IPL 2025 | ಡೆಲ್ಲಿ ಕ್ಯಾಪಿಟಲ್ಸ್, ಸನ್‌ರೈಸರ್ಸ್ ಹೈದರಾಬಾದ್ ಪಂದ್ಯ ಮಳೆಗಾಹುತಿ
PC | X@IPL
ಹೈದರಾಬಾದ್ : ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ 55ನೇ ಐಪಿಎಲ್ ಪಂದ್ಯವು ಮಳೆಗಾಹುತಿಯಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ತಂಡಗಳು ತಲಾ 1 ಅಂಕವನ್ನು ಹಂಚಿಕೊಂಡಿವೆ.
ಸೋಮವಾರ ಟಾಸ್ ಜಯಿಸಿದ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡರು.
ಪ್ಯಾಟ್ ಕಮಿನ್ಸ್(3-19) ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರೆ ಹೈದರಾಬಾದ್ ತಂಡ ರನ್ ಚೇಸ್‌ಗೆ ತೊಡಗುವ ಮೊದಲೇ ಜೋರಾಗಿ ಮಳೆ ಸುರಿಯಿತು. ಮಳೆ ನಿಂತರೂ ಮೈದಾನದಲ್ಲಿ ಮಳೆ ನೀರು ತುಂಬಿದ್ದ ಕಾರಣ ಅಂಪೈರ್‌ಗಳು ಉಭಯ ತಂಡದ ನಾಯಕರೊಂದಿಗೆ ಚರ್ಚಿಸಿ ಪಂದ್ಯವನ್ನು ರದ್ದುಪಡಿಸಿದರು.
ಪಂದ್ಯದಲ್ಲಿ ಫಲಿತಾಂಶ ಬಾರದ ಕಾರಣ ಹೈದರಾಬಾದ್ ತಂಡವು ಪ್ರಸಕ್ತ ಟೂರ್ನಿಯ ಪ್ಲೇ ಆಫ್ ಸ್ಪರ್ಧೆಯಿಂದ ನಿರ್ಗಮಿಸಿದ 3ನೇ ತಂಡ ಎನಿಸಿಕೊಂಡಿದೆ. ಈಗಾಗಲೇ ಸಿಎಸ್‌ಕೆ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಪ್ಲೇ ಆಫ್ ಸ್ಪರ್ಧೆಯಿಂದ ಹೊರಬಿದ್ದಿವೆ.
ಮಳೆಯಿಂದಾಗಿ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಡೆಲ್ಲಿ ತಂಡವು ನಿಟ್ಟುಸಿರುಬಿಟ್ಟಿದ್ದು, ಒಂದು ಅಂಕ ಜೇಬಿಗಿಳಿಸಿದೆ.
ಡೆಲ್ಲಿ ಇನಿಂಗ್ಸ್‌ನ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಕರುಣ್ ನಾಯರ್(0)ವಿಕೆಟ್ ಉರುಳಿತು. ಕಮಿನ್ಸ್ ಅವರು ನಾಯರ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. 2.1ನೇ ಓವರ್‌ನಲ್ಲಿ ಎಫ್ ಡು ಪ್ಲೆಸಿಸ್(3 ರನ್)ಹಾಗೂ 4.1ನೇ ಓವರ್‌ನಲ್ಲಿ ಅಭಿಷೇಕ್ ಪೊರೆಲ್(8 ರನ್)ವಿಕೆಟನ್ನು ಕಬಳಿಸಿದ ಕಮಿನ್ಸ್ ಡೆಲ್ಲಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಈ ಹಂತದಲ್ಲಿ ಡೆಲ್ಲಿ ತಂಡವು 3 ವಿಕೆಟ್ ನಷ್ಟಕ್ಕೆ 15 ರನ್ ಗಳಿಸಿತು.
ನಾಯಕ ಅಕ್ಷರ್ ಪಟೇಲ್(6 ರನ್)ಹಾಗೂ ಕೆ.ಎಲ್.ರಾಹುಲ್(10 ರನ್)ವಿಕೆಟ್ ಒಪ್ಪಿಸಿದಾಗ ಡೆಲ್ಲಿ 8ನೇ ಓವರ್‌ನಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 29 ರನ್ ಗಳಿಸಿತ್ತು. ಆಗ 6ನೇ ವಿಕೆಟ್‌ಗೆ 33 ರನ್ ಸೇರಿಸಿದ ವಿಪ್ರಜ್ ನಿಗಮ್ (18 ರನ್)ಹಾಗೂ ಟ್ರಿಸ್ಟನ್ ಸ್ಟಬ್ಸ್(ಔಟಾಗದೆ 41,36 ಎಸೆತ, 4 ಬೌಂಡರಿ)ಇನಿಂಗ್ಸ್ ರಿಪೇರಿಗೆ ಯತ್ನಿಸಿದರು. ನಿಗಮ್ 18 ರನ್ ಗಳಿಸಿ ರನೌಟಾದರು.
7ನೇ ವಿಕೆಟ್‌ಗೆ 45 ಎಸೆತಗಳಲ್ಲಿ 66 ರನ್ ಜೊತೆಯಾಟದಲ್ಲಿ ಭಾಗಿಯಾದ ಸ್ಟಬ್ಸ್ ಹಾಗೂ ಅಶುತೋಶ್ ಶರ್ಮಾ(41 ರನ್, 26 ಎಸೆತ, 2 ಬೌಂಡರಿ, 3 ಸಿಕ್ಸರ್)ತಂಡವು ಗೌರವಾರ್ಹ ಮೊತ್ತ ಗಳಿಸುವಲ್ಲಿ ನೆರವಾದರು. 26 ಎಸೆತಗಳಲ್ಲಿ 3 ಸಿಕ್ಸರ್‌ಗಳ ಸಹಿತ 41 ರನ್ ಗಳಿಸಿದ ಅಶುತೋಶ್ ಡೆಲ್ಲಿ ತಂಡವು ಕೊನೆಯ 6 ಓವರ್‌ಗಳಲ್ಲಿ 61 ರನ್ ಗಳಿಸಲು ಕಾರಣರಾದರು.
ಕಮಿನ್ಸ್ ಯಶಸ್ವಿ ಪ್ರದರ್ಶನ ನೀಡಿದರೆ, ಜಯದೇವ್ ಉನದ್ಕಟ್(1-13), ಇಶಾನ್ ಮಾಲಿಂಗ(1-28)ಹಾಗೂ ಹರ್ಷಲ್ ಪಟೇಲ್(1-36)ತಲಾ ಒಂದು ವಿಕೆಟ್‌ಗಳನ್ನು ಪಡೆದರು.
ಇಶಾನ್ ಕಿಶನ್ ಅವರು ಕ್ಲಾಸೆನ್ ಬದಲಿಗೆ ಈ ವರ್ಷ ಮೊದಲ ಬಾರಿ ವಿಕೆಟ್‌ಕೀಪಿಂಗ್ ನಡೆಸಿದ್ದು, 3 ಕ್ಯಾಚ್‌ಗಳನ್ನು ಪಡೆದರು.
ನಿತಿಶ್ ಕುಮಾರ್ ರೆಡ್ಡಿ ಹಾಗೂ ಮುಹಮ್ಮದ್ ಶಮಿ ಅವರನ್ನು ಕೈಬಿಟ್ಟಿರುವ ಎಸ್‌ಆರ್‌ಎಚ್ ತಂಡವು ಕೇರಳದ ಅಗ್ರ ಸರದಿಯ ಬ್ಯಾಟರ್ ಸಚಿನ್ ಬೇಬಿಗೆ ಈ ವರ್ಷದ ಐಪಿಎಲ್‌ನಲ್ಲಿ ಮೊದಲ ಬಾರಿ ಅವಕಾಶ ನೀಡಿದೆ. ಅಭಿನವ್ ಮನೋಹರ್ ಮಧ್ಯಮ ಸರದಿಗೆ ವಾಪಸಾಗಿದ್ದಾರೆ.
ಎಡಗೈ ವೇಗಿ ನಟರಾಜನ್ ಇದೇ ಮೊದಲ ಬಾರಿ ಡೆಲ್ಲಿ ಪರ ಆಡುವ ಅವಕಾಶ ಪಡೆದಿದ್ದಾರೆ. ತಮಿಳುನಾಡಿನ ಬೌಲರ್ ಮುಕೇಶ್ ಕುಮಾರ್ ಬದಲಿಗೆ ಆಡಲಿದ್ದಾರೆ. ಎಸ್‌ಆರ್‌ಎಚ್ ಓರ್ವ ಸ್ಪಿನ್ನರ್ ಝೀಶನ್ ಅನ್ಸಾರಿಗೆ ಮಣೆ ಹಾಕಿದರೆ, ಡೆಲ್ಲಿ ತಂಡವು ಕುಲದೀಪ್ ಯಾದವ್, ವಿಪ್ರಜ್ ನಿಗಮ್ ಹಾಗೂ ನಾಯಕ ಅಕ್ಷರ್ ಪಟೇಲ್‌ರೊಂದಿಗೆ ಕಣಕ್ಕಿಳಿದಿದೆ.
ಸಂಕ್ಷಿಪ್ತ ಸ್ಕೋರ್
ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 133/7
(ಟ್ರಿಸ್ಟನ್ ಸ್ಟಬ್ಸ್ ಔಟಾಗದೆ 41, ಅಶುತೋಶ್ ಶರ್ಮಾ 41, ಪ್ಯಾಟ್ ಕಮಿನ್ಸ್ 3-19, ಉನದ್ಕಟ್ 1-13, ಮಾಲಿಂಗ 1-28)