IPL 2025 | ನಾಳೆ ಲಕ್ನೊ ಎದುರಾಳಿ ಅಂಕಪಟ್ಟಿಯಲ್ಲಿ ಅಗ್ರ-2ರತ್ತ ಗುಜರಾತ್ ಟೈಟಾನ್ಸ್ ಚಿತ್ತ
PC : X
ಅಹ್ಮದಾಬಾದ್ : ಪ್ಲೇ ಆಫ್ ಸುತ್ತಿಗೆ ತೇರ್ಗಡೆಯಾಗುವುದರೊಂದಿಗೆ ಗುಜರಾತ್ ಟೈಟಾನ್ಸ್ 2025ರ ಆವೃತ್ತಿಯ ಐಪಿಎಲ್‌ನಲ್ಲಿ ತನ್ನ ಮೊದಲ ಪ್ರಮುಖ ಗುರಿಯನ್ನು ತಲುಪಿದೆ. ಆದರೆ ಲೀಗ್ ಹಂತದಲ್ಲಿ ಗುಜರಾತ್ ತಂಡದ ಕೆಲಸ ಇನ್ನೂ ಬಾಕಿ ಇದೆ. ಅದು ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಖಚಿತಪಡಿಸುವತ್ತ ಚಿತ್ತಹರಿಸಿದೆ. 2022 ಹಾಗೂ 2023ರ ಆವೃತ್ತಿಯ ಐಪಿಎಲ್‌ನಲ್ಲಿ ಫೈನಲ್‌ಗೆ ತಲುಪಿದಾಗ ಗುಜರಾತ್ ತಂಡವು ಲೀಗ್ ಹಂತದಲ್ಲಿ ಅಗ್ರ ಸ್ಥಾನ ಪಡೆದಿತ್ತು. ಒಂದೊಮ್ಮೆ ಉಳಿದಿರುವ ಎರಡೂ ಪಂದ್ಯಗಳನ್ನು ಗೆದ್ದರೆ, ಹಿಂದಿನ ಸಾಧನೆಯನ್ನು ಪುನರಾವರ್ತಿಸಲಿದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಿಡಲು ತವರು ಮೈದಾನದಲ್ಲಿ ಗುರುವಾರ ಲಕ್ನೊ ಸೂಪರ್ ಜಯಂಟ್ಸ್ ತಂಡವನ್ನು ಎದುರಿಸಲಿದೆ.
ಗುಜರಾತ್ ತಂಡವು ತನ್ನ ಎದುರಾಳಿ ನೀಡುವ ಸವಾಲಿನ ಬಗ್ಗೆ ಚಿಂತಿತವಾಗಿದೆ. ಈ ಋತುವಿನಲ್ಲಿ ಗುಜರಾತ್ ಅನುಭವಿಸಿದ 3 ಸೋಲುಗಳ ಪೈಕಿ ಒಂದನ್ನು ಲಕ್ನೊ ತಂಡದ ವಿರುದ್ಧ ಎದುರಿಸಿದೆ.
ಆ ಪಂದ್ಯದಲ್ಲಿ ಶುಭಮನ್ ಗಿಲ್ ಹಾಗೂ ಸುದರ್ಶನ್ ಅರ್ಧಶತಕ ಗಳಿಸಿದ್ದರು. ಆದರೆ ಗುಜರಾತ್ 12 ಓವರ್‌ಗಳಲ್ಲಿ 120 ರನ್ ಗಳಿಸಿದ್ದಾಗ ಈ ಇಬ್ಬರು 7 ಎಸೆತಗಳಲ್ಲಿ ಪೆವಿಲಿಯನ್‌ಗೆ ಸೇರಿದ್ದರು. ಮಧ್ಯಮ ಸರದಿ ವೈಫಲ್ಯ ಕಂಡ ಪರಿಣಾಮ ಗುಜರಾತ್ 6 ವಿಕೆಟ್ ನಷ್ಟಕ್ಕೆ ಕೇವಲ 180 ರನ್ ಗಳಿಸಿತ್ತು. ನಾಕೌಟ್ ಹಂತಕ್ಕಿಂತ ಮೊದಲು ಗುಜರಾತ್ ತಂಡವು ತನ್ನ ಮಧ್ಯಮ ಸರದಿಯನ್ನು ಇನ್ನಷ್ಟು ಪರೀಕ್ಷಿಸಲು ಬಯಸಿದೆ. ನಾಕೌಟ್ ಸುತ್ತಿನಲ್ಲಿ ಜೋಸ್ ಬಟ್ಲರ್ ಲಭ್ಯವಿರಲಾರರು.
ಟೀಮ್ ನ್ಯೂಸ್
ಕಳೆದ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಗೆದ್ದಿರುವ ಆಡುವ 11ರ ಬಳಗದಲ್ಲಿ ಗುಜರಾತ್ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಈ ವರ್ಷ ಎಲ್ಲ ಪಂದ್ಯಗಳನ್ನು ಆಡಿರುವ ಮುಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ ಕೃಷ್ಣ ಪೈಕಿ ಒಬ್ಬರಿಗೆ ವಿರಾಮ ನೀಡಬಹುದು. ಇನ್ನೂ ಅಗ್ರ-2 ಸ್ಥಾನ ಖಚಿತವಾಗದ ಹಿನ್ನೆಲೆಯಲ್ಲಿ ಸಿಎಸ್‌ಕೆ ವಿರುದ್ಧ ಪಂದ್ಯದಲ್ಲಿ ಈ ಕುರಿತು ಗುಜರಾತ್ ತಂಡ ನಿರ್ಧರಿಸಬಹುದು.
ಈ ವರ್ಷ ಆಟಗಾರರ ಗಾಯದ ಸಮಸ್ಯೆಯಿಂದ ಕಂಗಾಲಾಗಿದ್ದ ಲಕ್ನೊ ತಂಡವು ದಿಗ್ವೇಶ್ ರಾಠಿ ಅನುಪಸ್ಥಿತಿಯಲ್ಲಿ ಆಡಬೇಕಾಗಿದೆ. ಈ ವರ್ಷ 3ನೇ ಬಾರಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ರಾಠಿ ಒಂದು ಪಂದ್ಯದಿಂದ ನಿಷೇದಕ್ಕೆ ಒಳಗಾಗಿದ್ದಾರೆ. ಎಡಗೈ ಸ್ಪಿನ್ನರ್ ಶಹಬಾಝ್ ಅಹ್ಮದ್ ಹಾಗೂ ಎಂ.ಸಿದ್ದಾರ್ಥ್ ಲೆಗ್ ಸ್ಪಿನ್ನರ್ ಬದಲಿಗೆ ಆಡುವ ರೇಸ್‌ನಲ್ಲಿದ್ದಾರೆ.
ಪಿಚ್ ಹಾಗೂ ವಾತಾವರಣ
ಈ ವರ್ಷ ನರೇಂದ್ರ ಮೋದಿ ಸ್ಟೇಡಿಯಮ್‌ನಲ್ಲಿ ಆಡಿರುವ 5 ಪಂದ್ಯಗಳ ಪೈಕಿ ಮೊದಲು ಬ್ಯಾಟಿಂಗ್ ಮಾಡಿದ್ದ ತಂಡವು 4 ಬಾರಿ ಜಯ ಸಾಧಿಸಿದೆ. ಈ ಮಧ್ಯೆ ಗುಜರಾತ್ ತಂಡವು 204 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದೆ. ಪಿಚ್ ಸ್ಪಿನ್ನರ್‌ಗಳಿಗೆ ಹೋಲಿಸಿದರೆ ವೇಗದ ಬೌಲರ್‌ಗಳಿಗೆ ಫೇವರ್ ಆಗಿದೆ.
ಅಂಕಿ-ಅಂಶ
ಗುಜರಾತ್ ತಂಡವು ಈ ವರ್ಷದ ಐಪಿಎಲ್‌ನಲ್ಲಿ ಅಗ್ರ ಸರದಿಯಲ್ಲಿ(1ರಿಂದ3)ಶ್ರೇಷ್ಠ ಸರಾಸರಿ(62.35) ಹೊಂದಿದೆ. ಆದರೆ ಮಧ್ಯಮ ಸರದಿಯ(4ರಿಂದ7) ಸರಾಸರಿ ಲೀಗ್‌ನಲ್ಲಿ ಕನಿಷ್ಠವಾಗಿದೆ.
► ಗಿಲ್ ಹಾಗೂ ಸುದರ್ಶನ್ ಐಪಿಎಲ್ ಋತುವಿನಲ್ಲಿ ಒಂದೇ ತಂಡದ ಪರ 600ಕ್ಕೂ ಅಧಿಕ ರನ್ ಗಳಿಸಿದ ಐದನೇ ಜೋಡಿಯಾಗಿದೆ. ಆರ್‌ಸಿಬಿ, ಸಿಎಸ್‌ಕೆ ನಂತರ ಒಂದೇ ಋತುವಿನಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ ಇಬ್ಬರು ಆಟಗಾರರನ್ನು ಹೊಂದಿರುವ 3ನೇ ತಂಡ ಗುಜರಾತ್.
ತಂಡಗಳು
► ಗುಜರಾತ್ ಟೈಟಾನ್ಸ್(ಸಂಭಾವ್ಯ 12): ಶುಭಮನ್ ಗಿಲ್(ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್(ವಿಕೆಟ್‌ಕೀಪರ್), ಶೆರ್ಫಾನ್ ರುದರ್‌ಫೋರ್ಡ್, ಶಾರುಕ್ ಖಾನ್, ರಾಹುಲ್ ಟೆವಾಟಿಯ, ರಶೀದ್ ಖಾನ್, ಕಾಗಿಸೊ ರಬಾಡ, ಅರ್ಷದ್ ಖಾನ್, ಸಾಯಿ ಕಿಶೋರ್, ಮುಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ
► ಲಕ್ನೊ ಸೂಪರ್ ಜಯಂಟ್ಸ್(ಸಂಭಾವ್ಯ 12): ಮಿಚೆಲ್ ಮಾರ್ಷ್, ಮರ್ಕ್ರಮ್, ರಿಷಬ್ ಪಂತ್(ನಾಯಕ, ವಿಕೆಟ್‌ಕೀಪರ್), ನಿಕೊಲಸ್ ಪೂರನ್, ಆಯುಷ್ ಬದೋನಿ, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯಿ, ಆಕಾಶ್ ದೀಪ್, ಅವೇಶ್ ಖಾನ್, ಶಹಬಾಝ್ ಅಹ್ಮದ್/ಮಣಿಮಾರನ್ ಸಿದ್ದಾರ್ಥ್, ವಿಲ್ ಒ’ರೂರ್ಕಿ.