×
Ad

ವಿಶ್ವ ಟೆನಿಸ್ ರ‍್ಯಾಂಕಿಂಗ್: ಮತ್ತೆ ಅಗ್ರ ಸ್ಥಾನಕ್ಕೇರಿದ ಜನ್ನಿಕ್ ಸಿನ್ನರ್

Update: 2025-11-03 21:03 IST

ಜನ್ನಿಕ್ ಸಿನ್ನರ್ | PC : NDTV 

ಪ್ಯಾರಿಸ್, ನ.3: ಫೆಲಿಕ್ಸ್ ಅಗೆರ್-ಅಲಿಯಸಿಮ್‌ರನ್ನು ಮಣಿಸಿದ ಇಟಲಿಯ ಆಟಗಾರ ಜನ್ನಿಕ್ ಸಿನ್ನರ್ ಇದೇ ಮೊದಲ ಬಾರಿ ಪ್ಯಾರಿಸ್ ಮಾಸ್ಟರ್ಸ್ ಟ್ರೋಫಿಯನ್ನು ಗೆದ್ದಿದ್ದಾರೆ. ಈ ಮೂಲಕ ನಾಲ್ಕು ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ವಿಶ್ವ ಟೆನಿಸ್ ರ‍್ಯಾಂಕಿಂಗ್‌ನಲ್ಲಿ ಮತ್ತೊಮ್ಮೆ ಅಗ್ರಸ್ಥಾನ ಅಲಂಕರಿಸಿದ್ದಾರೆ.

ರವಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ ನಲ್ಲಿ ಸಿನ್ನರ್ ಅವರು ಅಲಿಯಸಿಮ್‌ರನ್ನು 6-4, 7-6(7/4)ಸೆಟ್‌ ಗಳ ಅಂತರದಿಂದ ಮಣಿಸಿ ಪ್ಯಾರಿಸ್‌ ನಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮಾಜಿ ವಿಶ್ವದ ನಂ.1 ಆಟಗಾರ ಸ್ಪೇನ್‌ ನ ಕಾರ್ಲೊಸ್ ಅಲ್ಕರಾಜ್ ಪಂದ್ಯಾವಳಿಯ ಆರಂಭದಲ್ಲೇ ಸೋತು ನಿರ್ಗಮಿಸಿದ್ದಾರೆ.

ಸಿನ್ನರ್ ಕಳೆದ ವರ್ಷದ ಜೂನ್‌ನಲ್ಲಿ ಮೊದಲ ಬಾರಿ ನಂ.1 ರ‍್ಯಾಂಕಿಂಗ್‌ ಗೆ ತಲುಪಿದ್ದರು. ಸೆಪ್ಟಂಬರ್‌ ನಲ್ಲಿ ಅಲ್ಕರಾಝ್ ವಿರುದ್ಧ ಯು.ಎಸ್. ಓಪನ್ ಫೈನಲ್ ಪಂದ್ಯವನ್ನು ಸೋಲುವ ತನಕ 65 ವಾರಗಳ ಕಾಲ ಅಗ್ರಸ್ಥಾನದಲ್ಲಿದ್ದರು.

ಈ ವರ್ಷ ಫ್ರೆಂಚ್ ಓಪನ್ ಫೈನಲ್‌ ನಲ್ಲಿ ಅಲ್ಕರಾಝ್ ವಿರುದ್ಧ 5 ಸೆಟ್‌ ಗಳ ಅಂತರದಿಂದ ಸೋತಿರುವ ಸಿನ್ನರ್ ತನ್ನ ಎದುರಾಳಿಯಿಂದ ನಂ.1 ಸ್ಥಾನವನ್ನು ಕಸಿದುಕೊಂಡು ಸೇಡು ತೀರಿಸಿಕೊಂಡಿದ್ದಾರೆ.

ಕಳೆದ ವರ್ಷ ಮಾರ್ಚ್‌ನಲ್ಲಿ 2 ಬಾರಿ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ಮೂರು ತಿಂಗಳ ಕಾಲ ನಿಷೇಧಕ್ಕೆ ಒಳಗಾದ ಹೊರತಾಗಿಯೂ ಸಿನ್ನರ್ ಈ ವರ್ಷ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್ ಚಾಂಪಿಯನ್‌ ಶಿಪ್ ಸಹಿತ ಐದು ಪ್ರಶಸ್ತಿಗಳನ್ನು ಜಯಿಸಿದ್ದಾರೆ.

ರವಿವಾರದ ಗೆಲುವಿನ ಮೂಲಕ ಸಿನ್ನರ್ ಅವರು 2024ರ ಅಕ್ಟೋಬರ್ ನಂತರ ತನ್ನ ಮೊದಲ 1000 ಮಟ್ಟದ ಪ್ರಶಸ್ತಿಯನ್ನು ಗೆದ್ದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News