×
Ad

ಮ್ಯಾಂಚೆಸ್ಟರ್ ಟೆಸ್ಟ್ ನಲ್ಲಿ ಜಸ್ ಪ್ರಿತ್ ಬುಮ್ರಾ ಆಡಬೇಕು: ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಸಲಹೆ

Update: 2025-07-18 21:27 IST

ಜಸ್‌ಪ್ರಿತ್ ಬುಮ್ರಾ | PC : PTI

ಲಂಡನ್, ಜು.18: ಮ್ಯಾಂಚೆಸ್ಟರ್ ನಲ್ಲಿ ನಡೆಯಲಿರುವ ಇಂಗ್ಲೆಂಡ್ ತಂಡದ ವಿರುದ್ಧದ ಗೆಲ್ಲಲೇಬೇಕಾದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ತನ್ನ ಪ್ರಮುಖ ಅಸ್ತ್ರವಾಗಿರುವ ಜಸ್ ಪ್ರಿತ್ ಬುಮ್ರಾಗೆ ವಿಶ್ರಾಂತಿ ನೀಡದೆ ಅವರನ್ನು ಆಡಿಸಬೇಕು ಎಂದು ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಸಲಹೆ ನೀಡಿದ್ದಾರೆ.

ಸರಣಿಯಲ್ಲಿ 1-2 ರಿಂದ ಹಿನ್ನಡೆಯಲ್ಲಿರುವ ಭಾರತ ತಂಡವು ನಿರ್ಣಾಯಕ 4ನೇ ಟೆಸ್ಟ್ ಪಂದ್ಯದಲ್ಲಿ ಶಕ್ತಿಶಾಲಿ ಬೌಲಿಂಗ್ ದಾಳಿಯನ್ನು ಕಣಕ್ಕಿಳಿಸಬೇಕು. ಬುಮ್ರಾರನ್ನು ಹೊರಗಿಡುವುದು ಆಯ್ಕೆಯಾಗಬಾರದು ಎಂದರು.

‘‘ಮುಂದಿನ ಪಂದ್ಯದಲ್ಲಿ ಜಸ್ ಪ್ರಿತ್ ಬುಮ್ರಾ ಆಡಲೇಬೇಕು. ಇದು ಭಾರತದ ಪಾಲಿಗೆ ಗೆಲ್ಲಲೇಬೇಕಾದ ಪಂದ್ಯ. ಭಾರತವು ತನ್ನ ಉತ್ತಮ ಬೌಲಿಂಗ್ ದಾಳಿಯನ್ನು ಆಡಿಸುವ ಅಗತ್ಯವಿದೆ. ಮ್ಯಾಂಚೆಸ್ಟರ್ ನಲ್ಲಿನ ಪಿಚ್ ಇಂಗ್ಲೆಂಡ್ ನಲ್ಲಿರುವ ಅತ್ಯಂತ ವೇಗ ಹಾಗೂ ಬೌನ್ಸ್ ಹೊಂದಿರುವ ಪಿಚ್ ಆಗಿದೆ. ಹೀಗಾಗಿ ಅವರು ಆಡಬೇಕಾಗಿದೆ’’ ಎಂದು ಸುದ್ದಿಸಂಸ್ಥೆ ಎಎನ್ಐಗೆ ಪನೇಸರ್ ತಿಳಿಸಿದ್ದಾರೆ.

ಬುಮ್ರಾ ಸರಣಿಯಲ್ಲಿ ಆಡಿರುವ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಮಿಂಚಿದ್ದಾರೆ. ಕೆಲಸದ ಒತ್ತಡವನ್ನು ನಿಭಾಯಿಸುವ ಭಾಗವಾಗಿ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಬುಮ್ರಾಗೆ ವಿಶ್ರಾಂತಿ ನೀಡಬಹುದೆಂದು ಆರಂಭದಲ್ಲಿ ನಿರೀಕ್ಷಿಸಲಾಗಿತ್ತು.

ಭಾರತದ ಸಹಾಯಕ ಕೋಚ್ ರಿಯಾನ್ ಟೆನಿಸ್ ಡೊಶೆಟ್ ಅವರು ಮ್ಯಾಂಚೆಸ್ಟರ್ ನಲ್ಲಿ ಬುಮ್ರಾರನ್ನು ಆಡಿಸುವ ಕುರಿತು ಒಲವು ತೋರಿದ್ದಾರೆ.

ಅರ್ಷದೀಪ್ ಸಿಂಗ್ರನ್ನು ಆಡಿಸದೆ ಇರುವ ಭಾರತ ತಂಡದ ನಿರ್ಧಾರವನ್ನು ಪ್ರಶ್ನಿಸಿದ ಪನೇಸರ್, ‘‘ಅರ್ಷದೀಪ್ ಅವರ ಎಡಗೈ ವೇಗದ ಬೌಲಿಂಗ್ ಹಾಗೂ ಕೌಂಟಿ ಕ್ರಿಕೆಟ್ ನಲ್ಲಿ ಆಡಿರುವ ಅನುಭವವು ಭಾರತಕ್ಕೆ ಉಪಯುಕ್ತವಾಗಬಹುದು. ಅವರನ್ನು ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿಸದೆ ಇರುವುದು ನನಗೆ ಅಚ್ಚರಿ ತಂದಿದೆ. ಇಂಗ್ಲೆಂಡ್ ನ ವಾತಾವರಣದಲ್ಲಿ ಅವರು ತುಂಬಾ ಪರಿಣಾಮಕಾರಿಯಾಗಬಲ್ಲರು’’ಎಂದರು.

ಗುರುವಾರ ಟೀಮ್ ಇಂಡಿಯಾದ ತರಬೇತಿಯ ವೇಳೆ ಕೈಗೆ ಗಾಯ ಮಾಡಿಕೊಂಡಿರುವ ಅರ್ಷದೀಪ್ ಅವರು ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗುವುದು ಅನಿಶ್ಚಿತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News