ಪುರುಷರ ಏಕದಿನ ವಿಶ್ವಕಪ್ 2027 | ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್ಗಳಿಗೆ ಭಾರೀ ಬೇಡಿಕೆ
Photo Credit : PTI
ಹೊಸದಿಲ್ಲಿ: ಮುಂಬರುವ 2027ರ ಆವೃತ್ತಿಯ ಪುರುಷರ ಏಕದಿನ ವಿಶ್ವಕಪ್ ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಪಂದ್ಯಕ್ಕೆ ಸುಮಾರು 84 ಲಕ್ಷ ಜನರು ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಆಯೋಜಕರು ಸೋಮವಾರ ತಿಳಿಸಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಯು 23 ವರ್ಷಗಳ ನಂತರ ಆಫ್ರಿಕಾ ನಾಡಿಗೆ ಮರಳುತ್ತಿದೆ. ದಕ್ಷಿಣ ಆಫ್ರಿಕಾ, ಝಿಂಬಾಬ್ವೆ ಹಾಗೂ ನಮೀಬಿಯಾ ಜಂಟಿಯಾಗಿ ಟೂರ್ನಿಯನ್ನು ಆಯೋಜಿಸುತ್ತಿವೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳು ಜೋಹಾನ್ಸ್ಬರ್ಗ್ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಅಕ್ಟೋಬರ್ 10ರಂದು ಮುಖಾಮುಖಿಯಾಗಲಿವೆ. ಈ ಕ್ರೀಡಾಂಗಣವು ಕೇವಲ 34,000 ಪ್ರೇಕ್ಷಕರನ್ನು ಹೊಂದುವ ಸಾಮರ್ಥ್ಯವನ್ನು ಹೊಂದಿದೆ. ಇದೇ ಮೈದಾನವು ನವೆಂಬರ್ 21ರಂದು ಫೈನಲ್ ಪಂದ್ಯದ ಆತಿಥ್ಯವನ್ನು ವಹಿಸಲಿದೆ. ಈ ಪಂದ್ಯಕ್ಕಾಗಿ ಸುಮಾರು 80 ಲಕ್ಷ(8 ಮಿಲಿಯನ್) ಅಭಿಮಾನಿಗಳು ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಕ್ರಿಕೆಟ್ ವೇಳಾಪಟ್ಟಿಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯವು ಅತ್ಯಂತ ನಿರೀಕ್ಷಿತ ಪಂದ್ಯಗಳಲ್ಲಿ ಒಂದಾಗಿದೆ. ಆರ್ಥಿಕವಾಗಿಯೂ ಅತ್ಯಂತ ಲಾಭದಾಯಕವಾಗಿದೆ. ವಿಶ್ವಕಪ್ ಟೂರ್ನಿಗಳಲ್ಲಿ ಭಾರತವು ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದು, ಹಿಂದಿನ 9 ಪಂದ್ಯಗಳಲ್ಲಿ ಜಯಶಾಲಿಯಾಗಿದೆ.
ನವೆಂಬರ್ 21ರ ತನಕ ಮತ್ತೆ ತೆರೆದಿರುವ ಟಿಕೆಟ್ ಅರ್ಜಿ ಪ್ರಕ್ರಿಯೆಯಲ್ಲಿ(ಬ್ಯಾಲಟ್ ವಿಂಡೋ) 193 ದೇಶಗಳ ಸುಮಾರು 30 ಲಕ್ಷ(ಮೂರು ಮಿಲಿಯನ್) ಅಭಿಮಾನಿಗಳು ಟಿಕೆಟ್ಗಾಗಿ ಬೇಡಿಕೆ ಸಲ್ಲಿಸಿದ್ದಾರೆ. ಅಕ್ಟೋಬರ್ 2ರಿಂದ ನವೆಂಬರ್ 21ರ ತನಕ ನಡೆಯಲಿರುವ 14 ತಂಡಗಳು ಭಾಗವಹಿಸುವ ಈ ವಿಶ್ವಕಪ್ ಟೂರ್ನಿಯ ಟಿಕೆಟ್ಗಾಗಿ ಒಟ್ಟು 12 ಕೋಟಿಗೂ(120 ಮಿಲಿಯನ್) ಅಧಿಕ ಜನರಿಂದ ಅರ್ಜಿಗಳು ಬಂದಿವೆ.