ ಕೊರತೆಯ ಕಾರಣ ಖಾಸಗಿ ವಿಮಾನಯಾನ ಸಂಸ್ಥೆಯು ಕಳೆದ ಕೆಲವು ದಿನಗಳಲ್ಲಿ ಸಾವಿರಾರು ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ.
ದೇಶದಲ್ಲಿ ವಿಮಾನಗಳ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಅಂಡರ್-19 ಕೂಚ್ ಬೆಹಾರ್ ಟ್ರೋಫಿ ಹಾಗೂ ಅಂಡರ್-16 ವಿಜಯ ಮರ್ಜೆಂಟ್ ಟ್ರೋಫಿ ಆಡಲಿರುವ ಬಹುತೇಕ ತಂಡಗಳು ಸಂಕಷ್ಟಕ್ಕೆ ಸಿಲುಕಿವೆ. ಆಟಗಾರರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ. ದೇಶದಾದ್ಯಂತ ಸೋಮವಾರದಿಂದ ಪಂದ್ಯಾವಳಿಗಳು ಆರಂಭವಾಗಲಿದೆ. ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆ ಹಾಗೂ ಬಂಗಾಳ ಕ್ರಿಕೆಟ್ ಸಂಸ್ಥೆ ಸಹಿತ ಕೆಲವು ರಾಜ್ಯ ಕ್ರಿಕೆಟ್ ಘಟಕಗಳು ತಮ್ಮ ತಂಡಗಳನ್ನು ರಸ್ತೆಗಳ ಮುಖಾಂತರ ಸಂಬಂಧಪಟ್ಟ ಗಮ್ಯಸ್ಥಾನಕ್ಕೆ ಕಳುಹಿಸಿಕೊಟ್ಟಿವೆ.
ಬಂಗಾಳದ ಅಂಡರ್-19 ಕ್ರಿಕೆಟ್ ತಂಡವು ಸೋಮವಾರ ಗೋವಾದ ಕಲ್ಯಾಣಿಯಲ್ಲಿ ಆಡಬೇಕಾಗಿದೆ. ಶನಿವಾರ ಬೆಳಗ್ಗೆ ಬಸ್ ಮೂಲಕ ಛತ್ತೀಸ್ಗಡದ ಭಿಲಾಯಿಯಿಂದ ತೆರಳಿದೆ.
‘‘ನಮಗೆ ಬೇರೆ ಆಯ್ಕೆ ಇರಲಿಲ್ಲ. ವಿಮಾನಗಳು ರದ್ದುಗೊಂಡ ನಂತರ ನಾವು ಛತ್ತೀಸ್ಗಡದ ಭಿಲಾಯಿಯಿಂದ ತಕ್ಷಣವೇ ಬಸ್ ವ್ಯವಸ್ಥೆ ಮಾಡಲು ನಿರ್ಧರಿಸಿದ್ದೆವು. ತಂಡವನ್ನು ಕಲ್ಯಾಣಿಗೆ ಕರೆ ತಂದಿದ್ದೇವೆ. ಪಂದ್ಯಕ್ಕೆ ತಯಾರಿ ನಡೆಸಲು ಸಮಯದ ಕೊರತೆ ಎದುರಾಗುವ ಹಿನ್ನೆಲೆಯಲ್ಲಿ ನಮಗಿದು ಒಂದೇ ಪರಿಹಾರವಾಗಿತ್ತು’’ಎಂದು ಸಿಎಬಿ ಖಜಾಂಚಿ ಸಂಜಯ ದಾಸ್ ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಶುಕ್ರವಾರ ಸುಮಾರು 8 ಗಂಟೆಗಳ ಕಾಲ ಸಿಲುಕಿಕೊಂಡ ನಂತರ ಜಮ್ಮು-ಕಾಶ್ಮೀರದ ಅಂಡರ್-16 ತಂಡವು ಲಕ್ಸುರಿ ಬಸ್ ನಲ್ಲಿ ಸೂರತ್ ಗೆ ತೆರಳಿದೆ. ಎಲ್ಲ ವಿಮಾನಗಳು ರದ್ದುಗೊಂಡ ನಂತರ ಅಂಡರ್-19 ತಂಡವು ಜಮ್ಮುವಿನಿಂದ ನಾಗಪುರಕ್ಕೆ ಬಸ್ ನಲ್ಲಿ ತೆರಳಿದೆ. ಜಮ್ಮು ತಂಡವು ನಾಗಪುರದಲ್ಲಿ ಸೋಮವಾರ ವಿದರ್ಭ ತಂಡವನ್ನು ಎದುರಿಸಲಿದೆ.
ವಿಮಾನ ಹಾರಾಟ ರದ್ದತಿಯಿಂದಾಗಿ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ದೈಹಿಕ ಹಾಗೂ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮಬೀರಿದೆ. ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಆರ್ಥಿಕವಾಗಿ ಹೊಡೆತ ನೀಡಿದೆ. ಪರ್ಯಾಯ ವ್ಯವಸ್ಥೆಗಳಿಗೆ ಹೆಚ್ಚಿನ ಹಣ ವ್ಯಯಿಸಬೇಕಾಗಿದೆ.
ಮುಂದಿನ ಕೆಲವೇ ದಿನಗಳಲ್ಲಿ ಸೀನಿಯರ್ ತಂಡಗಳು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ನಾಕೌಟ್ ಪಂದ್ಯಗಳು ಹಾಗೂ ವಿಜಯ ಹಝಾರೆ ಟ್ರೋಫಿ ಟೂರ್ನಿಯನ್ನು ಆಡಲು ಪ್ರಯಾಣಿಸಲಿವೆ. ಆ ವೇಳೆಗೆ ಪರಿಸ್ಥಿತಿ ತಹಬಂದಿಗೆ ಬರುವ ವಿಶ್ವಾಸದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಗಳಿವೆ.