×
Ad

IPL | ಹಾರ್ದಿಕ್ ಪಾಂಡ್ಯ, ಆಶೀಶ್ ನೆಹ್ರಾಗೆ ಭಾರೀ ದಂಡ

Update: 2025-05-07 20:46 IST

ಹಾರ್ದಿಕ್ ಪಾಂಡ್ಯ, ಆಶೀಶ್ ನೆಹ್ರಾ | PC : NDTV 

ಹೊಸದಿಲ್ಲಿ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಗುಜರಾತ್ ಟೈಟಾನ್ಸ್ ತಂಡದ ಮುಖ್ಯ ಕೋಚ್ ಆಶೀಶ್ ನೆಹ್ರಾಗೆ ಗಣನೀಯ ಪ್ರಮಾಣದ ದಂಡ ವಿಧಿಸಲಾಗಿದೆ.

ಹಾರ್ದಿಕ್ ಪಾಂಡ್ಯಗೆ ನಿಧಾನಗತಿಯ ಬೌಲಿಂಗ್‌ ಗಾಗಿ ಹಾಗೂ ನೆಹ್ರಾಗೆ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸಿದ್ದಕ್ಕಾಗಿ ದಂಡ ಹೇರಲಾಗಿದೆ.

ಪದೇ ಪದೇ ಮಳೆ ಅಡ್ಡಿಪಡಿಸಿದ ಕಾರಣ ಮಧ್ಯರಾತ್ರಿಯ ನಂತರವೂ ವಿಸ್ತರಿಸಿದ ಐಪಿಎಲ್ ಪಂದ್ಯದಲ್ಲಿ ಮುಂಬೈ ತಂಡವು ಗುಜರಾತ್ ವಿರುದ್ದ ಡಿಎಲ್‌ಎಸ್ ಪದ್ಧತಿಯಡಿ 3 ವಿಕೆಟ್ ಅಂತರದಿಂದ ಸೋತಿದೆ.

ಐಪಿಎಲ್‌ ನ ನೀತಿ ಸಂಹಿತೆಯ ಪ್ರಕಾರ ಮುಂಬೈ ತಂಡವು ಈ ವರ್ಷ ಎಸಗಿರುವ ಎರಡನೇ ತಪ್ಪು ಇದಾಗಿದೆ. ಹೀಗಾಗಿ ಪಾಂಡ್ಯಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇಂಪ್ಯಾಕ್ಟ್ ಪ್ಲೇಯರ್ ಹಾಗೂ ಕನ್ಕ್ಯುಸನ್ ಬದಲಿ ಆಟಗಾರ ಸೇರಿದಂತೆ ಮುಂಬೈ ಇಂಡಿಯನ್ಸ್ ತಂಡದ ಪ್ರತಿಯೊಬ್ಬ ಸದಸ್ಯರಿಗೂ 6 ಲಕ್ಷ ರೂ. ಅಥವಾ ಅವರ ಪಂದ್ಯ ಶುಲ್ಕದ 25 ಪ್ರತಿಶತಃ ದಂಡ ವಿಧಿಸಲಾಗಿದೆ.

ಗುಜರಾತ್ ಟೈಟಾನ್ಸ್ ತಂಡದ ಮುಖ್ಯ ಕೋಚ್ ಆಶೀಶ್ ನೆಹ್ರಾ ಅವರಿಗೆ ಪಂದ್ಯಶುಲ್ಕದಲ್ಲಿ ಶೇಕಡಾ 25ರಷ್ಟು ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿರುವುದಕ್ಕೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ ಎಂದು ಐಪಿಎಲ್ ಪ್ರಕಟಿಸಿದೆ.

ಮಾಜಿ ವೇಗದ ಬೌಲರ್ ನೆಹ್ರಾ ಯಾವ ನಿಯಮ ಉಲ್ಲಂಘಿಸಿದ್ದಾರೆ ಎಂದು ಐಪಿಎಲ್ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿಲ್ಲ. ಆದರೆ, ಮಳೆಬಾಧಿತ ಪಂದ್ಯದುದ್ದಕ್ಕೂ ಆಕ್ರೋಶ ವ್ಯಕ್ತಪಡಿಸುತ್ತಿದ್ದ ನೆಹ್ರಾ ಅವರು ಮೈದಾನದ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News