×
Ad

ಐಪಿಎಲ್: ಮುಂಬೈ ಪರ ಗರಿಷ್ಠ ವಿಕೆಟ್ ಪಡೆದ ಬುಮ್ರಾ

Update: 2025-04-27 23:05 IST

Photo : PTI

ಮುಂಬೈ: ಐಪಿಎಲ್ ಟಿ20 ಲೀಗ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಪರವಾಗಿ ಹಿರಿಯ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಗರಿಷ್ಠ ವಿಕೆಟ್ ಕಲೆ ಹಾಕಿದ ಕೀರ್ತಿಗೆ ಭಾಜನರಾದರು.

ವಾಂಖೆಡೆ ಕ್ರೀಡಾಂಗಣದಲ್ಲಿ ರವಿವಾರ ನಡೆದ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದ ವೇಳೆ ಬುಮ್ರಾ ಈ ಸಾಧನೆ ಮಾಡಿದರು.

3ನೇ ಓವರ್‌ನಲ್ಲಿ ಬೌಲಿಂಗ್‌ಗೆ ಇಳಿದ ಬುಮ್ರಾ ದಕ್ಷಿಣ ಆಫ್ರಿಕಾದ ಬ್ಯಾಟರ್ ಮರ್ಕ್ರಮ್ ವಿಕೆಟನ್ನು ಉರುಳಿಸಿದರು. ಮುಂಬೈ ಪರ ಆಡಿರುವ 139 ಪಂದ್ಯಗಳಲ್ಲಿ 171ನೇ ವಿಕೆಟ್ ಪಡೆದರು. ಈ ವಿಕೆಟ್‌ನ ಮೂಲಕ ಬುಮ್ರಾ ಅವರು ಶ್ರೀಲಂಕಾದ ಲೆಜೆಂಡ್ ಲಸಿತ್ ಮಾಲಿಂಗ ಅವರ ದಾಖಲೆಯನ್ನು ಮುರಿದರು. ಮಾಲಿಂಗ ಈಹಿಂದೆ 122 ಪಂದ್ಯಗಳಲ್ಲಿ 170 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದರು.

2013ರಲ್ಲಿ ಐಪಿಎಲ್‌ಗೆ ಕಾಲಿಟ್ಟ ನಂತರ ಬುಮ್ರಾ ಎಲ್ಲ ಪಂದ್ಯಗಳನ್ನು ಮುಂಬೈ ತಂಡದ ಪರವಾಗಿಯೇ ಆಡಿದ್ದಾರೆ. ಮುಂಬೈ ತಂಡವು ಐದು ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಒತ್ತಡದ ಪರಿಸ್ಥಿತಿಯಲ್ಲೂ ಸ್ಥಿರ ಪ್ರದರ್ಶನ ನೀಡುವ ಅವರ ಸಾಮರ್ಥ್ಯವು ಅವರನ್ನು ವಿಶ್ವ ಕ್ರಿಕೆಟ್‌ನ ಓರ್ವ ಅತ್ಯಂತ ಭಯಾನಕ ಬೌಲರ್‌ಗಳಲ್ಲಿ ಒಬ್ಬರನ್ನಾಗಿಸಿದೆ.

ಮುಂಬೈ ತಂಡದ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ 136 ಪಂದ್ಯಗಳಲ್ಲಿ 127 ವಿಕೆಟ್‌ಗಳನ್ನು ಪಡೆದು 3ನೇ ಸ್ಥಾನದಲ್ಲಿದ್ದಾರೆ. ಆನಂತರ ಮಿಚೆಲ್ ಮೆಕ್ಲಿನಘನ್(71)ಹಾಗೂ ಕಿರೊನ್ ಪೋಲಾರ್ಡ್(69)ಇದ್ದಾರೆ. ಹಾಲಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ 65 ವಿಕೆಟ್‌ಗಳೊಂದಿಗೆ 6ನೇ ಸ್ಥಾನದಲ್ಲಿದ್ದಾರೆ.

► ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳು

171-ಜಸ್‌ಪ್ರಿತ್ ಬುಮ್ರಾ

170-ಲಸಿತ್ ಮಾಲಿಂಗ

127-ಹರ್ಭಜನ್ ಸಿಂಗ್

71-ಮಿಚೆಲ್ ಮೆಕ್ಲಿನಘನ್

69-ಕಿರೊನ್ ಪೋಲಾರ್ಡ್

65-ಹಾರ್ದಿಕ್ ಪಾಂಡ್ಯ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News