×
Ad

ಡೋಪಿಂಗ್: ಜನ್ನಿಕ್ ಸಿನ್ನರ್ ಗೆ ಮೂರು ತಿಂಗಳ ನಿಷೇಧ

Update: 2025-02-15 21:11 IST

ಜನ್ನಿಕ್ ಸಿನ್ನರ್ |  PC : NDTV 

ರೋಮ್: ವಿಶ್ವದ ನಂ.1 ಟೆನಿಸ್ ಆಟಗಾರ ಜನ್ನಿಕ್ ಸಿನ್ನರ್ ವಿಶ್ವ ಉದ್ದೀಪನ ಮದ್ದು ತಡೆ ಘಟಕ(ವಾಡಾ)ದೊಂದಿಗೆ ರಾಜಿ ಮಾಡಿಕೊಂಡ ನಂತರ ಕಳೆದ ವರ್ಷ ನಿಷೇಧಿತ ದ್ರವ್ಯ ಸೇವನೆಯಲ್ಲಿ ಸಿಕ್ಕಿ ಬಿದ್ದಿರುವುದಕ್ಕೆ ವಿಧಿಸಲಾಗಿರುವ ಮೂರು ತಿಂಗಳ ನಿಷೇಧವನ್ನು ಸ್ವೀಕರಿಸಿದ್ದಾರೆ ಎಂದು ಶನಿವಾರ ವರದಿಯಾಗಿದೆ.

ಮಾದಕ ದ್ರವ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರವೂ ಆಗಸ್ಟ್‌ನಲ್ಲಿ ಸ್ವತಂತ್ರ ನ್ಯಾಯಮಂಡಳಿಯು ಸಿನ್ನರ್‌ ರನ್ನು ತಪ್ಪಿತಸ್ಥನಲ್ಲ ಎಂದು ತೀರ್ಪಿ ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ವಾಡಾ, ಕ್ರೀಡಾ ಪಂಚಾಯತಿ ನ್ಯಾಯಾಲಯಕ್ಕೆ (ಸಿಎಎಸ್)ಮೇಲ್ಮನವಿ ಸಲ್ಲಿಸಿತ್ತು.

ಮಸಾಜ್ ಹಾಗೂ ಸ್ಪೋರ್ಟ್ಸ್ ಥೆರಪಿಯ ವೇಳೆ ನನ್ನ ಸಹಾಯಕ ತಂಡದ ಮೂಲಕ ಈ ನಿಷೇಧಿತ ದ್ರವ್ಯವು ನನ್ನ ದೇಹ ಸೇರಿತ್ತು ಎಂದು ಸಿನ್ನರ್ ವಾದಿಸಿದ್ದರು.

ಎಪ್ರಿಲ್‌ನಲ್ಲಿ ಸಿಎಎಸ್ ಈ ಪ್ರಕರಣವನ್ನು ಆಲಿಸಿತ್ತು.

ನಿಷೇಧವು ಫೆಬ್ರವರಿ 9ರಿಂದ ಮೇ 4ರ ತನಕ ಅನ್ವಯವಾಗಲಿದ್ದು, ಇದರರ್ಥ 23ರ ಹರೆಯದ ಸಿನ್ನರ್ ಅವರು ಇಂಡಿಯನ್ ವೆಲ್ಸ್, ಮಿಯಾಮಿ, ಮೊಂಟೆ ಕಾರ್ಲೊ ಹಾಗೂ ಮ್ಯಾಡ್ರಿಡ್ ಓಪನ್ ಸಹಿತ ಹಲವು ಪ್ರಮುಖ ಪಂದ್ಯಾವಳಿಗಳಿಂದ ವಂಚಿತರಾಗಲಿದ್ದಾರೆ.

ಇಟಲಿ ಆಟಗಾರ ಸಿನ್ನರ್ ಫ್ರೆಂಚ್ ಓಪನ್‌ಗಿಂತ(ಮೇ 25ರಿಂದ ಜೂನ್ 8)ಮೊದಲು ರೋಮ್‌ನಲ್ಲಿ ಮೇ 7ರಿಂದ 18ರ ತನಕ ನಡೆಯಲಿರುವ ಇಟಲಿ ಓಪನ್ ವೇಳೆಗೆ ಟೆನಿಸ್‌ಗೆ ವಾಪಸಾಗುವ ನಿರೀಕ್ಷೆ ಇದೆ.

ಸಿನ್ನರ್ ಅವರ ಅನರ್ಹ ಅವಧಿಯು 2025ರ ಫೆಬ್ರವರಿ 9ರಿಂದ 2025ರ ಮೇ 4 ಮಧ್ಯರಾತ್ರಿ 11.59ರ ತನಕ ಇರಲಿದೆ ಎಂದು ವಾಡಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸಿನ್ನರ್ ಅವರು 2025ರ ಎಪ್ರಿಲ್‌ನಲ್ಲಿ ಅಧಿಕೃತ ತರಬೇತಿ ಚಟುವಟಿಕೆಗೆ ಮರಳುವ ಸಾಧ್ಯತೆ ಇದೆ. ಫ್ರೆಂಚ್ ಓಪನ್‌ಗಿಂತ ಮೊದಲು ಟೆನಿಸ್ ಆಡಲು ಅರ್ಹರಾಗಲಿದ್ದಾರೆ ಎಂದು ವರದಿಯಾಗಿದೆ.

ಎರಡೂ ಕಡೆಯವರು ರಾಜಿ ಮಾಡಿಕೊಂಡ ಕಾರಣ ಸಿಎಎಸ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಾಡಾ ಅಧಿಕೃತವಾಗಿ ಹಿಂಪಡೆದಿದೆ.

ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ತನ್ನ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡ ನಂತರ ಸಿನ್ನರ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಮುಂಬರುವ ಕ್ಲೇ-ಕೋರ್ಟ್ ಸ್ಪರ್ಧೆಗಳಲ್ಲಿ ಪ್ರಮುಖ ಸ್ಪರ್ಧಿಯಾಗಿದ್ದಾರೆ. ಮೆಲ್ಬರ್ನ್‌ನಲ್ಲಿ ಚಾಂಪಿಯನ್ ಆಗಿರುವ ಸಿನ್ನರ್ ಮುಂಬರುವ ಗ್ರ್ಯಾನ್‌ಸ್ಲಾಮ್‌ನಲ್ಲಿ ಸ್ಪರ್ಧಿಸಲು ಅರ್ಹರಾಗಿದ್ದಾರೆ.

ಎರಡು ಪ್ರತಿಷ್ಠಿತ ಮಾಸ್ಟರ್ಸ್-1000 ಟೂರ್ನಿಯಾಗಿರುವ ಇಂಡಿಯನ್ ವೆಲ್ಸ್ ಹಾಗೂ ಮಿಯಾಮಿಯಲ್ಲಿ ಸಿನ್ನರ್ ಅನುಪಸ್ಥಿತಿಯು ಎಟಿಪಿ ನಂ.1 ರ್ಯಾಂಕಿಂಗ್ ಸ್ಪರ್ಧೆಯ ಮೇಲೆ ಪ್ರಭಾವಬೀರುವ ಸಾಧ್ಯತೆಯಿದೆ.

ಸಿನ್ನರ್ ತನ್ನ ತವರು ಪಟ್ಟಣ ರೋಮ್‌ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪುನರಾಗಮನ ಮಾಡುವತ್ತ ಗಮನ ಹರಿಸಲಿದ್ದು, ಈ ಮೂಲಕ ಫ್ರೆಂಚ್ ಓಪನ್ ವೇಳೆಗೆ ಲಯ ಕಂಡುಕೊಳ್ಳುವ ಗುರಿ ಇಟ್ಟುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News