ಇಂಗ್ಲೆಂಡ್ ತಂಡದ ಸೀಮಿತ ಓವರ್ ಕ್ರಿಕೆಟ್ ನಾಯಕತ್ವ ತ್ಯಜಿಸಿದ ಜೋಸ್ ಬಟ್ಲರ್
ಜೋಸ್ ಬಟ್ಲರ್ | PC : NDTV
ಕರಾಚಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಇಂಗ್ಲೆಂಡ್ ಕ್ರಿಕೆಟ್ ತಂಡವು ಗ್ರೂಪ್ ಹಂತದಲ್ಲಿಯೇ ನಿರ್ಗಮಿಸಿದ ಕೆಲವೇ ದಿನಗಳ ಅಂತರದಲ್ಲಿ ಬ್ಯಾಟರ್ ಜೋಸ್ ಬಟ್ಲರ್ ದೇಶದ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕತ್ವ ತ್ಯಜಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯ ತಂಡದ ವಿರುದ್ಧ 5 ವಿಕೆಟ್‌ಗಳ ಅಂತರದಿಂದ ಸೋತಿದ್ದ ಇಂಗ್ಲೆಂಡ್ ತಂಡವು ಲಾಹೋರ್‌ನಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ 8 ರನ್ ಅಂತರದಿಂದ ಸೋತಿತ್ತು.
‘‘ನಾನು ಇಂಗ್ಲೆಂಡ್ ನಾಯಕತ್ವ ಸ್ಥಾನದಿಂದ ಕೆಳಗಿಳಿಯುತ್ತಿರುವೆ. ನನ್ನ ಪ್ರಕಾರ ಇದು ಸರಿಯಾದ ನಿರ್ಧಾರ. ತಂಡದ ಹಿತದೃಷ್ಟಿಯಿಂದ ಸರಿಯಾದ ನಿರ್ಧಾರ. ಬೇರೆ ಆಟಗಾರನು ಕೋಚ್ ಬ್ರೆಂಡನ್ ಮೆಕಲಮ್ ಅವರೊಂದಿಗೆ ಕೆಲಸ ಮಾಡಿ ತಂಡವನ್ನು ಮುನ್ನಡೆಸುವ ವಿಶ್ವಾಸದಲ್ಲಿದ್ದೇನೆ’’ ಎಂದು ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯಕ್ಕಿಂತ ಮೊದಲು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಬಟ್ಲರ್ ತಿಳಿಸಿದರು.
ಬಟ್ಲರ್ ಅವರು 2022ರ ಜೂನ್‌ನಲ್ಲಿ ಇಯಾನ್ ಮೊರ್ಗನ್‌ರಿಂದ ನಾಯಕತ್ವ ವಹಿಸಿಕೊಂಡ ನಂತರ 34 ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕತ್ವವಹಿಸಿ 22ರಲ್ಲಿ ಸೋಲುಂಡಿದ್ದಾರೆ.
34ರ ಹರೆಯದ ಬಟ್ಲರ್ 2022ರಲ್ಲಿ ಇಂಗ್ಲೆಂಡ್ ತಂಡವು 2ನೇ ಬಾರಿ ಟಿ-20 ವಿಶ್ವಕಪ್ ಗೆಲ್ಲುವಲ್ಲಿ ನೇತೃತ್ವವಹಿಸಿದ್ದರು. ಆದರೆ ಆ ನಂತರ ಇಂಗ್ಲೆಂಡ್‌ನ ಪ್ರದರ್ಶನ ಮಟ್ಟ ಕುಗ್ಗಲಾರಂಭಿಸಿದೆ. ಇಂಗ್ಲೆಂಡ್ ತಂಡವು ಟಿ-20 ಹಾಗೂ ಏಕದಿನ ವಿಶ್ವಕಪ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ವಿಫಲವಾಗಿತ್ತು.
ಕಳೆದ ವರ್ಷ ಇಂಗ್ಲೆಂಡ್ ಟಿ20 ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಸೋತ ನಂತರ ಕೋಚ್ ಮ್ಯಾಥ್ಯೂ ಮೊಟ್ ತನ್ನ ಹುದ್ದೆಯನ್ನು ತ್ಯಜಿಸಿದ್ದರು. ನ್ಯೂಝಿಲ್ಯಾಂಡ್‌ನ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಕೋಚ್ ಹುದ್ದೆ ವಹಿಸಿಕೊಂಡಿದ್ದರು.
ಬ್ಯಾಟರ್ ಹ್ಯಾರಿ ಬ್ರೂಕ್ ಅವರು ಬಟ್ಲರ್‌ರಿಂದ ತೆರವಾದ ಸ್ಥಾನ ತುಂಬುವ ಸಾಧ್ಯತೆಯಿದೆ ಎಂದು ‘ಡೈಲಿ ಮೇಲ್’ಗೆ ಬರೆದ ಕಾಲಂನಲ್ಲಿ ಇಂಗ್ಲೆಂಡ್‌ನ ಮಾಜಿ ನಾಯಕ ನಾಸಿರ್ ಹುಸೈನ್ ಸುಳಿವು ನೀಡಿದ್ದಾರೆ.
ಬ್ರೂಕ್ ಸೆಪ್ಟಂಬರ್‌ನಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ಏಕದಿನ ಸರಣಿಯಲ್ಲಿ ಇಂಗ್ಲೆಂಡ್‌ನ ನಾಯಕತ್ವವಹಿಸಿದ್ದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್‌ನ ಉಪ ನಾಯಕನಾಗಿದ್ದಾರೆ.