ಐಪಿಎಲ್ ಪ್ಲೇ ಆಫ್: ಆರ್‌ಸಿಬಿ ದಾಖಲೆ ಮುರಿದ ಮುಂಬೈ ಇಂಡಿಯನ್ಸ್
ಹೊಸದಿಲ್ಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 59 ರನ್ ಅಂತರದಿಂದ ಜಯಶಾಲಿಯಾಗಿರುವ ಮುಂಬೈ ಇಂಡಿಯನ್ಸ್ ತಂಡವು 2025ರ ಆವೃತ್ತಿಯ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇ ಆಫ್ ಹಂತಕ್ಕೆ ತೇರ್ಗಡೆಯಾಗಿರುವ 4ನೇ ಹಾಗೂ ಕೊನೆಯ ತಂಡ ಎನಿಸಿಕೊಂಡಿದೆ. ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಈಗಾಗಲೇ ನಾಕೌಟ್ ಹಂತಕ್ಕೇರಿವೆ.
ಡೆಲ್ಲಿ ತಂಡದ ವಿರುದ್ಧ ಭರ್ಜರಿ ಗೆಲುವಿನೊಂದಿಗೆ 5 ಬಾರಿಯ ಚಾಂಪಿಯನ್ ಮುಂಬೈ ತಂಡವು 11ನೇ ಬಾರಿ ಪ್ಲೇ ಆಫ್ ಗೆ ಲಗ್ಗೆ ಇಟ್ಟಿದೆ. 10 ಬಾರಿ ಅಂತಿಮ-4ರ ಸುತ್ತು ತಲುಪಿರುವ ಆರ್‌ಸಿಬಿ ತಂಡದ ದಾಖಲೆಯನ್ನು ಮುರಿದಿದೆ. ಆರ್‌ಸಿಬಿ ಇನ್ನೂ ಪ್ರತಿಷ್ಠಿತ ಪ್ರಶಸ್ತಿಯನ್ನು ಜಯಿಸಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಅತ್ಯಂತ ಹೆಚ್ಚು ಬಾರಿ (12) ಪ್ಲೇ ಆಫ್ ಗೆ ಪ್ರವೇಶಿಸಿದ ದಾಖಲೆ ಹೊಂದಿದ್ದು, ಮುಂಬೈ ಈ ದಾಖಲೆಯನ್ನು ಮುರಿಯುವ ಹಾದಿಯಲ್ಲಿದೆ. 3 ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಕ್ರಮವಾಗಿ 8 ಹಾಗೂ 7 ಬಾರಿ ಪ್ಲೇ ಆಫ್ ಸುತ್ತಿಗೆ ಲಗ್ಗೆ ಇಟ್ಟಿವೆ.
ಗುಜರಾತ್ ಟೈಟಾನ್ಸ್ ತಂಡವು 18 ಅಂಕ ಗಳಿಸಿ 2025ರ ಆವೃತ್ತಿಯ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಲಾ 17 ಅಂಕ ಗಳಿಸಿವೆ. ಈ ಮೂರು ತಂಡಗಳು ಈಗಾಗಲೇ ಪ್ಲೇ ಆಫ್ ಸ್ಥಾನ ಗಿಟ್ಟಿಸಿದ್ದು, ಮುಂಬೈ ತಂಡವು ಬುಧವಾರ ಈ ಮೂರು ತಂಡಗಳನ್ನು ಸೇರಿಕೊಂಡಿದೆ.
ಮೇ 29ರಂದು ನ್ಯೂ ಚಂಡೀಗಡದ ನ್ಯೂ ಪಿಸಿಎ ಸ್ಟೇಡಿಯಮ್ ಎರಡು ಅಗ್ರ ತಂಡಗಳ ನಡುವೆ ನಡೆಯುವ ಮೊದಲ ಕ್ವಾಲಿಫೈಯರ್ ಪಂದ್ಯದ ಆತಿಥ್ಯವಹಿಸಲಿದೆ. ಆ ನಂತರ ಮೇ 30ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ.
ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಮ್ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣವು ಕ್ವಾಲಿಫೈಯರ್-2 ಹಾಗೂ ಗ್ರ್ಯಾಂಡ್ ಫೈನಲ್ ನ ಆತಿಥ್ಯವಹಿಸಲಿದೆ. ಕ್ವಾಲಿಫೈಯರ್-1ರಲ್ಲಿ ಸೋತಿರುವ ತಂಡ ಹಾಗೂ ಎಲಿಮಿನೇಟರ್ ವಿನ್ನರ್ ನಡುವೆ ಕ್ವಾಲಿಫೈಯರ್-2 ಪಂದ್ಯ ಜೂನ್ 1ರಂದು ನಡೆಯಲಿದೆ. 18ನೇ ಆವೃತ್ತಿಯ ಟಾಟಾ ಐಪಿಎಲ್ ವಿಜೇತ ತಂಡವನ್ನು ನಿರ್ಧರಿಸಲಿರುವ ಬಹು ನಿರೀಕ್ಷಿತ ಫೈನಲ್ ಪಂದ್ಯವನ್ನು ಜೂನ್ 3ರಂದು ಆಡಲಾಗುತ್ತದೆ.
ಐಪಿಎಲ್ ಪಂದ್ಯಾವಳಿಯು ಒಂದು ವಾರ ಸ್ಥಗಿತಗೊಳ್ಳುವ ಮೊದಲು ಹೈದರಾಬಾದ್ ಹಾಗೂ ಕೋಲ್ಕತಾ ನಗರಗಳು ಕೊನೆಯ 4 ಪಂದ್ಯಗಳ ಆತಿಥ್ಯವನ್ನು ವಹಿಸಿದ್ದವು. ಹವಾಮಾನ ಪರಿಸ್ಥಿತಿ ಹಾಗೂ ಇತರ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್ ಆಡಳಿತ ಮಂಡಳಿಯು ಪ್ಲೇ ಆಫ್‌ನ ಹೊಸ ಸ್ಥಳಗಳನ್ನು ನಿರ್ಧರಿಸಿದೆ.