‘ನಾಪತ್ತೆ’ಯಾಗಿದ್ದ ಭಾರತೀಯ ಧ್ವಜ ಕರಾಚಿ ಸ್ಟೇಡಿಯಮ್‌ನಲ್ಲಿ ಪ್ರತ್ಯಕ್ಷ
ಕರಾಚಿಯ ನ್ಯಾಶನಲ್ ಸ್ಟೇಡಿಯಮ್ | PC : PTI
ಹೊಸದಿಲ್ಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಆರಂಭಕ್ಕೆ ಮುನ್ನ ಕರಾಚಿಯ ನ್ಯಾಶನಲ್ ಸ್ಟೇಡಿಯಮ್‌ನಲ್ಲಿ ‘‘ನಾಪತ್ತೆ’’ಯಾಗಿದ್ದ ಭಾರತೀಯ ರಾಷ್ಟ್ರ ಧ್ವಜವು ಬುಧವಾರ ಪತ್ತೆಯಾಗಿದೆ. ಪಾಕಿಸ್ತಾನ ಮತ್ತು ನ್ಯೂಝಿಲ್ಯಾಂಡ್ ನಡುವಿನ ಪಂದ್ಯಾವಳಿಯ ಮೊದಲ ಪಂದ್ಯವು ಈ ಸ್ಟೇಡಿಯಮ್‌ನಲ್ಲಿ ನಡೆದಾಗ ಇತರ ದೇಶಗಳ ಧ್ವಜಗಳೊಂದಿಗೆ ಭಾರತದ ಧ್ವಜವೂ ಗೋಚರಿಸಿತು.
ಪಂದ್ಯಾವಳಿಯ ಆರಂಭಕ್ಕೆ ಮುನ್ನ, ಭಾರತದ ರಾಷ್ಟ್ರಧ್ವಜವು ಕಾಣದಾದಾಗ ವಿವಾದವೊಂದು ಸೃಷ್ಟಿಯಾಗಿತ್ತು.
ಪಾಕಿಸ್ತಾನವು ಈ ಪಂದ್ಯಾವಳಿಯ ಆತಿಥೇಯ ದೇಶವಾಗಿದೆ. ಆದರೆ, ಭಾರತವು ‘ಹೈಬ್ರಿಡ್’ ಮಾದರಿಯಂತೆ ತನ್ನ ಪಂದ್ಯಗಳನ್ನು ದುಬೈಯಲ್ಲಿ ಆಡಲಿದೆ.
ಇದಕ್ಕೂ ಮುನ್ನ, ಪಂದ್ಯಾವಳಿಯಲ್ಲಿ ಭಾಗವಹಿಸುವ ಇತರ ಏಳು ದೇಶಗಳ ರಾಷ್ಟ್ರಧ್ವಜಗಳು ಸ್ಟೇಡಿಯಮ್‌ನಲ್ಲಿ ಕಾಣುತ್ತಿದ್ದವು, ಆದರೆ ಭಾರತದ ಧ್ವಜ ಮಾತ್ರ ನಾಪತ್ತೆಯಾಗಿತ್ತು. ಅದು ವಿವಾದಕ್ಕೆ ಕಾರಣವಾಗಿತ್ತು. ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯನ್ನು ಟೀಕಿಸಿದ್ದರು.
ಆದರೆ, ಪಿಸಿಬಿ ತನ್ನ ತಪ್ಪನ್ನು ಸರಿಪಡಿಸಿದ್ದು, ಬುಧವಾರ ಕರಾಚಿ ಸ್ಟೇಡಿಯಮ್‌ನಲ್ಲಿ ಭಾರತದ ಧ್ವಜ ಪ್ರತ್ಯಕ್ಷವಾಗಿದೆ.
ಪಿಸಿಬಿ ಮಂಗಳವಾರ ವಿವರಣೆಯೊಂದನ್ನು ನೀಡಿ, ಪಾಕಿಸ್ತಾನದಲ್ಲಿ ಆಡುವ ದೇಶಗಳ ಧ್ವಜಗಳನ್ನು ಮಾತ್ರ ಸ್ಟೇಡಿಯಮ್‌ಗಳಲ್ಲಿ ಹಾರಿಸಲಾಗಿದೆ ಎಂದು ಹೇಳಿತ್ತು.