ಇಂಡೋನೇಶ್ಯ ಮಾಸ್ಟರ್ಸ್ ಸೂಪರ್-500 ; ಭಾರತಕ್ಕೆ ಎಚ್.ಎಸ್.ಪ್ರಣಯ್ ನಾಯಕತ್ವ
ಎಚ್.ಎಸ್. ಪ್ರಣಯ್ | Photo: X
ಹೊಸದಿಲ್ಲಿ: ಡಬಲ್ಸ್ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಅನುಪಸ್ಥಿತಿಯಲ್ಲಿ ಇಂಡೋನೇಶ್ಯ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಭಾರತ ತಂಡದ ಸವಾಲನ್ನು ಸಿಂಗಲ್ಸ್ ಆಟಗಾರ ಎಚ್.ಎಸ್. ಪ್ರಣಯ್ ಮುನ್ನಡೆಸಲಿದ್ದಾರೆ.
ಹಾಲಿ ಏಶ್ಯನ್ ಗೇಮ್ಸ್ ಚಾಂಪಿಯನ್ ಸಾತ್ವಿಕ್-ಚಿರಾಗ್ ತಮ್ಮ ಕೆಲಸದ ಒತ್ತಡವನ್ನು ನಿಭಾಯಿಸಲು ಈ ಟೂರ್ನಮೆಂಟ್ ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ವಿಶ್ವದ ನಂ.9ನೇ ಆಟಗಾರ ಪ್ರಣಯ್ 32 ಆಟಗಾರರನ್ನು ಒಳಗೊಂಡ ಪುರುಷರ ಸಿಂಗಲ್ಸ್ ಡ್ರಾನಲ್ಲಿ 7ನೇ ಶ್ರೇಯಾಂಕ ಪಡೆದ ಭಾರತದ ಏಕೈಕ ಆಟಗಾರನಾಗಿದ್ದಾರೆ. ಪ್ರಣಯ್ ಸಿಂಗಾಪುರದ ಲೊಹ್ ಕೀನ್ ಯೀವ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಯೀವ್ ವಿರುದ್ಧ ಪ್ರಣಯ್ 4-1 ಗೆಲುವು-ಸೋಲಿನ ದಾಖಲೆ ಹೊಂದಿದ್ದಾರೆ.
ಪ್ರಣಯ್ ಇತ್ತೀಚೆಗಿನ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಮಲೇಶ್ಯ ಸೂಪರ್-1000 ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಗಿದ್ದರು. ಇಂಡಿಯಾ ಓಪನ್ ನಲ್ಲಿ ಸೆಮಿ ಫೈನಲ್ ಗೆ ತಲುಪಿದ್ದರು.
ಮಲೇಶ್ಯ ಸೂಪರ್-1000 ಹಾಗೂ ಇಂಡಿಯಾ ಓಪನ್ ಸೂಪರ್ 750 ಟೂರ್ನಿಗಳಲ್ಲಿ ಸತತವಾಗಿ ರನ್ನರ್ಸ್ ಅಪ್ ಪ್ರಶಸ್ತಿ ಪಡೆದಿದ್ದ ಸಾತ್ವಿಕ್ ಹಾಗೂ ಚಿರಾಗ್ ಅನುಪಸ್ಥಿತಿಯಲ್ಲಿ ಈ ಟೂರ್ನಮೆಂಟ್ ಕಳೆಗುಂದಿದೆ. ಪ್ರಣಯ್ ಟೂರ್ನಿಯಲ್ಲಿ ಭಾರತದ ಧ್ವಜವನ್ನು ಎತ್ತರಕ್ಕೆ ಹಾರಿಸುವ ಗುರಿ ಇಟ್ಟುಕೊಂಡಿದ್ದಾರೆ.
ವಿಶ್ವದ ನಂ.19ನೇ ಆಟಗಾರ ಲಕ್ಷ್ಯ ಸೇನ್ ಚೀನಾದ ವೆಂಗ್ ಹಾಂಗ್ ಯಾಂಗ್ ವಿರುದ್ಧ ಆರಂಭಿಕ ಸುತ್ತಿನ ಸೋಲಿನ ಚಾಳಿಯಿಂದ ಹೊರಬರುವ ವಿಶ್ವಾಸದಲ್ಲಿದ್ದಾರೆ. ವಿಶ್ವದ ನಂ.25ನೇ ರ್ಯಾಂ ಕಿನಲ್ಲಿರುವ ಕೆ.ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಮಲೇಶ್ಯದ ಲೀ ಝಿ ಜಿಯಾರನ್ನು ಎದುರಿಸಲಿದ್ದಾರೆ.
ಎಂ.ಆರ್.ಅರ್ಜುನ್ ಹಾಗೂ ಧ್ರುವ್ ಕಪಿಲಾ ಪುರುಷರ ಡಬಲ್ಸ್ ನಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಿದ್ದಾರೆ. ಮಹಿಳೆಯರ ಡಬಲ್ಸ್ ಹಾಗೂ ಮಿಕ್ಸೆಡ್ ಡಬಲ್ಸ್ ನಲ್ಲಿ ಭಾರತದಿಂದ ಯಾರೂ ಪ್ರತಿನಿಧಿಸುತ್ತಿಲ್ಲ.