2ನೇ ಟೆಸ್ಟ್‌ಗೆ ಅಭ್ಯಾಸ ಆರಂಭಿಸಿದ ಜಸ್‌ಪ್ರಿತ್ ಬುಮ್ರಾ
PC : X
ಬರ್ಮಿಂಗ್ ಹ್ಯಾಮ್: ಭಾರತ ಕ್ರಿಕೆಟ್ ತಂಡದ ಸ್ಟಾರ್ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಎಜ್ ಬಾಸ್ಟನ್ ನಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸಲು ಶನಿವಾರ ತನ್ನ ತರಬೇತಿ ಆರಂಭಿಸಿದ್ದಾರೆ.
ಶುಕ್ರವಾರ ನೆಟ್ ಪ್ರಾಕ್ಟೀಸ್‌ನಿಂದ ದೂರವುಳಿದಿದ್ದ ಬುಮ್ರಾ ಅವರು ಶನಿವಾರ ನೆಟ್ ನಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು. ಬುಮ್ರಾ 2ನೇ ಟೆಸ್ಟ್ ಪಂದ್ಯದಲ್ಲಿ ಲಭ್ಯವಾಗುವ ಕುರಿತಂತೆ ಅನುಮಾನ ಇರುವಾಗಲೇ ಇಂದು ಅಭ್ಯಾಸದಲ್ಲಿ ಭಾಗವಹಿಸಿದರು.
ಹೆಡ್ಡಿಂಗ್ಲೆಯಲ್ಲಿ 5 ವಿಕೆಟ್‌ಗಳಿಂದ ಸೋತ ನಂತರ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಗಾಗಿ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವು ಸದ್ಯ 0-1ರಿಂದ ಹಿನ್ನಡೆಯಲ್ಲಿದೆ. ಶುಕ್ರವಾರದಿಂದಲೆ ಭಾರತ ತಂಡದ ಹೆಚ್ಚಿನೆಲ್ಲಾ ಆಟಗಾರರು ಅಭ್ಯಾಸವನ್ನು ಆರಂಭಿಸಿದ್ದಾರೆ. ಬುಮ್ರಾ ಹಾಗೂ ಅವರ ಸಹ ವೇಗಿ ಪ್ರಸಿದ್ಧ ಕೃಷ್ಣ ಅವರು ಸಕ್ರಿಯ ಡ್ರಿಲ್ಸ್‌ನಿಂದ ದೂರ ಉಳಿದಿದ್ದು, ಇದು ಬರ್ಮಿಂಗ್ ಹ್ಯಾಮ್ ಟೆಸ್ಟ್‌ನಲ್ಲಿ ಅವರ ಸಿದ್ಧತೆಯ ಕುರಿತ ಊಹಾಪೋಹಕ್ಕೆ ಪುಷ್ಟಿ ನೀಡಿತ್ತು.
ಭಾರತದ ವೇಗದ ಬೌಲಿಂಗ್ ವಿಭಾಗಕ್ಕೆ ಶನಿವಾರ ಹೊಸ ಕಳೆ ಬಂದಿದ್ದು, ಬುಮ್ರಾ, ಪ್ರಸಿದ್ಧ್ ಹಾಗೂ ಮುಹಮ್ಮದ್ ಸಿರಾಜ್ ನೆಟ್ ನಲ್ಲಿ ಬೌಲಿಂಗ್ ಮಾಡಿದ್ದಾರೆ. ಸಿರಾಜ್ ಶುಕ್ರವಾರ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದರು.
ಬ್ಯಾಟರ್‌ಗಳ ಪೈಕಿ ಹೆಡ್ಡಿಂಗ್ಲೆಯಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದ ಸಾಯಿ ಸುದರ್ಶನ್ ಇಂದು ಬೇಗನೆ ನೆಟ್ ಅಭ್ಯಾಸ ಆರಂಭಿಸಿದರು. ನಾಯಕ ಶುಭಮನ್ ಗಿಲ್, ಉಪ ನಾಯಕ ರಿಷಭ್ ಪಂತ್, ಕೆ.ಎಲ್.ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಶನಿವಾರದ ಅಭ್ಯಾಸದಲ್ಲಿ ಗೈರು ಹಾಜರಾಗಿದ್ದು ಗಮನ ಸೆಳೆಯಿತು.
ಬುಮ್ರಾ ಅವರು ಅಭ್ಯಾಸದ ಕಣಕ್ಕೆ ಮರಳಿದ್ದು ಧನಾತ್ಮಕ ಅಂಶವಾಗಿದೆ. ಆದರೆ ಅವರು 2ನೇ ಟೆಸ್ಟ್ ಪಂದ್ಯದಲ್ಲಿ ಲಭ್ಯವಾಗುವ ಬಗ್ಗೆ ಅನಿಶ್ಚಿತತೆ ಇದೆ. 31ರ ಹರೆಯದ ಬುಮ್ರಾ ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 44 ಓವರ್‌ಗಳ ಬೌಲಿಂಗ್ ಮಾಡಿದ್ದಾರೆ. ಕೆಲಸದ ಒತ್ತಡವನ್ನು ನಿಭಾಯಿಸುವ ತಂತ್ರವಾಗಿ 5 ಟೆಸ್ಟ್ ಪಂದ್ಯಗಳಲ್ಲಿ ಕೇವಲ 3ರಲ್ಲಿ ಆಡುವ ನಿರೀಕ್ಷೆ ಇದೆ.