ಆರ್ ಸಿ ಬಿ ಸಂಭ್ರಮಾಚರಣೆಯನ್ನು ಇನ್ನೂ ಉತ್ತಮವಾಗಿ ಆಯೋಜಿಸಬಹುದಿತ್ತು: ಬಿಸಿಸಿಐ
PC :X
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18 ವರ್ಷಗಳ ನಂತರ ಇದೇ ಪ್ರಥಮ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಿದ್ದಕ್ಕಾಗಿ ಆಯೋಜಿಸಲಾಗಿದ್ದ ಸಂಭ್ರಮಾಚರಣೆಯ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಕನಿಷ್ಠ 10 ಮಂದಿ ಮೃತಪಟ್ಟು, 50 ಮಂದಿ ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಇದರ ಬೆನ್ನಿಗೇ, ಘಟನೆಯ ಕುರಿತು ತನ್ನ ಮೌನ ಮುರಿದಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, “ಇದು ತುಂಬಾ ದುರದೃಷ್ಟಕರ. ಇದು ಜನಪ್ರಿಯತೆಯ ಋಣಾತ್ಮಕ ಮಗ್ಗುಲಾಗಿದೆ. ಜನರು ತಮ್ಮ ಕ್ರಿಕೆಟಿಗರಿಗಾಗಿ ಉನ್ಮತ್ತರಾಗಿದ್ದಾರೆ. ಸಂಘಟಕರು ಈ ಕಾರ್ಯಕ್ರಮವನ್ನು ಇನ್ನೂ ಉತ್ತಮವಾಗಿ ಆಯೋಜಿಸಬಹುದಿತ್ತು. ಮೃತರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪಗಳು. ಗಾಯಾಳುಗಳು ಆದಷ್ಟೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ” ಎಂದು ಹೇಳಿದ್ದಾರೆ.
“ಯಾರಾದರೂ ಈ ಪ್ರಮಾಣದ ಸಂಭ್ರಮಾಚರಣೆಯನ್ನು ಆಯೋಜಿಸುವುದಿದ್ದರೆ, ಅಂಥವರು ಸೂಕ್ತ ಮುನ್ನೆಚ್ಚರಿಕೆ, ಸುರಕ್ಷತಾ ಹಾಗೂ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಎಲ್ಲೋ ಲೋಪವಾದಂತಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
“ಐಪಿಎಲ್ ಗೆ ಇಂತಹ ಅಮೋಘ ಮುಕ್ತಾಯ ದೊರೆತ ನಂತರ, ಇದೊಂದು ರೀತಿ ಅಹಿತಕರ ಮುಕ್ತಾಯವಾಗಿದೆ. ಈ ಹಿಂದೆ ಕೂಡಾ ಐಪಿಎಲ್ ಸಂಭ್ರಮಾಚರಣೆ ನಡೆದಿತ್ತು. ಕಳೆದ ವರ್ಷ ಕೋಲ್ಕತ್ತಾದಲ್ಲಿ ಕೆಕೆಆರ್ ತಂಡ ಐಪಿಎಲ್ ಟ್ರೋಫಿಯನ್ನು ಜಯಿಸಿದಾಗ ಇಂತಹ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವೇಳೆ, ಬಾರ್ಬಡೋಸ್ ನಲ್ಲಿ ಭಾರತೀಯ ಟಿ20 ತಂಡವು ವಿಶ್ವಕಪ್ ಜಯಿಸಿದಾಗ, ಮುಂಬೈನಲ್ಲೂ ಇಂತಹ ಸಂಭ್ರಮಾಚರಣೆ ನಡೆದಿತ್ತು ಎಂಬುದರತ್ತ ಅವರು ಬೊಟ್ಟು ಮಾಡಿದ್ದಾರೆ.