ಮ್ಯಾಡ್ರಿಡ್ ಓಪನ್ ಪ್ರಶಸ್ತಿ ಜಯಿಸಿ ಇತಿಹಾಸ ನಿರ್ಮಿಸಿದ ಜನ್ನಿಕ್ ಸಿನ್ನರ್
ಜನ್ನಿಕ್ ಸಿನ್ನರ್ | Photo Credit : AP , PTI
ಮ್ಯಾಡ್ರಿಡ್, ಮೇ 4: ಪುರುಷರ ಟೆನಿಸ್‌ನಲ್ಲಿ ತನ್ನ ಪಾರಮ್ಯವನ್ನು ಮುಂದುವರಿಸಿರುವ ಜನ್ನಿಕ್ ಸಿನ್ನರ್ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್‌ರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸುವ ಮೂಲಕ ಮ್ಯಾಡ್ರಿಡ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ವಿಶ್ವದ ನಂ.1 ಆಟಗಾರ ಸಿನ್ನರ್ ರವಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಝ್ವೆರೆವ್ ವಿರುದ್ಧ್ದ 6-1, 6-2 ನೇರ ಸೆಟ್‌ಗಳ ಅಂತರದಿಂದ ಸುಲಭವಾಗಿ ಗೆಲುವು ದಾಖಲಿಸಿದರು. ಸತತ ಐದು ಎಟಿಪಿ ಮಾಸ್ಟರ್ಸ್-1000 ಪ್ರಶಸ್ತಿಗಳನ್ನು ಗೆದ್ದಿರುವ ಮೊದಲ ಆಟಗಾರ ಎನಿಸಿಕೊಂಡಿರುವ ಸಿನ್ನರ್ ಇತಿಹಾಸ ನಿರ್ಮಿಸಿದರು.
ಇಟಲಿ ಆಟಗಾರ ಸಿನ್ನರ್ ಫೈನಲ್ ಪಂದ್ಯದುದ್ದಕ್ಕೂ ಸಂಪೂರ್ಣ ಹಿಡಿತ ಸಾಧಿಸಿದಂತೆ ಕಂಡುಬಂದಿದ್ದು, ಪಂದ್ಯದ ವೇಳೆ ಝ್ವೆರೆವ್‌ಗೆ ಒಂದು ಬ್ರೇಕ್ ಪಾಯಿಂಟನ್ನು ಕೂಡ ಗಳಿಸಲು ಅವಕಾಶ ನೀಡಲಿಲ್ಲ.
ಸಿನ್ನರ್ ಇದೀಗ ಎಟಿಪಿ ಟೂರ್ನಿಗಳಲ್ಲಿ ಸತತ 9ನೇ ಬಾರಿ ಝ್ವೆರೆವ್‌ರನ್ನು ಸೋಲಿಸಿದ್ದಾರೆ. ಕಳೆದ ವರ್ಷ ಪ್ಯಾರಿಸ್ ಓಪನ್ ಈ ವರ್ಷ ಇಂಡಿಯನ್ ವೇಲ್ಸ್, ಮಯಾಮಿ, ಮಾಂಟೆಕಾರ್ಲೊ ಹಾಗೂ ಮ್ಯಾಡ್ರಿಡ್ ಟೂರ್ನಿಗಳಲ್ಲಿ ಕೇವಲ ಎರಡು ಸೆಟ್‌ಗಳನ್ನು ಕಳೆದುಕೊಂಡು ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
‘‘ವರ್ಷಗಳ ಕಾಲ ನಡೆಸಿದ ಪ್ರಯತ್ನ, ಶಿಸ್ತು ಹಾಗೂ ತ್ಯಾಗದಿಂದಾಗಿ ಈ ಫಲಿತಾಂಶ ಸಾಧ್ಯವಾಗಿದೆ. ಉತ್ತಮ ಸಾಧನೆಗೆ ಸತತ ಪರಿಶ್ರಮದ ಅಗತ್ಯವಿದೆ. ಕಠಿಣ ಸಮಯವು ಕ್ರೀಡೆಯ ಸಹಜ ಭಾಗವಾಗಿದೆ’’ ಎಂದು ಗೆಲುವಿನ ನಂತರ ಸಿನ್ನರ್ ಹೇಳಿದ್ದಾರೆ.
‘‘ನನ್ನ ಸಾಧನೆಯ ಹಿಂದೆ ಬಹಳಷ್ಟು ಶ್ರಮವಿದೆ ಎಂದು ನನ್ನ ಭಾವನೆ. ನಾನು ಪ್ರತಿದಿನ ಸಾಕಷ್ಟು ಸಮರ್ಪಣೆ ಹಾಗೂ ತ್ಯಾಗ ಮಾಡಿದ್ದೇನೆ. ಈ ಫಲಿತಾಂಶ ಬಹಳಷ್ಟು ಅರ್ಥಪೂರ್ಣವಾಗಿದೆ. ಒಂದು ಹಂತದಲ್ಲಿ ಫಲಿತಾಂಶಗಳು ಕಡಿಮೆಯಾಗಲಿವೆ. ಇದು ಸಾಮಾನ್ಯ’’ ಎಂದು ಎಟಿಪಿ ವೆಬ್‌ಸೈಟ್‌ಗೆ ಸಿನ್ನರ್ ತಿಳಿಸಿದರು.