×
Ad

ಐಪಿಎಲ್ 2025 | ಪಂದ್ಯಾವಳಿಯ ರೋಚಕತೆಯನ್ನು ಹೆಚ್ಚಿಸುವುದಕ್ಕಾಗಿ ಹೊಸ ನಿಯಮಗಳು

Update: 2025-03-20 22:11 IST

PC :iplt20.com

ಹೊಸದಿಲ್ಲಿ: ಪಂದ್ಯಾವಳಿಯ ರೋಚಕತೆಯನ್ನು ಹೆಚ್ಚಿಸುವುದಕ್ಕಾಗಿ ಹಲವು ವರ್ಷಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ‘ಸ್ಟ್ರಾಟಜಿಕ ಟೈಮೌಟ್’ ಮತ್ತು ‘ಇಂಪ್ಯಾಕ್ಟ್ ಪ್ಲೇಯರ್’ ಮುಂತಾದ ಹಲವು ಹೊಸತನದ ನಿಯಮಗಳನ್ನು ಜಾರಿಗೊಳಿಸಿದೆ.

ಐಪಿಎಲ್ 2025ಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಇನ್ನೂ ಹಲವು ನಿಯಮಗಳನ್ನು ಪರಿಚಯಿಸಿದೆ ಮತ್ತು ಕೆಲವು ನಿಯಮಗಳನ್ನು ಉಳಿಸಿಕೊಂಡಿದೆ.

ಅದಕ್ಕೆ ಸಂಬಂಧಿಸಿದ ವಿವರಗಳು ಇಲ್ಲಿವೆ:

► ಜೊಲ್ಲು ನಿಷೇಧ ತೆರವು:

ಐಪಿಎಲ್ 2025ರಲ್ಲಿ ಚೆಂಡಿನ ಮೇಲೆ ಜೊಲ್ಲು ಬಳಸಲು ಬೌಲರ್‌ಗಳಿಗೆ ಅನುಮತಿ ನೀಡಲಾಗುವುದು. ಎಲ್ಲಾ 10 ತಂಡಗಳ ನಾಯಕರೊಂದಿಗೆ ಚರ್ಚೆ ನಡೆಸಿದ ಬಳಿಕ ಬಹುಮತದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಕೋವಿಡ್-19 ಸಾಂಕ್ರಾಮಿಕದ ವೇಳೆ ಆರೋಗ್ಯಕ್ಕೆ ಬೆದರಿಕೆಯ ಹಿನ್ನೆಲೆಯಲ್ಲಿ ಜೊಲ್ಲು ನಿಷೇಧವನ್ನು ವಿಧಿಸಲಾಗಿತ್ತು. ಈಗ ಸಾಂಕ್ರಾಮಿಕದ ನಿರ್ಬಂಧಗಳು ತೆರವುಗೊಂಡ ಬಳಿಕ, ಈ ಅಭ್ಯಾಸವನ್ನು ಮುಂದುವರಿಸಲು ಬೌಲರ್‌ಗಳಿಗೆ ಅವಕಾಶ ನೀಡಲಾಗಿದೆ.

► ‘ಸೆಕಂಡ್ ಬಾಲ್’ ನಿಯಮ:

‘ಸೆಕಂಡ್ ಬಾಲ್’ ಎಂಬ ನಿಯಮವನ್ನು ಈ ಬಾರಿ ಜಾರಿಗೊಳಿಸಲಾಗುತ್ತಿದೆ. ರಾತ್ರಿ ಪಂದ್ಯಗಳಲ್ಲಿ ಮಂಜಿನ ಪರಿಣಾಮಗಳನ್ನು ಎದುರಿಸಲು ಇದನ್ನು ಜಾರಿಗೆ ತರಲಾಗಿದೆ.

ಚೆಂಡಿನ ಮೇಲೆ ಕೈಯಿಂದ ಹಿಡಿತ ಸಾಧಿಸುವ ಬೌಲರ್‌ಗಳ ಸಾಮರ್ಥ್ಯವನ್ನು ಮಂಜು ಕುಗ್ಗಿಸುತ್ತದೆ. ಇದು ಮುಖ್ಯವಾಗಿ ರನ್ ಬೆನ್ನತ್ತುವ ಸಂದರ್ಭಗಳಲ್ಲಿ ಬ್ಯಾಟರ್‌ಗಳಿಗೆ ಅನುಚಿತ ಪ್ರಯೋಜನವನ್ನು ಒದಗಿಸುತ್ತದೆ. ಈ ನಿಟ್ಟಿನಲ್ಲಿ, ಎರಡನೇ ಇನಿಂಗ್ಸ್‌ನ 11ನೇ ಓವರ್ ಬಳಿಕ ಅಂಪೈರ್‌ಗಳು ಚೆಂಡಿನ ಸ್ಥಿತಿಯನ್ನು ಪರಿಶೀಲಿಸುತ್ತಾರೆ. ಅಧಿಕ ಮಂಜು ಗೋಚರಿಸಿದರೆ, ಬೌಲಿಂಗ್ ತಂಡಕ್ಕೆ ಹೊಸ ಚೆಂಡನ್ನು ಕೊಡಲಾಗುತ್ತದೆ. ಆದರೆ, ಈ ನಿಯಮವು ಮಧ್ಯಾಹ್ಯ ನಡೆಯುವ ಪಂದ್ಯಗಳಿಗೆ ಅನ್ವಯಿಸುವುದಿಲ್ಲ.

►ಇಂಪ್ಯಾಕ್ಟ್ ಪ್ಲೇಯರ್ ನಿಯಮ ಮುಂದುವರಿಕೆ:

ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಈ ಋತುವಿನಲ್ಲೂ ಮುಂದುವರಿಯುತ್ತದೆ. ಪಂದ್ಯವೊಂದರ ನಡುವೆ, ಒಬ್ಬ ಆಟಗಾರನನ್ನು ಬದಲಿಸಲು ಈ ನಿಯಮವು ತಂಡಗಳಿಗೆ ಅವಕಾಶ ನೀಡುತ್ತದೆ. ಆಡಲು ಅವಕಾಶ ಸಿಗದ ಹೊಸಬರಿಗೆ ಅವಕಾಶಗಳನ್ನು ನೀಡುವ ದೃಷ್ಟಿಯಿಂದ ಈ ನಿಯಮವನ್ನು ತರಲಾಗಿದೆ.

► ಎತ್ತರದ ಮತ್ತು ಆಫ್‌ಸೈಡ್ ವೈಡ್‌ಗಳಿಗೂ ಡಿಆರ್‌ಎಸ್:

ತೀರ್ಪು ಮರುಪರಿಶೀಲನಾ ವ್ಯವಸ್ಥೆಯ(ಡಿಆರ್‌ಎಸ್)ವ್ಯಾಪ್ತಿಗೆ ಇನ್ನು ಎತ್ತರದ ನೋಬಾಲ್ ಮತ್ತು ಆಫ್-ಸ್ಟಂಪ್ ಔಟ್‌ಸೈಡ್ ವೈಡ್‌ಗಳನ್ನು ತರಲಾಗುವುದು. ಹಾಕ್-ಐ ಮತ್ತು ಬಾಲ್ ಟ್ರ್ಯಾಕಿಂಗ್ ತಂತ್ರಜ್ಞಾನಗಳನ್ನು ಬಳಸಿ ಅಂಪೈರ್‌ಗಳು ನಿಖರ ತೀರ್ಪು ನೀಡಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News