300ನೇ ಟೆಸ್ಟ್ ವಿಕೆಟ್ ಪಡೆದ ಕಾಗಿಸೊ ರಬಾಡ
ಕಾಗಿಸೊ ರಬಾಡ | PC : X
ಢಾಕಾ : ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ನ ಮೊದಲ ದಿನದಾಟದಲ್ಲಿ 300ನೇ ವಿಕೆಟನ್ನು ಕಬಳಿಸಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡದ ವೇಗದ ಬೌಲರ್ ಕಾಗಿಸೊ ರಬಾಡ ಹೊಸ ದಾಖಲೆ ನಿರ್ಮಿಸಿದ್ದಾರೆ.
ಶೇರ್-ಇ-ಬಾಂಗ್ಲಾ ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ಸೋಮವಾರ ಆರಂಭವಾದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಮೊದಲ ಇನಿಂಗ್ಸ್ ನಲ್ಲಿ 106 ರನ್‌ಗೆ ಆಲೌಟಾಯಿತು. ಆರಂಭಿಕ ಬ್ಯಾಟರ್ ಮಹ್ಮೂದುಲ್ ಹಸನ್(30 ರನ್)ಏಕಾಂಗಿ ಹೋರಾಟ ನೀಡಿದರು. ರಬಾಡ(3-26), ಮುಲ್ಡರ್(3-22) ಹಾಗೂ ಕೇಶವ ಮಹಾರಾಜ್(3-34) ಬಾಂಗ್ಲಾದೇಶವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು.
ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶದ ಸ್ಪಿನ್ ದಾಳಿಗೆ ಪರದಾಟ ನಡೆಸುತ್ತಿದ್ದು ಮಂದ ಬೆಳಕಿನಿಂದಾಗಿ ಪಂದ್ಯವು ಬೇಗನೆ ಕೊನೆಗೊಂಡಾಗ 140 ರನ್ಗೆ 6 ವಿಕೆಟ್ ಗಳನ್ನು ಕಳೆದುಕೊಂಡಿದೆ. 34 ರನ್ ಅಲ್ಪ ಮುನ್ನಡೆಯಲ್ಲಿದೆ. ಕೈಲ್ ವರ್ರೆಯನ್(18) ಹಾಗೂ ವಿಯಾನ್ ಮುಲ್ದರ್(17) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಬಾಂಗ್ಲಾದೇಶ ಪರ ತೈಜುಲ್ ಇಸ್ಲಾಮ್(5-49)ಯಶಸ್ವಿ ಪ್ರದರ್ಶನ ನೀಡಿದ್ದು, ಈ ವೇಳೆ 200 ಟೆಸ್ಟ್ ವಿಕೆಟ್ ಪೂರೈಸಿದ್ದಾರೆ.
ಟೋನಿ ಡಿ ರೆರ್ಝಿ(30 ರನ್)ಹಾಗೂ ರಿಯಾನ್ ರಿಕೆಲ್ಟನ್(27 ರನ್) ಅವರಿಂದ ಉತ್ತಮ ಆರಂಭ ಪಡೆದ ಹೊರತಾಗಿಯೂ ದಕ್ಷಿಣ ಆಫ್ರಿಕಾ ಬ್ಯಾಟರ್ಗಳು ತೈಜುಲ್ ಅವರ ಸ್ಪಿನ್ ಮೋಡಿಗೆ ಪರದಾಟ ನಡೆಸಿದರು.
ರಬಾಡ ಅವರು 39.39ರ ಸ್ಟ್ರೈಕ್ರೇಟ್ನಲ್ಲಿ ಕೇವಲ 11,187 ಎಸೆತಗಳಲ್ಲಿ 300 ವಿಕೆಟ್ ಮೈಲಿಗಲ್ಲು ತಲುಪಿದ್ದಾರೆ. ಈ ಮೂಲಕ ಪಾಕಿಸ್ತಾನದ ಮಾಜಿ ವೇಗಿ ವಕಾರ್ ಯೂನಿಸ್ರ ಹಳೆಯ ದಾಖಲೆಯನ್ನು ಮುರಿದರು. ಯೂನಿಸ್ ಈ ಸಾಧನೆ ಮಾಡಲು 12,602 ಎಸೆತಗಳನ್ನು ತೆಗೆದುಕೊಂಡಿದ್ದರು.
29ರ ಹರೆಯದ ರಬಾಡ 300 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ಗಲನ್ನು ಪಡೆದಿರುವ ದಕ್ಷಿಣ ಆಫ್ರಿಕಾದ ಆರನೇ ಬೌಲರ್ ಎನಿಸಿಕೊಂಡಿದ್ದು, ಡೇಲ್ ಸ್ಟೇಯ್ನ್ 439 ವಿಕೆಟ್ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
ಕಡಿಮೆ ಎಸೆತಗಳಲ್ಲಿ 300 ಟೆಸ್ಟ್ ವಿಕೆಟ್ ಪಡೆದ ಬೌಲರ್ ಗಳು
11,817-ಕಾಗಿಸೊ ರಬಾಡ(ದಕ್ಷಿಣ ಆಫ್ರಿಕಾ)
12,602-ವಕಾರ್ ಯೂನಿಸ್(ಪಾಕಿಸ್ತಾನ)
12,605-ಡೇಲ್ ಸ್ಟೇಯ್ನ್(ದಕ್ಷಿಣ ಆಫ್ರಿಕಾ)
13,672-ಅಲನ್ ಡೊನಾಲ್ಡ್(ದಕ್ಷಿಣ ಆಫ್ರಿಕಾ)