ಸತತ ಮೂರನೇ ಬಾರಿ ಡೇವಿಸ್ ಕಪ್ ಪ್ರಶಸ್ತಿ ಗೆದ್ದ ಇಟಲಿ
PC : olympics.com
ಬೊಲೊಗ್ನಾ, ನ.24: ಮ್ಯಾಟಿಯೊ ಬೆರ್ರೆಟ್ಟಿನಿ ಹಾಗೂ ಫ್ಲಾವಿಯೊ ಕೊಬೊಲ್ಲಿ ಸ್ಪೇನ್ ತಂಡದ ವಿರುದ್ಧ ತಮ್ಮ ಸಿಂಗಲ್ಸ್ ಪಂದ್ಯಗಳನ್ನು ಗೆದ್ದ ಹಿನ್ನೆಲೆಯಲ್ಲಿ ಇಟಲಿ ಟೆನಿಸ್ ತಂಡವು ಸತತ ಮೂರನೇ ಬಾರಿ ಡೇವಿಸ್ ಕಪ್ ಪ್ರಶಸ್ತಿಯನ್ನು ಬಾಚಿಕೊಂಡಿದೆ.
ಸ್ವದೇಶೀ ಪ್ರೇಕ್ಷಕರ ಬೆಂಬಲದೊಂದಿಗೆ ಆಡಿದ ಬೆರ್ರೆಟ್ಟಿನಿ ರವಿವಾರ ನಡೆದ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಪಾಬ್ಲೊ ಕರ್ರೆನೊ ಬುಸ್ಟಾರನ್ನು 6-3, 6-4 ನೇರ ಸೆಟ್ ಗಳ ಅಂತರದಿಂದ ಮಣಿಸಿದರು. ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಕೊಬೊಲ್ಲಿ ಅವರು ಜೌಮ್ ಮುನಾರ್‌ರನ್ನು 1-6, 7-6(5), 7-5 ಸೆಟ್ ಗಳ ಅಂತರದಿಂದ ಮಣಿಸುವುದರೊಂದಿಗೆ ಬೆಸ್ಟ್ ಆಫ್ ತ್ರೀ ಪಂದ್ಯದಲ್ಲಿ ಇಟಲಿ ತಂಡಕ್ಕೆ 2-0 ಅಂತರದ ಗೆಲುವು ತಂದುಕೊಟ್ಟರು.
ಆರು ಬಾರಿಯ ವಿನ್ನರ್ ಸ್ಪೇನ್ ತಂಡದ ವಿರುದ್ಧ ಜಯಭೇರಿ ಬಾರಿಸಿರುವ ಇಟಲಿ ತಂಡವು 1976, 2023 ಹಾಗೂ 2024ರ ನಂತರ ನಾಲ್ಕನೇ ಬಾರಿ ಡೇವಿಸ್ ಕಪ್‌ಗೆ ಮುತ್ತಿಟ್ಟಿದೆ. ಇಟಲಿ ಸತತ ಮೂರು ಡೇವಿಸ್ ಕಪ್ ಟ್ರೋಫಿಗಳನ್ನು ಗೆದ್ದಿರುವ ಮೊದಲ ದೇಶವಾಗಿದೆ.
ಉಭಯ ತಂಡಗಳು ಪ್ರಮುಖ ಆಟಗಾರರಿಂದ ವಂಚಿತವಾಗಿದ್ದು, ಸ್ಪೇನ್ ತಂಡವು ಕಾರ್ಲೊಸ್ ಅಲ್ಕರಾಝ್ ಇಲ್ಲದೇ ಆಡಿದರೆ, ಇಟಲಿ ತಂಡವು ಜನ್ನಿಕ್ ಸಿನ್ನರ್ ಹಾಗೂ ಲೊರೆಂರೊ ಮುಸೆಟ್ಟಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿತ್ತು. ಬೆರ್ರೆಟ್ಟಿನಿ ಹಾಗೂ ಕೊಬೊಲ್ಲಿ ಸಾಂದರ್ಭಿಕ ಪ್ರದರ್ಶನ ಮೂಲಕ ಇಟಲಿಗೆ ಪ್ರಶಸ್ತಿ ಗೆದ್ದುಕೊಟ್ಟರು.