×
Ad

ಐಪಿಎಲ್‌ ನಲ್ಲಿ ಈ ಬಾರಿ ಉದಯಿಸಲಿದೆ ಹೊಸ ಚಾಂಪಿಯನ್ ತಂಡ; ಫೈನಲ್‌ ನಲ್ಲಿ ನಾಳೆ ಆರ್‌ಸಿಬಿಗೆ ಪಂಜಾಬ್ ಎದುರಾಳಿ

Update: 2025-06-02 20:57 IST

PC : X 

ಅಹ್ಮದಾಬಾದ್: ಎರಡು ತಿಂಗಳಿಗೂ ಅಧಿಕ ಸಮಯದ ನಂತರ ಪ್ರತಿಷ್ಠಿತ 2025ರ ಆವೃತ್ತಿಯ ಐಪಿಎಲ್ ಟೂರ್ನಿಯು ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಕ್ವಾಲಿಫೈಯರ್-2ರಲ್ಲಿ ರವಿವಾರ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿರುವ ಪಂಜಾಬ್ ಕಿಂಗ್ಸ್ ತಂಡವು ಫೈನಲ್‌ ಗೆ ಲಗ್ಗೆ ಇಟ್ಟಿದ್ದು, ಮಂಗಳವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸವಾಲನ್ನು ಎದುರಿಸಲಿದೆ. ಉಭಯ ತಂಡಗಳು 2008ರಲ್ಲಿ ಐಪಿಎಲ್ ಟೂರ್ನಿ ಆರಂಭವಾದಾಗಿನಿಂದ ಪ್ರಶಸ್ತಿ ಗೆಲ್ಲದ ಹಿನ್ನೆಲೆಯಲ್ಲಿ 18ನೇ ಆವೃತ್ತಿಯ ಟಿ-20 ಟೂರ್ನಿಯಲ್ಲಿ ಹೊಸ ತಂಡವೊಂದು ಚಾಂಪಿಯನ್ ಆಗಿ ಹೊರಹೊಮ್ಮಲಿದೆ.

ಆರ್‌ಸಿಬಿ ತಂಡವು 4ನೇ ಬಾರಿ ಫೈನಲ್‌ ಗೆ ಪ್ರವೇಶಿಸಿದ್ದು, 9 ವರ್ಷಗಳ ನಂತರ ಈ ಸಾಧನೆ ಮಾಡಿದೆ. 2008, 2011 ಹಾಗೂ 2016ರಲ್ಲಿ ಕ್ರಮವಾಗಿ ಡೆಕ್ಕನ್ ಚಾರ್ಜರ್ಸ್, ಚೆನ್ನೈಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ವಿರುದ್ಧ ಸೋಲನುಭವಿಸಿ 2ನೇ ಸ್ಥಾನ ಪಡೆದಿತ್ತು.

ಲೀಗ್ ಹಂತದಲ್ಲಿ ತವರು ಮೈದಾನದಿಂದ ಹೊರಗೆ ಆಡಿರುವ ಎಲ್ಲ ಪಂದ್ಯಗಳನ್ನು ಜಯಿಸಿದ ಮೊದಲ ಐಪಿಎಲ್ ತಂಡ ಎನಿಸಿಕೊಂಡಿರುವ ಆರ್‌ಸಿಬಿ ಹೊಸ ಇತಿಹಾಸ ನಿರ್ಮಿಸಿದೆ.

ಪಂಜಾಬ್ ತಂಡ ಈ ಹಿಂದೆ ಒಮ್ಮೆ ಮಾತ್ರ ಫೈನಲ್‌ ಗೆ ತಲುಪಿತ್ತು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವೆಂದು ಕರೆಯಲ್ಪಡುತ್ತಿದ್ದಾಗ 2014ರಲ್ಲಿ ಫೈನಲ್‌ ಗೆ ತಲುಪಿದ್ದ ಪಂಜಾಬ್ ಕಿಂಗ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋಲುಂಡಿತ್ತು. 2011ರಲ್ಲಿ ಪ್ಲೇ ಆಫ್ ಪದ್ದತಿ ಜಾರಿಗೆ ಬಂದ ನಂತರ 2014ರ ಋತುವಿನಲ್ಲಿ ಮಾತ್ರ ಪಂಜಾಬ್ ತಂಡ ಪ್ಲೇ ಆಫ್ ಸುತ್ತಿಗೆ ಪ್ರವೇಶಿಸಿತ್ತು. ಹಾಲಿ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಮೂರು ವಿಭಿನ್ನ ತಂಡಗಳನ್ನು ಫೈನಲ್‌ ನಲ್ಲಿ ನಾಯಕನಾಗಿ ಮುನ್ನಡೆಸಿದ ಮೊದಲ ಆಟಗಾರನಾಗುವ ಹೊಸ್ತಿಲಲ್ಲಿದ್ದಾರೆ. 2020ರ ಫೈನಲ್‌ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ 2024ರಲ್ಲಿ ಕೆಕೆಆರ್ ತಂಡದ ನಾಯಕನಾಗಿದ್ದರು.

ಪಂಜಾಬ್ ಕಿಂಗ್ಸ್ ಹಾಗೂ ಆರ್‌ಸಿಬಿ ಲೀಗ್ ಹಂತದಲ್ಲಿ ಕ್ರಮವಾಗಿ 1 ಹಾಗೂ 2ನೇ ಸ್ಥಾನ ಪಡೆದಿವೆ. 14 ಪಂದ್ಯಗಳ ಪೈಕಿ ತಲಾ 9ರಲ್ಲಿ ಜಯ, 4ರಲ್ಲಿ ಸೋಲು ಹಾಗೂ ಒಂದು ಪಂದ್ಯ ಫಲಿತಾಂಶ ರಹಿತವಾಗಿತ್ತು. ಎರಡೂ ತಂಡಗಳ ನೆಟ್‌ ರನ್‌ ರೇಟ್‌ ನಲ್ಲಿ ಅಲ್ಪ ವ್ಯತ್ಯಾಸವಿದೆ. ಈ ಬಾರಿಯ ಐಪಿಎಲ್‌ ನಲ್ಲಿ ಪಂಜಾಬ್ ತಂಡವು ಬೆಂಗಳೂರಿನಲ್ಲಿ ಆರ್‌ಸಿಬಿಯನ್ನು ಮಣಿಸಿದರೆ, ಮುಲ್ಲನ್‌ಪುರದಲ್ಲಿ ಪಂಜಾಬ್ ತಂಡವನ್ನು ಸೋಲಿಸಿದ್ದ ಆರ್‌ಸಿಬಿ ಸೇಡು ತೀರಿಸಿಕೊಂಡಿತ್ತು.

ಮೇ 29ರಂದು ಮುಲ್ಲನ್‌ಪುರದಲ್ಲಿ ಮೊದಲನೇ ಕ್ವಾಲಿಫೈಯರ್‌ ನಲ್ಲಿ ಆರ್‌ಸಿಬಿ-ಪಂಜಾಬ್ ಸೆಣಸಾಡಿದ್ದವು. ಪಂಜಾಬ್ ತಂಡವನ್ನು ಕೇವಲ 111 ರನ್‌ಗೆ ನಿಯಂತ್ರಿಸಿದ್ದ ಆರ್‌ಸಿಬಿ ತಂಡವು 10 ಓವರ್‌ಗಳು ಬಾಕಿ ಇರುವಾಗಲೇ ಮೊದಲ ಪ್ರಯತ್ನದಲ್ಲಿಯೇ ಫೈನಲ್‌ ಗೆ ಪ್ರವೇಶಿಸಿತ್ತು. ಪಂಜಾಬ್ ತಂಡವು ಕ್ವಾಲಿಫೈಯರ್-2ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ರವಿವಾರ ಎದುರಿಸಿತು. ವಾರದಲ್ಲಿ 2ನೇ ಬಾರಿ ಮುಂಬೈ ತಂಡಕ್ಕೆ ಸೋಲುಣಿಸಿ ಫೈನಲ್‌ ಗೆ ಅರ್ಹತೆ ಪಡೆಯಿತು.

*ವಿರಾಟ್ ಕೊಹ್ಲಿ ಅವರ ಐಪಿಎಲ್ ಪ್ರಶಸ್ತಿ ಕನಸು ಈಡೇರುವುದೇ?

ಸುಮಾರು 18 ವರ್ಷಗಳಿಂದ ಆರ್‌ಸಿಬಿ ತಂಡದ ಪರವಾಗಿ ಐಪಿಎಲ್ ಪ್ರಶಸ್ತಿ ಎತ್ತಿಹಿಡಿಯಲು ವಿರಾಟ್ ಕೊಹ್ಲಿ ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಆರ್‌ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ವರ್ಷದ ಐಪಿಎಲ್‌ ನಲ್ಲಿ 8 ಅರ್ಧಶತಕಗಳ ಸಹಿತ 600ಕ್ಕೂ ಅಧಿಕ ರನ್ ಗಳಿಸಿ ತಂಡದ ಯಶಸ್ಸಿಗೆ ನೆರವಾಗಿದ್ದಾರೆ. ಕೊಹ್ಲಿ ಅರ್ಧಶತಕ ಗಳಿಸಿರುವ ಪಂದ್ಯದಲ್ಲಿ ಆರ್‌ಸಿಬಿ ಈ ತನಕ ಸೋತಿಲ್ಲ. ಕೊಹ್ಲಿ ಒಂದೇ ಋತುವಿನಲ್ಲಿ 5ನೇ ಬಾರಿ 600ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಈ ಋತುವಿನಲ್ಲಿ ಆರ್‌ಸಿಬಿಯ ಇತರ ಆಟಗಾರರಾದ ಟಿಮ್ ಡೇವಿಡ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ದೇವದತ್ತ ಪಡಿಕ್ಕಲ್ ಹಾಗೂ ನಾಯಕ ರಜತ್ ಪಾಟಿದಾರ್ ಅರ್ಧಶತಕ ಗಳಿಸಿದ್ದಾರೆ.

ಆರ್‌ಸಿಬಿ ಆಡಿರುವ 15 ಪಂದ್ಯಗಳಲ್ಲಿ 9 ಹೀರೊಗಳು: ಈ ವರ್ಷದ ಐಪಿಎಲ್‌ ನಲ್ಲಿ ಫೈನಲ್‌ ಗೆ ತಲುಪಿರುವ ಆರ್‌ಸಿಬಿ ಆಡಿರುವ 15 ಪಂದ್ಯಗಳಲ್ಲಿ 9 ಹೀರೋಗಳು ಹೊರಹೊಮ್ಮಿದ್ದಾರೆ.

9 ಆಟಗಾರರಾದ ಕೃನಾಲ್ ಪಾಂಡ್ಯ(14 ಪಂದ್ಯ, 15 ವಿಕೆಟ್),ರಜತ್ ಪಾಟಿದಾರ್(14 ಪಂದ್ಯ, 286 ರನ್),ವಿರಾಟ್ ಕೊಹ್ಲಿ(14 ಪಂದ್ಯ, 614 ರನ್), ಟಿಮ್ ಡೇವಿಡ್(12 ಪಂದ್ಯ, 187 ರನ್), ಹೇಝಲ್‌ವುಡ್(11 ಪಂದ್ಯ,21 ವಿಕೆಟ್), ಫಿಲ್ ಸಾಲ್ಟ್(12 ಪಂದ್ಯ, 387 ರನ್), ಜಿತೇಶ್ ಶರ್ಮಾ(14 ಪಂದ್ಯ, 237 ರನ್), ಸುಯಶ್ ಶರ್ಮಾ(13 ಪಂದ್ಯ, 8 ವಿಕೆಟ್)ಹಾಗೂ ರೋಮಾರಿಯೊ ಶೆಫರ್ಡ್(7 ಪಂದ್ಯ, 53 ರನ್)ಆರ್‌ಸಿಬಿ ಯಶಸ್ಸಿನಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಜೋಶ್ ಹೇಝಲ್‌ ವುಡ್(21 ವಿಕೆಟ್‌ಗಳು)ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಲೆಗ್ ಬ್ರೇಕ್ ಬೌಲರ್ ಸುಯಶ್ ಶರ್ಮಾ 8 ವಿಕೆಟ್‌ಗಳನ್ನು ಪಡೆದರೆ, ಕೃನಾಲ್ ಪಾಂಡ್ಯ ಹಾಗೂ ಭುವನೇಶ್ವರ ಕುಮಾರ್ ತಲಾ 15 ವಿಕೆಟ್‌ಗಳನ್ನು ಪಡೆದಿದ್ದಾರೆ.

ಈ ವರ್ಷ ಆರ್‌ಸಿಬಿ ತಂಡದ 9 ಆಟಗಾರರು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿದ್ದು ಇದು ತಂಡದ ಸಾಂಘಿಕ ಪ್ರದರ್ಶನವನ್ನು ಬೆಟ್ಟು ಮಾಡುತ್ತಿದೆ. ಈ ಬಾರಿ ಆರ್‌ಸಿಬಿ ತಂಡವು ಸಿಎಸ್‌ಕೆ ತಂಡವನ್ನು ತನ್ನ ತವರಿನಲ್ಲಿ ಹಾಗೂ ಚೆನ್ನೈನ ಚಿಪಾಕ್ ಕ್ರೀಡಾಂಗಣದಲ್ಲಿ ಮೊದಲ ಬಾರಿ ಸೋಲಿಸಿ ಗಮನ ಸೆಳೆದಿತ್ತು. ಚೆಪಾಕ್‌ ನಲ್ಲಿ 17 ವರ್ಷಗಳ ನಂತರ ಜಯ ಸಾಧಿಸಿತ್ತು.

ಪಂಜಾಬ್ ತಂಡದಲ್ಲಿರುವ ನ್ಯೂಝಿಲ್ಯಾಂಡ್‌ನ ನೀಳಕಾಯದ ವೇಗದ ಬೌಲರ್ ಕೈಲ್ ಜಮೀಸನ್ ಆರ್‌ಸಿಬಿ ಗೆ ಬೌಲಿಂಗ್ ಮೂಲಕ ಕಾಡುವ ನಿರೀಕ್ಷೆ ಇದೆ. ತನ್ನದೇ ದೇಶದ ಫರ್ಗ್ಯುಸನ್ ಬದಲಿಗೆ ಪಂಜಾಬ್ ತಂಡ ಸೇರಿಕೊಂಡಿರುವ ಜಮೀಸನ್ ಈ ತನಕ 3 ಪಂದ್ಯಗಳಲ್ಲಿ 2 ವಿಕೆಟ್ ಪಡೆದಿದ್ದಾರೆ. ಮುಂಬೈ ವಿರುದ್ಧದ ಕ್ವಾಲಿಫೈಯರ್-2ರಲ್ಲಿ 4 ಓವರ್‌ಗಳಲ್ಲಿ 30 ರನ್ ನೀಡಿ ತಿಲಕ್ ವರ್ಮಾ ವಿಕೆಟನ್ನು ಪಡೆದಿದ್ದರು. ಅಹ್ಮದಾಬಾದ್‌ನ ಪಿಚ್ ಬೌನ್ಸ್ ಆಗುವ ಸಾಧ್ಯತೆಯಿದ್ದು, ಕಿವೀಸ್ ಬೌಲರ್ ಇದರ ಲಾಭ ಪಡೆದು ಪ್ರಮುಖ ವಿಕೆಟ್ ಪಡೆಯುವ ವಿಶ್ವಾಸದಲ್ಲಿದ್ದಾರೆ.

►ಪಿಚ್ ರಿಪೋರ್ಟ್

ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದೆ. 2025ರ ಐಪಿಎಲ್‌ ನಲ್ಲಿ ಆಡಿರುವ 8 ಪಂದ್ಯಗಳ ಪೈಕಿ 6 ಪಂದ್ಯವನ್ನು ಮೊದಲು ಬ್ಯಾಟಿಂಗ್ ಮಾಡಿದ್ದ ತಂಡ ಗೆದ್ದುಕೊಂಡಿದೆ. 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಇಬ್ಬನಿ ಕಾರಣದಿಂದ ಚೇಸ್ ಮಾಡಿದ್ದ ತಂಡ ಯಶಸ್ಸು ಕಂಡಿದೆ.

►ಸಂಭಾವ್ಯ ಆಡುವ 11ರ ಬಳಗ

ಆರ್‌ಸಿಬಿ: ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಾಟಿದಾರ್(ನಾಯಕ),ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ(ವಿಕೆಟ್‌ಕೀಪರ್), ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ ಕುಮಾರ್, ಯಶ್ ದಯಾಳ್, ಜೋಶ್ ಹೇಝಲ್‌ವುಡ್, ಸುಯಶ್ ಶರ್ಮಾ.

►ಇಂಪ್ಯಾಕ್ಟ್ ಪ್ಲೇಯರ್: ಮಯಾಂಕ್ ಅಗರ್ವಾಲ್

ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್(ವಿಕೆಟ್‌ಕೀಪರ್), ಶ್ರೇಯಸ್ ಅಯ್ಯರ್(ನಾಯಕ), ನೇಹಾಲ್ ವಧೇರ, ಮಾರ್ಕಸ್ ಸ್ಟೋಯಿನಿಸ್, ಶಶಾಂಕ್ ಸಿಂಗ್, ಅಝ್ಮತುಲ್ಲಾ ಉಮರ್‌ಝೈ, ಕೈಲ್ ಜಮೀಸನ್, ವಿಜಯಕುಮಾರ್ ವೈಶಾಕ್, ಅರ್ಷದೀಪ್ ಸಿಂಗ್, ಯಜುವೇಂದ್ರ ಚಹಾಲ್.

ಇಂಪ್ಯಾಕ್ಟ್ ಪ್ಲೇಯರ್: ಪ್ರಭ್‌ಸಿಮ್ರನ್ ಸಿಂಗ್.

► ಫೈನಲ್ ಪಂದ್ಯಮಳೆಗಾಹುತಿಯಾದರೆ ಯಾರಿಗೆ ಲಾಭ?

ಪಂದ್ಯವನ್ನು ಪೂರ್ಣಗೊಳಿಸಲು 120 ನಿಮಿಷಗಳ ಹೆಚ್ಚುವರಿ ಸಮಯ ಲಭ್ಯವಿರುವ ಹಿನ್ನೆಲೆಯಲ್ಲಿ ಮಳೆಯಿಂದಾಗಿ ಸ್ವಲ್ಪ ಹೊತ್ತು ಪಂದ್ಯ ವಿಳಂಬವಾದರೆ ವ್ಯತ್ಯಾಸವಾಗದು.ಆದರೆ ಮಳೆಯು ಮಂಗಳವಾರದ ಫೈನಲ್ ಪಂದ್ಯ ಪೂರ್ಣಗೊಳಿಸಲು ಅಡ್ಡಿಯಾದರೆ, ಪಂದ್ಯವು ಮೀಸಲು ದಿನವಾದ ಜೂನ್ 4ರಂದು ಮುಂದುವರಿಯಲಿದೆ.

ಮೀಸಲು ದಿನದಂದೂ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗದೆ, ಆಡಲು ಸಾಧ್ಯವಾಗದೆ ಇದ್ದರೆ, ಲೀಗ್ ಹಂತದಲ್ಲಿ ಅಗ್ರ ಸ್ಥಾನ ಪಡೆದಿರುವ ತಂಡವನ್ನು 2025ರ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.

ಹೀಗಾದರೆ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ ಕಿರೀಟ ಧರಿಸಲಿದೆ. 14 ಪಂದ್ಯಗಳಲ್ಲಿ 9ರಲ್ಲಿ ಜಯ ಸಾಧಿಸಿರುವ ಪಂಜಾಬ್ ತಂಡವು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. ಒಂದು ವೇಳೆ ಎರಡೂ ದಿನಗಳು ಮಳೆಗಾಹುತಿಯಾದರೆ ಶ್ರೇಯಸ್ ಅಯ್ಯರ್ ಬಳಗವು ಚಾಂಪಿಯನ್ಸ್ ಪಟ್ಟಕ್ಕೇರಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News