ಐಸಿಸಿಯ WTC ಫೈನಲ್ ನ ಸಂಭ್ರಮದ ವಿಡಿಯೋದಲ್ಲಿ 11 ಬಾರಿ ಕಾಣಿಸಿಕೊಂಡಿದ್ದಕ್ಕೆ ಟೀಕೆಗೆ ಗುರಿಯಾದ ಜಯ್ ಶಾ
Screengrab:X/@ICC
ದುಬೈ: ಲಾರ್ಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್ ಗೆಲುವಿನ ಇತ್ತೀಚಿನ ವೀಡಿಯೊದಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಜಯ್ ಶಾ ಅವರನ್ನು ಪತ್ರಕರ್ತರು ಮತ್ತು ಕ್ರಿಕೆಟ್ ಅಭಿಮಾನಿಗಳು ಟೀಕಿಸಿದ್ದಾರೆ.
ಲಾರ್ಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್ ವಿಜಯವನ್ನು ನೆನಪಿಸಿರುವ ಐಸಿಸಿಯ 45 ಸೆಕೆಂಡುಗಳ ವೀಡಿಯೊವನ್ನು ಸೋಮವಾರ ಸಂಜೆ ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ವೀಡಿಯೊದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾಜಿ ಕಾರ್ಯದರ್ಶಿ ಜಯ್ ಶಾ ಅವರನ್ನು ಕನಿಷ್ಠ 11 ಫ್ರೇಮ್‌ಗಳಲ್ಲಿ ಸೇರಿಸಿದ್ದಕ್ಕಾಗಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಕ್ಕಾಗಿ ಪತ್ರಕರ್ತರು, ಅಭಿಮಾನಿಗಳು ಜಯ್ ಶಾ ಮತ್ತು ಐಸಿಸಿಯನ್ನು ಟೀಕಿಸಿದ್ದಾರೆ. ಐತಿಹಾಸಿಕ ಪಂದ್ಯದ ಸ್ಮರಣೀಯ ಕ್ಷಣಗಳನ್ನು ಹೈಲೈಟ್ ಮಾಡುವುದಕ್ಕಿಂತ ಹೆಚ್ಚಾಗಿ ಜಯ್ ಶಾ ಅವರ ಮೇಲೆ ಕೇಂದ್ರಿಕರಿಸಲಾಗಿದೆ ಎಂದು ಹಲವರು ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.
"ಹೇ @grok ಜಯ್ ಶಾ WTC ನಲ್ಲಿ ಎಷ್ಟು ರನ್ ಮತ್ತು ವಿಕೆಟ್‌ಗಳನ್ನು ಪಡೆದರು?" ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಪತ್ರಕರ್ತರು, ಈ ವಿಡಿಯೋ ನೋಡಿದ ಮೇಲೆ WTC ಫೈನಲ್ ಅನ್ನು ಜಯ್ ಶಾ ಅವರೇ ಜಯ್ ಶಾ ವಿರುದ್ಧ ಆಡಿದ್ದಾರೆ ಎಂದು ನಿಮಗೆ ಅನಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
“ಐಸಿಸಿ ಫೈನಲ್ ಜಯ್ ಶಾ vs ಜಯ್ ಶಾ ಮಧ್ಯೆ ನಡೆದಿತ್ತು ಎಂದು ತಿಳಿದಿರಲಿಲ್ಲ. ಈ ವೀಡಿಯೊವನ್ನು ಜಯ್ ಶಾ ಅಪ್ರಿಷಿಯೇಶನ್ ಸೊಸೈಟಿ (ಇದರಲ್ಲಿ ಒಬ್ಬರೇ ಸದಸ್ಯರಿದ್ದಾರೆ) ಎಡಿಟ್ ಮಾಡಿದಂತೆ ಕಾಣುತ್ತಿದೆ. ಹೌದು ಅವರೇ ಐಸಿಸಿ ಅಧ್ಯಕ್ಷರು. ಈ ಪೋಸ್ಟ್ #WtcFinal2025 ಬಗ್ಗೆ ಇತ್ತು. ಆದರೆ ಜಯ್ ಶಾ ಅದರಲ್ಲಿ ಹನ್ನೆರಡು ಬಾರಿ ಇದ್ದಾರೆ..”, ಎಂದು ಕಟಕಿಯಾಡಿದ್ದಾರೆ.
ಇನ್ನೊಬ್ಬರು ಅಭಿಮಾನಿ “ಜಯ್ ಶಾ ಎಷ್ಟು ರನ್ ಗಳಿಸಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ..
“ನೀವು ಐಸಿಸಿ ವೀಡಿಯೊವನ್ನು ನೋಡಿದ್ದೀರಾ?? WTC ಫೈನಲ್ ಅನ್ನು ಸಂಭ್ರಮಿಸಲು ಈ ವಿಡಿಯೋವನ್ನು ಮಾಡಲಾಗಿದೆ. ಆದರೆ ಅದರಲ್ಲಿ ಜಯ್ ಶಾ ಅವರ 11 ಶಾಟ್‌ಗಳಿವೆ. ಇದು ತುಂಬಾ ವಿಚಿತ್ರವಾವೂ ಹಾಸ್ಯಾಸ್ಪದವೂ ಆಗಿದೆ!”, ಇಂದು ಒಬ್ಬ ಕ್ರಿಕೆಟ್ ಅಭಿಮಾನಿ ನುಡಿದಿದ್ದಾರೆ.
“ಈ ವೀಡಿಯೊದಲ್ಲಿ WTC ವಿಜೇತ ನಾಯಕ ಬವುಮಾ ಗಿಂತ ಜಯ್ ಶಾ ಅವರ ಹೆಚ್ಚಿನ ಶಾಟ್ ಗಳನ್ನು ಐಸಿಸಿ ಹೇಗೆ ಸೇರಿಸಿದೆ ಎಂಬುದು ತಮಾಷೆಯಾಗಿದೆ!”, ಎಂದು ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಪೋಸ್ಟ್ ಮಾಡಿದ್ದಾರೆ.
ವಿಶೇಷವೆಂದರೆ, ಜಯ್ ಶಾ ಅವರ ಬಗ್ಗೆ ಬಂದ ಟೀಕೆಗಳು ಕಮೆಂಟ್ ಗಳ ನಂತರ ಐಸಿಸಿಯು ಹಳೆ ವಿಡಿಯೋವನ್ನು ಡಿಲೀಟ್ ಮಾಡಿ ಮತ್ತೆ ಅದೇ ವಿಡಿಯೋವನ್ನು ಹಂಚಿಕೊಂಡಿದೆ. ಈ ಬಗ್ಗೆ ಪತ್ರಕರ್ತ ಝುಬೇರ್ ಗಮನ ಸೆಳೆದಿದ್ದಾರೆ.