IPL 2025 | RCBಯ ಕಳಪೆ ಬ್ಯಾಟಿಂಗ್ ಪ್ರದರ್ಶನಕ್ಕೆ ವಿರೇಂದ್ರ ಸೆಹ್ವಾಗ್ ತರಾಟೆ
ವಿರೇಂದ್ರ ಸೆಹ್ವಾಗ್ (PTI)
ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ನೀಡಿದ ಕಳಪೆ ಬ್ಯಾಟಿಂಗ್ ಪ್ರದರ್ಶನದ ಕಾರಣಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರಿನ ಪ್ರೇಕ್ಷಕರೆದುರೇ ಹೀನಾಯ ಸೋಲು ಅನುಭವಿಸುವಂತಾಯಿತು. ಇದರ ಬೆನ್ನಿಗೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ತರಾಟೆಗೆ ತೆಗೆದುಕೊಂಡ ಮಾಜಿ ಭಾರತೀಯ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಿಗೆ ಸಾಮಾನ್ಯ ಜ್ಞಾನವೂ ಇಲ್ಲ ಎಂದು ಹರಿಹಾಯ್ದಿದ್ದಾರೆ.
ಮಳೆಯಿಂದಾಗಿ ಎರಡು ಗಂಟೆಗಳ ಕಾಲ ತಡವಾಗಿ ಆರಂಭಗೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ನಿಗದಿತ 14 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 95 ರನ್ ಗಳಿಸಲಷ್ಟೆ ಶಕ್ತವಾಯಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರರಾದ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲ ಬ್ಯಾಟರ್‌ಗಳೂ ದುಡುಕಿನ ಹೊಡೆತಕ್ಕೆ ಕೈ ಹಾಕಿ ತಮ್ಮ ವಿಕೆಟ್‌ಗಳನ್ನು ಕೈ ಚೆಲ್ಲಿದರು. ತಂಡದ ನಾಯಕ ರಜತ್ ಪಾಟೀದಾರ್ ಹಾಗೂ ಟಿಮ್ ಡೇವಿಡ್‌ರ ಅಲ್ಪ ಕಾಣಿಕೆಯಿಂದಾಗಿಯಷ್ಟೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊತ್ತ 9 ವಿಕೆಟ್ ನಷ್ಟಕ್ಕೆ 95 ರನ್‌ಗಳಿಗೆ ತಲುಪಲು ಸಾಧ್ಯವಾಯಿತು. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಂದ್ರ ಶರ್ಮ ಹಾಗೂ ಕೃನಾಲ್ ಪಾಂಡ್ಯ ಅಕ್ಷರಶಃ ತಮ್ಮ ವಿಕೆಟ್‌ಗಳನ್ನು ಕೈ ಚೆಲ್ಲಿದರು. ಈ ಸುಲಭ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು ಕೇವಲ 12.1 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ದಾಟಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರಿನಲ್ಲೇ ನೀಡಿದ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ತರಾಟೆಗೆ ತೆಗೆದುಕೊಂಡ ಮಾಜಿ ಭಾರತೀಯ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, "ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಪ್ರತಿಯೊಬ್ಬರೂ ಔಟಾಗಲೆಂಬಂತೆಯೆ ಬೇಜವಾಬ್ದಾರಿ ಹೊಡೆತಗಳಿಗೆ ಕೈ ಹಾಕಿದರು. ಯಾವುದೇ ಒಬ್ಬ ಬ್ಯಾಟರ್ ಕೂಡಾ ಉತ್ತಮ ಎಸೆತಕ್ಕೆ ಔಟಾಗಲಿಲ್ಲ. ಕನಿಷ್ಠ ಪಕ್ಷ ಒಬ್ಬ ಬ್ಯಾಟರ್ ಆದರೂ ಸಾಮಾನ್ಯ ಜ್ಞಾನ ಬಳಸಬೇಕಿತ್ತು. ಅವರ ಬಳಿಯೇನಾದರೂ ವಿಕೆಟ್‌ಗಳಿದ್ದಿದ್ದರೆ, ಅವರು ನಿಗದಿತ 14 ಓವರ್‌ಗಳಲ್ಲಿ 110ರಿಂದ 120 ರನ್‌ಗಳ ಮೊತ್ತವನ್ನಾದರೂ ತಲುಪುತ್ತಿದ್ದರು. ಇದರಿಂದ ಅವರಿಗೆ ಪ್ರತಿ ಹೋರಾಟ ನಡೆಸುವ ಅವಕಾಶವಾದರೂ ದೊರೆಯುತ್ತಿತ್ತು" ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.