×
Ad

ಜಪಾನ್ ಓಪನ್: ಪ್ರಣಯ್, ಸಾತ್ವಿಕ್-ಚಿರಾಗ್ ಗೆ ಸೋಲು, ಸೇನ್ ಸೆಮಿ ಫೈನಲ್ ಗೆ

Update: 2023-07-28 23:53 IST

Photo : ಲಕ್ಷ ಸೇನ್ | PTI

ಟೋಕಿಯೊ : ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಭಾರತದ ಅಗ್ರ ರ್ಯಾಂಕಿನ ಆಟಗಾರ ಎಚ್.ಎಸ್. ಪ್ರಣಯ್ ಸೋಲುಂಡಿದ್ದಾರೆ, ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ ಸೇನ್ ನೇರ ಗೇಮ್ಗಳ ಅಂತರದಿಂದ ಜಯ ಸಾಧಿಸಿ ಸೆಮಿ ಫೈನಲ್ಗೆ ತಲುಪುವ ಮೂಲಕ ಸ್ಪರ್ಧೆಯಲ್ಲಿರುವ ಏಕೈಕ ಭಾರತೀಯ ಆಟಗಾರನಾಗಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ನಲ್ಲಿ ವಿಶ್ವದ ನಂ.10ನೇ ಆಟಗಾರ ಪ್ರಣಯ್ ಡೆನ್ಮಾರ್ಕ್ನ ವಿಕ್ಟರ್ ಎಕ್ಸೆಲ್ಸನ್ ವಿರುದ್ಧ 21-19, 18-21, 8-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.

ತೀವ್ರ ಪೈಪೋಟಿಯಿಂದ ಕೂಡಿದ್ದ ಮೊದಲ ಗೇಮ್ನ್ನು 21-19 ಅಂತರದಿಂದ ಗೆದ್ದುಕೊಂಡಿರುವ ಪ್ರಣಯ್ ಉತ್ತಮ ಆರಂಭ ಪಡೆದಿದ್ದರು. ವಿಶ್ವದ ನಂ.1 ಆಟಗಾರ ಎಕ್ಸೆಲ್ಸನ್ ತೀವ್ರ ಪ್ರತಿರೋಧ ಒಡ್ಡಿದ್ದು, ಉಳಿದೆರಡು ಗೇಮ್ಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿ ಜಪಾನ್ ಓಪನ್ನಲ್ಲಿ ಸೆಮಿ ಫೈನಲ್ ತಲುಪಿದರು.

ಇದಕ್ಕೂ ಮೊದಲು ನಡೆದ ಮತ್ತೊಂದು ಪುರುಷರ ಸಿಂಗಲ್ಸ್ನಕ್ವಾರ್ಟರ್ ಫೈನಲ್ನಲ್ಲಿ ವಿಶ್ವದ ನಂ.13ನೇ ಆಟಗಾರ ಲಕ್ಷ ಸೇನ್ ಜಪಾನ್ನ ಕೊಕಿ ವಟನಬೆ ಅವರನ್ನು 21-15, 21-19 ಗೇಮ್ಗಳ ಅಂತರದಿಂದ ಮಣಿಸಿದರು. ಇದರೊಂದಿಗೆ ಸತತ ಮೂರನೇ ಬಾರಿ ಸೆಮಿ ಫೈನಲ್ ತಲುಪಿದರು. ಕೆನಡಾ ಹಾಗೂ ಅಮೆರಿಕ ಓಪನ್ನಲ್ಲಿ ಸೇನ್ ಅವರು ಸೆಮಿ ಫೈನಲ್ ತಲುಪಿದ್ದರು. ಸೇನ್ ಸೆಮಿ ಫೈನಲ್ನಲ್ಲಿ ಇಂಡೋನೇಶ್ಯದ ಐದನೇ ಶ್ರೇಯಾಂಕದ ಜೋನಾಥನ್ ಕ್ರಿಸ್ಟಿ ಸವಾಲನ್ನು ಎದುರಿಸಲಿದ್ದಾರೆ. ಈ ತಿಂಗಳಾರಂಭದಲ್ಲಿ ಕೆನಡಾ ಓಪನ್ ಸೂಪರ್-500 ಟೂರ್ನಿಯನ್ನು ಜಯಿಸಿದ್ದ ಸೇನ್ ಆರಂಭದಲ್ಲಿ ಮೇಲುಗೈ ಸಾಧಿಸಿ ಎರಡು ಸೆಟ್ ಅಂತರದಿಂದ ಜಯ ಸಾಧಿಸಿದರು.

ಇದೇ ವೇಳೆ, ಭಾರತದ ಫಾರ್ಮ್ನಲ್ಲಿರುವ ಡಬಲ್ಸ್ ಜೋಡಿ ಸಾತ್ವಿಕ್ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಉತ್ತಮ ಪ್ರದರ್ಶನ ಮುಂದುವರಿಸಲು ವಿಫಲವಾಗಿದ್ದು, ಚೈನೀಸ್ ತೈಪೆಯ ಒಲಿಂಪಿಕ್ಸ್ ವಿಜೇತರಾದ ಲೀ ಯಾಂಗ್ ಹಾಗೂ ವಾಂಗ್ ಚಿ-ಲಾನ್ ವಿರುದ್ಧ 15-21, 25-23, 16-21 ಅಂತರದಿಂದ ಸೋತಿದ್ದಾರೆ. ಈ ಮೂಲಕ ಸಾತ್ವಿಕ್-ಚಿರಾಗ್ ಜೋಡಿಯ 12 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News