U19 ಕೂಚ್ ಬೆಹಾರ್ ಕ್ರಿಕೆಟ್ ಟೂರ್ನಿ; ಕರ್ನಾಟಕ-ಗುಜರಾತ್ ಪಂದ್ಯ ಡ್ರಾ
Photo Credit : PTI
ವಲ್ಸಾಡ್, ಜ.4: ಆತಿಥೇಯ ಗುಜರಾತ್ ಹಾಗೂ ಕರ್ನಾಟಕ ತಂಡಗಳ ನಡುವೆ ಇಲ್ಲಿ ನಡೆಯುತ್ತಿರುವ ಅಂಡರ್-19 ಕೂಚ್ ಬೆಹಾರ್ ಕ್ರಿಕೆಟ್ ಟೂರ್ನಿಯ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯವು ನಿರೀಕ್ಷೆಯಂತೆಯೇ ಡ್ರಾನಲ್ಲಿ ಕೊನೆಗೊಂಡಿದೆ.
ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದ ಹಿನ್ನೆಲೆಯಲ್ಲಿ ಗುಜರಾತ್ ತಂಡವು ಮುಂದಿನ ಸುತ್ತಿಗೆ ಅರ್ಹತೆ ಪಡೆದಿದೆ.
ನಾಲ್ಕನೇ ಹಾಗೂ ಕೊನೆಯ ದಿನದಾಟವಾದ ರವಿವಾರ 2 ವಿಕೆಟ್ ಗಳ ನಷ್ಟಕ್ಕೆ 178 ರನ್ ನಿಂದ ತನ್ನ ಎರಡನೇ ಇನಿಂಗ್ಸ್ ಮುಂದುವರಿಸಿದ ಗುಜರಾತ್ ತಂಡವು 7 ವಿಕೆಟ್ ಗಳ ನಷ್ಟಕ್ಕೆ 432 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು.
ಆರಂಭಿಕ ಬ್ಯಾಟರ್ ಮಲೈ ವಿ.ಶಾ(108 ರನ್, 180 ಎಸೆತ)ಶತಕ ಗಳಿಸಿದರು. ಮಾನಸ್ ದವೆ(78 ರನ್, 84 ಎಸೆತ), ರುದ್ರ ಪಟೇಲ್(70 ರನ್, 57 ಎಸೆತ), ಪಟೇಲ್ ಕುಶ್(68 ರನ್, 114 ಎಸೆತ)ಹಾಗೂ ಪೂರವ್ ಪೂಜಾರ(60 ರನ್, 96 ಎಸೆತ)ಅಧರ್ಶತಕಗಳ ಕೊಡುಗೆ ನೀಡಿದರು.
ಪೂರವ್ ಹಾಗೂ ಮಲೈ ಶಾ 3ನೇ ವಿಕೆಟ್ ಗೆ 130 ರನ್ ಜೊತೆಯಾಟದಲ್ಲಿ ಭಾಗಿಯಾದರು. ನಾಯಕ ರುದ್ರ ಪಟೇಲ್ ಹಾಗೂ ಪಟೇಲ್ ಕುಶ್ ಆರನೇ ವಿಕೆಟ್ ಗೆ 101 ಎಸೆತಗಳಲ್ಲಿ 102 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಕರ್ನಾಟಕ ತಂಡದ ಪರ ಧ್ಯಾನ್ ಎಂ.ಹಿರೇಮಠ(3-103)ಯಶಸ್ವಿ ಪ್ರದರ್ಶನ ನೀಡಿದರು. ಕ್ರಿಶವ್ ಸೋಮಸುಂದರ್(2-77), ಈಸಾ ಪುತ್ತಿಗೆ(1-38)ಹಾಗೂ ವೈಭವ್ ಶರ್ಮಾ(1-51)ನಾಲ್ಕು ವಿಕೆಟ್ ಗಳನ್ನು ಹಂಚಿಕೊಂಡರು.