×
Ad

ನಾಳೆಯಿಂದ ಐಪಿಎಲ್ ಪುನರಾರಂಭ | ಬೆಂಗಳೂರಿನಲ್ಲಿ ಆರ್‌ಸಿಬಿ-ಕೆಕೆಆರ್ ಕಾದಾಟ

Update: 2025-05-16 20:50 IST

PC :  X 

ಬೆಂಗಳೂರು : ಭಾರತ-ಪಾಕಿಸ್ತಾನದ ಗಡಿಯಲ್ಲಿ ಉದ್ವಿಗ್ನತೆ ನೆಲೆಸಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸ್ಥಗಿತಗೊಂಡಿರುವ 2025ರ ಆವೃತ್ತಿಯ ಐಪಿಎಲ್ ಟಿ-20 ಟೂರ್ನಿಯು ಶನಿವಾರದಿಂದ ಪುನರಾರಂಭವಾಗಲಿದೆ. ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್‌ನ 58ನೇ ಲೀಗ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದೊಂದಿಗೆ ಕಾದಾಡಲಿದೆ. ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ವಿರಾಟ್ ಕೊಹ್ಲಿ ಅವರತ್ತ ಎಲ್ಲರ ಚಿತ್ತ ಹರಿದಿದೆ.

ಅನಿರೀಕ್ಷಿತ 9 ದಿನಗಳ ವಿರಾಮದಿಂದಾಗಿ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳ ಮುಂದೆ ವಿಭಿನ್ನ ಗುರಿಗಳಿದ್ದು, ಒಂದೇ ರೀತಿಯ ಸವಾಲನ್ನು ಮೆಟ್ಟಿ ನಿಲ್ಲಬೇಕಾಗಿದೆ.

11 ಪಂದ್ಯಗಳಲ್ಲಿ 8ರಲ್ಲಿ ಜಯ, 3ರಲ್ಲಿ ಸೋಲನುಭವಿಸಿ 16 ಅಂಕ ಗಳಿಸಿರುವ ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಎಂ.ಚಿನ್ನಸ್ವಾಮಿ ಸ್ಟೇಡಿಯಮ್‌ನಲ್ಲಿ ಕೆಕೆಆರ್ ವಿರುದ್ಧ ಶನಿವಾರ ಗೆಲುವು ಸಾಧಿಸಿದರೆ ಆರ್‌ಸಿಬಿ ತಂಡ ಪ್ಲೇ ಆಫ್‌ನತ್ತ ಮುನ್ನಡೆದ ಮೊದಲ ತಂಡ ಎನಿಸಿಕೊಳ್ಳಲಿದೆ.

12 ಪಂದ್ಯಗಳಲ್ಲಿ 5ರಲ್ಲಿ ಜಯ, 6ರಲ್ಲಿ ಸೋಲನುಭವಿಸಿ 11 ಅಂಕವನ್ನು ಕಲೆ ಹಾಕಿರುವ ಹಾಲಿ ಚಾಂಪಿಯನ್ ಕೆಕೆಆರ್ ತಂಡವು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಒಂದೇ ಒಂದು ಎಡವಟ್ಟು ಹಾಲಿ ಚಾಂಪಿಯನ್ ತಂಡದ ನಾಕೌಟ್ ಪ್ರವೇಶಿಸುವ ಭರವಸೆಯನ್ನು ಕಸಿದುಕೊಳ್ಳಬಹುದು.

ಈಡನ್‌ಗಾರ್ಡನ್ಸ್‌ನಲ್ಲಿ ಮಾ.22ರಂದು ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ತಂಡವು ಕೆಕೆಆರ್ ತಂಡವನ್ನು ಮಣಿಸಿತ್ತು. ಕೃನಾಲ್ ಪಾಂಡ್ಯ 3 ವಿಕೆಟ್‌ಗಳನ್ನು ಕಬಳಿಸಿ ಆತಿಥೇಯರನ್ನು 8 ವಿಕೆಟ್ ನಷ್ಟಕ್ಕೆ 174 ರನ್‌ಗೆ ನಿಯಂತ್ರಿಸಿದ್ದರು. ಇದಕ್ಕೆ ಉತ್ತರವಾಗಿ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಅರ್ಧಶತಕಗಳನ್ನು ಸಿಡಿಸಿ ಆರ್‌ಸಿಬಿ ತಂಡವು 16.2 ಓವರ್‌ಗಳಲ್ಲಿ 7 ವಿಕೆಟ್ ಬಾಕಿ ಇರುವಾಗಲೇ ಗೆಲುವು ದಾಖಲಿಸಲು ನೆರವಾಗಿದ್ದರು.

ಕೆಕೆಆರ್ ತಂಡವು ವಿರಾಮಕ್ಕೆ ಮೊದಲಿನ ತೀವ್ರತೆಯನ್ನು ತಲುಪಬೇಕಾದ ಸವಾಲನ್ನು ಎದುರಿಸುತ್ತಿದೆ.

ಲೀಗ್ ಹಂತದ ಪಂದ್ಯವು ಸ್ಥಗಿತಗೊಳ್ಳುವ ಮೊದಲು ಆತಿಥೇಯ ಆರ್‌ಸಿಬಿ ಸತತ 4 ಪಂದ್ಯಗಳಲ್ಲಿ ಜಯ ಸಾಧಿಸಿ ಭರ್ಜರಿ ಫಾರ್ಮ್‌ನಲ್ಲಿದ್ದರೆ, ಕೆಕೆಆರ್ ತಂಡವು ಹಿಂದಿನ 3 ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸಿತ್ತು. ಅನಿಶ್ಚಿತತೆಯ ನಂತರ ಕೆಕೆಆರ್ ತಂಡವು ಹಿಂದಿನ ಲಯ ಮರಳಿ ಪಡೆಯುವುದೇ ಎಂಬ ಪ್ರಶ್ನೆಗಳು ಉದ್ಭವಿಸಿದೆ.

ಇಂತಹ ಪರಿಸ್ಥಿತಿಯಲ್ಲಿ ಆರ್‌ಸಿಬಿ ಉತ್ತಮ ಸ್ಥಿತಿಯಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದ ವೇಳೆ ಬೆರಳಿನ ಗಾಯಕ್ಕೆ ಒಳಗಾಗಿದ್ದ ನಾಯಕ ರಜತ್ ಪಾಟಿದಾರ್ ನೆಟ್‌ನಲ್ಲಿ ಅಭ್ಯಾಸ ನಡೆಸುತ್ತಿರುವುದು ಕಂಡುಬಂದಿದೆ.

ಭಾರತ-ಪಾಕಿಸ್ತಾನ ಸೇನಾ ಮುಖಾಮುಖಿಯ ನಂತರ ಸ್ವದೇಶಕ್ಕೆ ವಾಪಸಾಗಿದ್ದ ಆರ್‌ಸಿಬಿಯ ಬಹುತೇಕ ವಿದೇಶಿ ಆಟಗಾರರು ವಾಪಸಾಗಿದ್ದಾರೆ. ಫಿಲ್ ಸಾಲ್ಟ್, ಲುಂಗಿ ಗಿಡಿ, ಟಿಮ್ ಡೇವಿಡ್, ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ರೊಮಾರಿಯೊ ಶೆಫರ್ಡ್ ಉಳಿದಿರುವ ಎಲ್ಲ ಪಂದ್ಯಗಳಿಗೆ ಲಭ್ಯವಿದ್ದಾರೆ.

ಗಾಯದ ಸಮಸ್ಯೆ ಎದುರಿಸುತ್ತಿರುವ ದೇವದತ್ತ ಪಡಿಕ್ಕಲ್ ಹಾಗೂ ವೇಗದ ಬೌಲರ್ ಜೋಶ್ ಹೇಝಲ್‌ವುಡ್ ಅನುಪಸ್ಥಿತಿಯು ಆರ್‌ಸಿಬಿ ತಂಡಕ್ಕೆ ಹಿನ್ನಡೆಯಾಗಿದೆ. ಪಡಿಕ್ಕಲ್ ಬದಲಿಗೆ ಆರ್‌ಸಿಬಿ ಪಾಳಯ ಸೇರಿರುವ ಮಯಾಂಕ್ ಅಗರ್ವಾಲ್ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಹೇಝಲ್‌ವುಡ್ ಭುಜನೋವಿನಿಂದ ಬಳಲುತ್ತಿದ್ದು, ಅವರ ಲಭ್ಯತೆಯ ಕುರಿತು ಫ್ರಾಂಚೈಸಿಯು ಇನ್ನಷ್ಟೇ ಸ್ಪಷ್ಟತೆ ನೀಡಬೇಕಾಗಿದೆ.

ಈ ವಾರಾರಂಭದಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಕೊಹ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಪ್ರಸಕ್ತ ಶ್ರೇಷ್ಠ ಫಾರ್ಮ್‌ನಲ್ಲಿರುವ ಕೊಹ್ಲಿ ಈ ವರ್ಷದ ಐಪಿಎಲ್‌ನಲ್ಲಿ 4ನೇ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. 11 ಪಂದ್ಯಗಳಲ್ಲಿ 63.13ರ ಸರಾಸರಿಯಲ್ಲಿ, 143.47ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 505 ರನ್ ಗಳಿಸಿದ್ದಾರೆ. 36ರ ಹರೆಯದ ಕೊಹ್ಲಿ ಈಗಾಗಲೇ 7 ಅರ್ಧಶತಕಗಳನ್ನು ಗಳಿಸಿದ್ದು, ಆರೆಂಜ್ ಕ್ಯಾಪ್ ಧರಿಸಿರುವ ಸೂರ್ಯಕುಮಾರ್ ಯಾದವ್‌ಗಿಂತ ಕೇವಲ 5 ರನ್‌ನಿಂದ ಹಿಂದಿದ್ದಾರೆ.

ಮತ್ತೊಂದೆಡೆ ಕೆಕೆಆರ್ ತಂಡಕ್ಕೆ ಈ ವರ್ಷದ ಐಪಿಎಲ್‌ನಲ್ಲಿ ಬ್ಯಾಟಿಂಗ್ ವಿಭಾಗ ಕೈಕೊಡುತ್ತಾ ಬಂದಿದೆ. ನಾಯಕ ಅಜಿಂಕ್ಯ ರಹಾನೆ ಹಾಗೂ ಯುವ ಆಟಗಾರ ಎ.ರಘುವಂಶಿ ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ನಿರಂತರವಾಗಿ ಕೊಡುಗೆ ನೀಡುವಲ್ಲಿ ವಿಫಲರಾಗಿದ್ದಾರೆ. ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್ ಹಾಗೂ ರಿಂಕು ಸಿಂಗ್ ಅವರಿಂದ ಕೆಕೆಆರ್ ಇನ್ನಷ್ಟು ರನ್ ನಿರೀಕ್ಷಿಸುತ್ತಿದೆ.

ವರುಣ್ ಚಕ್ರವರ್ತಿ, ಸುನೀಲ್ ನರೇನ್, ವೈಭವ್ ಅರೋರ ಹಾಗೂ ಹರ್ಷಿತ್ ರಾಣಾ ಅವರನ್ನೊಳಗೊಂಡ ಕೆಕೆಆರ್ ಬೌಲಿಂಗ್ ವಿಭಾಗವು ಕೆಲವೊಮ್ಮೆ ದುಬಾರಿ ಎನಿಸಿಕೊಂಡರೂ ಗಮನಾರ್ಹ ಪ್ರದರ್ಶನ ನೀಡಿದೆ. ಸ್ಪಿನ್ನರ್ ವರುಣ್ ಚಕ್ರವರ್ತಿ ಈ ವರ್ಷದ ಐಪಿಎಲ್‌ನಲ್ಲಿ 12 ಪಂದ್ಯಗಳಲ್ಲಿ 19.35ರ ಸರಾಸರಿಯಲ್ಲಿ, 7ರ ಇಕಾನಮಿ ರೇಟ್‌ನಲ್ಲಿ ಒಟ್ಟು 17 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ನಿಗೂಢ ಸ್ಪಿನ್ನರ್ ಶನಿವಾರ ಮತ್ತೊಮ್ಮೆ ಮಿಂಚುವತ್ತ ಗಮನ ಹರಿಸಿದ್ದಾರೆ.

ಕೆಕೆಆರ್ ತಂಡವು ಇಂಗ್ಲೆಂಡ್ ಆಲ್‌ರೌಂಡರ್ ಮೊಯಿನ್ ಅಲಿ ಉಪಸ್ಥಿತಿಯಿಂದ ವಂಚಿತವಾಗಲಿದ್ದು, ಅಲಿ ಅವರು ಜ್ವರದಿಂದಾಗಿ ಐಪಿಎಲ್ ನಿಂದ ಹೊರಗುಳಿದಿದ್ದಾರೆ.

ಪಿಚ್ ರಿಪೋರ್ಟ್:

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು 2025ರ ಐಪಿಎಲ್‌ನ ಕೆಲವು ಗರಿಷ್ಠ ಸ್ಕೋರ್‌ಗಳ ಸ್ಪರ್ಧೆಗೆ ಸಾಕ್ಷಿಯಾಗಿದೆ. ಆದರೆ ಈ ಪ್ರತಿಷ್ಠಿತ ಮೈದಾನದಲ್ಲಿ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಬೌಲರ್‌ಗಳಿಗೆ ಹೆಚ್ಚಿನ ನೆರವು ದೊರೆತ ಕೆಲವು ಪಂದ್ಯಗಳು ಕೂಡ ನಡೆದಿವೆ. ವೇಗಿಗಳು ಹಾಗೂ ಕೆಲವೊಮ್ಮೆ ಸ್ಪಿನ್ನರ್‌ಗಳು ಬೌನ್ಸ್ ಹಾಗೂ ಬೈಟ್ ರೂಪದಲ್ಲಿ ಅನಿರೀಕ್ಷಿತ ನೆರವು ಪಡೆದಿದ್ದಾರೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವುದು ಸುರಕ್ಷಿತ ಆಯ್ಕೆಯಾಗಿದೆ. ಎರಡನೇ ಇನಿಂಗ್ಸ್‌ನಲ್ಲಿ ಇಬ್ಬನಿ ದೊಡ್ಡ ಪಾತ್ರವಹಿಸಬಹುದು. ಶನಿವಾರ ಮಳೆಯಾಗುವ ಸಾಧ್ಯತೆ ಶೇ.65ರಷ್ಟಿದೆ.

► ಆರ್‌ಸಿಬಿ-ಕೆಕೆಆರ್ ಹೆಡ್-ಟು-ಹೆಡ್ ದಾಖಲೆ

ಆಡಿರುವ ಪಂದ್ಯಗಳು: 35

ಆರ್‌ಸಿಬಿಗೆ ಗೆಲುವು: 15

ಕೆಕೆಆರ್‌ಗೆ ಜಯ: 20

► ಸಂಭಾವ್ಯ ಆಡುವ 11ರ ಬಳಗ

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್(ನಾಯಕ), ಮಯಾಂಕ್ ಅಗರ್ವಾಲ್, ಜಿತೇಶ್ ಶರ್ಮಾ(ವಿಕೆಟ್‌ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ ಕುಮಾರ್, ಲುಂಗಿ ಗಿಡಿ, ಯಶ್ ದಯಾಳ್.

ಇಂಪ್ಯಾಕ್ಟ್ ಪ್ಲೇಯರ್: ಸುಯಶ್ ಶರ್ಮಾ.

ಕೋಲ್ಕತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಝ್(ವಿಕೆಟ್‌ಕೀಪರ್), ಸುನೀಲ್ ನರೇನ್, ಅಜಿಂಕ್ಯ ರಹಾನೆ(ನಾಯಕ), ಎ.ರಘುವಂಶಿ, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣ್‌ದೀಪ್ ಸಿಂಗ್, ವೈಭವ್ ಅರೋರ, ಹರ್ಷಿತ್ ರಾಣಾ, ಅನ್ರಿಚ್ ನೋಟ್ಜೆ, ವರುಣ್ ಚಕ್ರವರ್ತಿ.

ಇಂಪ್ಯಾಕ್ಟ್ ಪ್ಲೇಯರ್: ಮನೀಶ್ ಪಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News