ಕಾಲಿಸ್, ರಾಹುಲ್ ದ್ರಾವಿಡ್ ದಾಖಲೆ ಮುರಿದ ಜೋ ರೂಟ್
ಜೋ ರೂಟ್ | PC : X
ಮ್ಯಾಂಚೆಸ್ಟರ್, ಜು.25: ಇಂಗ್ಲೆಂಡ್ ಕ್ರಿಕೆಟ್ ತಂಡದ ಬ್ಯಾಟರ್ ಜೋ ರೂಟ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ರನ್ ಸ್ಕೋರರ್ ಗಳ ಪಟ್ಟಿಯಲ್ಲಿ ಲೆಜೆಂಡರಿ ಕ್ರಿಕೆಟಿಗರಾದ ಜಾಕಸ್ ಕಾಲಿಸ್ ಹಾಗೂ ರಾಹುಲ್ ದ್ರಾವಿಡ್ ರನ್ನು ಹಿಂದಿಕ್ಕಿದ್ದಾರೆ.
ರೂಟ್ ಅವರು ಭಾರತ ತಂಡದ ವಿರುದ್ಧ್ದದ 4ನೇ ಟೆಸ್ಟ್ ಪಂದ್ಯಕ್ಕಿಂತ ಮೊದಲು 13,259 ರನ್ ಗಳಿಸಿದ್ದರು. ಇದೀಗ ಅವರು ದ್ರಾವಿಡ್(13,288 ರನ್)ಹಾಗೂ ಕಾಲಿಸ್(13,289 ರನ್)ದಾಖಲೆಯನ್ನು ಮುರಿದಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ನಾಯಕ ರೂಟ್ ಸದ್ಯ ಲೆಜೆಂಡ್ ಆಟಗಾರರಾದ ಸಚಿನ್ ತೆಂಡುಲ್ಕರ್(15,921 ರನ್)ಹಾಗೂ ರಿಕಿ ಪಾಂಟಿಂಗ್(13,378 ರನ್)ಅವರಿಗಿಂತ ಸ್ವಲ್ಪ ಹಿಂದಿದ್ದಾರೆ.
ರೂಟ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಕಲೆ ಹಾಕಿರುವ ಬ್ಯಾಟರ್ ಗಳ ಪಟ್ಟಿಯಲ್ಲಿ 5ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ರೂಟ್ ಅವರು ಓಲ್ಡ್ ಟ್ರಾಫರ್ಡ್ ನಲ್ಲಿ 1,000 ಟೆಸ್ಟ್ ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಎರಡು ವಿಭಿನ್ನ ಮೈದಾನಗಳಲ್ಲಿ 1,000ಕ್ಕೂ ಅಧಿಕ ರನ್ ಗಳಿಸಿದ ಇಂಗ್ಲೆಂಡ್ ನ 3ನೇ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾದರು. ಹಿರಿಯ ಕ್ರಿಕೆಟಿಗ ರೂಟ್ ಅವರು ಲಾರ್ಡ್ಸ್ ಕ್ರೀಡಾಂಗಣದಲ್ಲಿ ಒಟ್ಟು 2,166 ರನ್ ಗಳಿಸಿದ್ದು, ಅಲಸ್ಟ್ರೈರ್ ಕುಕ್ ಹಾಗೂ ಗ್ರಹಾಂ ಗೂಚ್ ಅವರನ್ನು ಸೇರಿಕೊಂಡಿದ್ದಾರೆ.