ವೈಭವ್ ಸೂರ್ಯವಂಶಿಯ ಚಾರಿತ್ರಿಕ ಐಪಿಎಲ್ ಪದಾರ್ಪಣೆ: 8ನೇ ತರಗತಿ ವಿದ್ಯಾರ್ಥಿಯ ಆಟವನ್ನು ನೋಡಲು ನಿದ್ದೆಯಿಂದ ಎದ್ದು ಕುಳಿತಿದ್ದೇನೆ ಎಂದು ಉದ್ಗರಿಸಿದ ಗೂಗಲ್ ಸಿಇಒ ಸುಂದರ್ ಪಿಚ್ಚೈ!
Photo : livemint
ಕ್ಯಾಲಿಫೋರ್ನಿಯಾ: 8ನೇ ತರಗತಿ ವಿದ್ಯಾರ್ಥಿಯಾದ ವೈಭವ್ ಸೂರ್ಯವಂಶಿಯ ಚಾರಿತ್ರಿಕ ಐಪಿಎಲ್ ಪದಾರ್ಪಣೆ ಇಡೀ ಕ್ರಿಕೆಟ್ ಜಗತ್ತನ್ನು ನಿಬ್ಬೆರಗಾಗಿಸಿದೆ. ಈ ಅಚ್ಚರಿಗೆ ಗೂಗಲ್ ಸಿಇಒ ಸುಂದರ್ ಪಿಚ್ಚೈ ಕೂಡಾ ಹೊರತಾಗಿಲ್ಲ.
ಶನಿವಾರ ಲಕ್ನೊ ಸೂಪರ್ ಜೈಂಟ್ಸ್ ತಂಡದೆದುರು ನಡೆದ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ಪರ ಐಪಿಎಲ್ ಕ್ರೀಡಾಕೂಟದಲ್ಲಿ ಚೊಚ್ಚಲ ಪಂದ್ಯ ಆಡುವ ಮೂಲಕ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಚಾರಿತ್ರಿಕ ಸಾಧನೆ ಮಾಡಿದರು. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಪ್ರದರ್ಶಿಸಿದ ಬಲಿಷ್ಠ ಹೊಡೆತಗಳ ಸಾಮರ್ಥ್ಯ ಹಲವು ದಿಗ್ಗಜರ ಗಮನ ಸೆಳೆದಿದ್ದು, ಈ ಪೈಕಿ ಗೂಗಲ್ ಸಿಇಒ ಸುಂದರ್ ಪಿಚ್ಚೈ ಕೂಡಾ ಸೇರಿದ್ದಾರೆ.
ವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ಸಾಮರ್ಥ್ಯದ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸುಂದರ್ ಪಿಚ್ಚೈ, “8ನೇ ತರಗತಿ ವಿದ್ಯಾರ್ಥಿಯ ಐಪಿಎಲ್ ಚೊಚ್ಚಲ ಪಂದ್ಯವನ್ನು ವೀಕ್ಷಿಸಲು ನಿದ್ದೆಯಿಂದ ಮೇಲೆದ್ದು ಕುಳಿತಿದ್ದೆ. ಎಂತಹ ಪದಾರ್ಪಣೆ!” ಎಂದು ಉದ್ಗರಿಸಿದ್ದಾರೆ.
2025ರ ಐಪಿಎಲ್ ಋತುವಿನ ಮೆಗಾ ಹರಾಜಿನಲ್ಲಿ ರಾಜಸ್ತಾನ್ ರಾಯಲ್ಸ್ ತಂಡದಿಂದ 1.1 ಕೋಟಿ ರೂ.ಗೆ ಖರೀದಿಯಾಗಿದ್ದ ವೈಭವ್ ಸೂರ್ಯವಂಶಿ, ಶನಿವಾರ ಲಕ್ನೊ ಸೂಪರ್ ಜೈಂಟ್ಸ್ ತಂಡದೆದುರು ನಡೆದ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಅನಾವರಣಗೊಳಿಸಿದರು.
ತಮ್ಮ ಚೊಚ್ಚಲ ಪಂದ್ಯದಲ್ಲೇ ಕಲಾತ್ಮಕ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್ ಸೂರ್ಯವಂಶಿ, ಲಕ್ನೊ ಸೂಪರ್ ಜೈಂಟ್ಸ್ ತಂಡದ ಬೌಲರ್ ಶಾರ್ದೂಲ್ ಠಾಕೂರ್ ಎಸೆದ ಮೊದಲ ಓವರ್ ನಲ್ಲೇ ಮನಮೋಹಕ ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಯಶಸ್ವಿ ಜೈಸ್ವಾಲ್ ರೊಂದಿಗೆ 84 ರನ್ ಪೇರಿಸಿದ ವೈಭವ್ ಸೂರ್ಯವಂಶಿ, ಒಂಬತ್ತನೆ ಓವರ್ ನಲ್ಲಿ ಔಟಾಗುವ ಹೊತ್ತಿಗೆ ಕೇವಲ 20 ಬಾಲ್ ಗಳಲ್ಲಿ 34 ರನ್ ಸಿಡಿಸಿದರು.
ಯಶಸ್ವಿ ಜೈಸ್ವಾಲ್ (74), ವೈಭವ್ ಸೂರ್ಯವಂಶಿ (34) ಹಾಗೂ ರಿಯಾನ್ ಪರಾಗ್ (39) ಹೊರತುಪಡಿಸಿ, ಮಧ್ಯಮ ಕ್ರಮಾಂಕದ ಬ್ಯಾಟರ್ ಗಳು ವಿಫಲಗೊಂಡಿದ್ದರಿಂದ, ರೋಚಕ ಪೈಪೋಟಿ ಹೊಂದಿದ್ದ ಪಂದ್ಯದಲ್ಲಿ ಕೇವಲ 2 ರನ್ ಗಳಿಂದ ರಾಜಸ್ತಾನ್ ರಾಯಲ್ಸ್ ತಂಡ ಪರಾಭವಗೊಂಡಿತು. ಹೀಗಿದ್ದೂ, ತಮ್ಮ ಚೊಚ್ಚಲ ಪಂದ್ಯದಲ್ಲೇ ವೈಭವ್ ಸೂರ್ಯವಂಶಿ ಪ್ರದರ್ಶಿಸಿದ ಬಲಿಷ್ಠ ಹೊಡೆತಗಳ ಬಗ್ಗೆ ಹಲವು ಕ್ರಿಕೆಟ್ ದಿಗ್ಗಜರಿಂದ ಮೆಚ್ಚುಗೆಯ ಉದ್ಗಾರಗಳು ಕೇಳಿ ಬಂದಿವೆ.
Woke up to watch an 8th grader play in the IPL!!!! What a debut! https://t.co/KMR7TfnVmL
— Sundar Pichai (@sundarpichai) April 19, 2025