ಐಪಿಎಲ್‌ಗೆ ಮರಳುವ, ಮರಳದ ವಿದೇಶಿ ಆಟಗಾರರು ಯಾರು?
ಮುಂಬೈ: ಮೇ 17ರಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯು ಪುನರಾರಂಭಗೊಳ್ಳುವ ಮುನ್ನ, ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಜೋಸ್ ಬಟ್ಲರ್ ಮತ್ತು ದಕ್ಷಿಣ ಆಫ್ರಿಕದ ವೇಗಿ ಜೆರಾಲ್ಡ್ ಕೋಯಟ್ಝೀ ಬುಧವಾರ ಗುಜರಾತ್ ಟೈಟಾನ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಭಾರತ-ಪಾಕಿಸ್ತಾನ ಸಂಘರ್ಷದ ಹಿನ್ನೆಲೆಯಲ್ಲಿ ಪಂದ್ಯಾವಳಿ ಮುಂದೂಡಲ್ಪಟ್ಟ ಬಳಿಕ, ಭಾರತದಿಂದ ಹೊರ ಹೋಗಿರುವ ವಿದೇಶಿ ಆಟಗಾರರು ಅವರು ಮಾತ್ರ.
ರಶೀದ್ ಖಾನ್, ಶರ್ಫೇನ್ ರುದರ್‌ಫೋರ್ಡ್, ಕಗಿಸೊ ರಬಡ ಮತ್ತು ಕರೀಮ್ ಜನತ್ ಸೇರಿದಂತೆ ಗುಜರಾತ್ ಟೈಟಾನ್ಸ್‌ನ ಇತರ ವಿದೇಶಿ ಆಟಗಾರರು ತಂಡದ ಜೊತೆಗೇ ಭಾರತದಲ್ಲಿ ಉಳಿದಿದ್ದಾರೆ.
►ಕೋಲ್ಕತಾ ನೈಟ್ ರೈಡರ್ಸ್
ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ನ ಹೆಚ್ಚಿನ ವಿದೇಶಿ ಆಟಗಾರರು ಬುಧವಾರ ರಾತ್ರಿ ಮತ್ತು ಗುರುವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಪಂದ್ಯಾವಳಿಯನ್ನು ಒಂದು ವಾರ ಮುಂದೂಡಿದಂದಿನಿಂದ, ತಂಡದ ಕೆರಿಬಿಯನ್ ಆಟಗಾರರಾದ ಸುನೀಲ್ ನರೈನ್, ಆ್ಯಂಡ್ರಿ ರಸೆಲ್, ರೊವ್‌ಮನ್ ಪವೆಲ್ ಮತ್ತು ತಂಡದ ಮಾರ್ಗದರ್ಶಿ ಡ್ವಾಯ್ನ್ ಬ್ರಾವೊ ದುಬೈಯಲ್ಲಿ ಇದ್ದಾರೆ. ಕಾಬೂಲ್‌ನಲ್ಲಿರುವ ವಿಕೆಟ್‌ಕೀಪರ್ ಬ್ಯಾಟರ್ ರಹ್ಮಾನುಲ್ಲಾ ಗುರ್ಬಾಝ್ ದುಬೈಗೆ ಹೋಗಿ ಅಲ್ಲಿರುವ ತಂಡದ ಸದಸ್ಯರೊಂದಿಗೆ ಭಾರತಕ್ಕೆ ಬರಲಿದ್ದಾರೆ.
ಈಗ ಮಾಲ್ದೀವ್ಸ್ ನಲ್ಲಿರುವ ದಕ್ಷಿಣ ಆಫ್ರಿಕದ ವೇಗಿ ಆ್ಯನ್‌ರಿಕ್ ನೋರ್ಟ್‌ಯೆ ಬೆಂಗಳೂರಿನಲ್ಲಿ ಕೆಕೆಆರ್ ತಂಡವನ್ನು ಸೇರಲಿದ್ದಾರೆ.
►ಸನ್ ರೈಸರ್ಸ್ ಹೈದರಾಬಾದ್
ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಟ್ರಾವಿಸ್ ಹೆಡ್ ಮೇ 17ರೊಳಗೆ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ. ಜೂನ್ 11ರಿಂದ ಲಾರ್ಡ್ಸ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ಆಡುವ ಆಸ್ಟ್ರೇಲಿಯ ತಂಡಕ್ಕೆ ಈ ಇಬ್ಬರು ಆಟಗಾರರನ್ನು ಸೇರ್ಪಡೆಗೊಳಿಸಲಾಗಿದೆ.
ಆದರೆ ಹೇನ್ರಿಕ್ ಕ್ಲಾಸೆನ್, ಇಶಾನ್ ಮಲಿಂಗ, ಕಮಿಂಡು ಮೆಂಡಿಸ್ ಮತ್ತು ವಿಯಾನ್ ಮಲ್ಡರ್ ಸೇರಿದಂತೆ ತಂಡದ ಇತರ ವಿದೇಶಿ ಆಟಗಾರರು ಮರಳುತ್ತಾರೆಯೇ ಎನ್ನುವುದು ಖಚಿತವಾಗಿಲ್ಲ.
ಹೈದರಾಬಾದ್ ಈಗಾಗಲೇ ಪ್ಲೇಆಫ್ ಸ್ಪರ್ಧೆಯಿಂದ ಹೊರಬಿದ್ದಿದೆ.
►ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್ ತಂಡದ ತಾರಾ ಆಟಗಾರರಾದ ಝೇವಿಯರ್ ಬಾರ್ಟ್‌ಲೆಟ್, ಅಝ್ಮತುಲ್ಲಾ ಉಮರ್‌ಝಾಯಿ ಮತ್ತು ಮಿಚೆಲ್ ಓವನ್ ಉಳಿದ ಐಪಿಎಲ್ ಪಂದ್ಯಗಳನ್ನು ಆಡಲು ಮರಳುವುದನ್ನು ಖಚಿತಪಡಿಸಿದ್ದಾರೆ. ಆದರೆ, ತಂಡದ ಇತರ ವಿದೇಶಿ ಆಟಗಾರರಾದ ಮಾರ್ಕಸ್ ಸ್ಟೋಯಿನಿಸ್, ಮಾರ್ಕೊ ಜಾನ್ಸನ್, ಜೋಶ್ ಇಂಗ್ಲಿಸ್ ಮತ್ತು ಆರೋನ್ ಹಾರ್ಡಿ ಭಾರತಕ್ಕೆ ಮರಳುವುದು ಈವರೆಗೆ ಖಚಿತವಾಗಿಲ್ಲ.
ಪಂಜಾಬ್ ಕಿಂಗ್ಸ್ 11 ಪಂದ್ಯಗಳಿಂದ 15 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.