×
Ad

8 ವರ್ಷಗಳ ನಂತರ ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲಿ ಶೂನ್ಯ ಸಂಪಾದಿಸಿದ ಕರುಣ್ ನಾಯರ್

Update: 2025-06-21 20:26 IST

ಕರುಣ್ ನಾಯರ್ | PC : X \ @Tanujkaswan

ಲೀಡ್ಸ್: ಭಾರತ ಕ್ರಿಕೆಟ್ ತಂಡದ ಜರ್ಸಿಯನ್ನು ಮತ್ತೊಮ್ಮೆ ಧರಿಸಲು ಸುದೀರ್ಘ 8 ವರ್ಷಗಳು ಅಥವಾ 3011 ದಿನಗಳ ಕಾಲ ಕಾದಿದ್ದ ಕರುಣ್ ನಾಯರ್ ಇಂಗ್ಲೆಂಡ್ ತಂಡದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಕೇವಲ 4 ಎಸೆತಗಳನ್ನು ಎದುರಿಸಿ ಬೆನ್ ಸ್ಟೋಕ್ಸ್ ಬೌಲಿಂಗ್‌ ನಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆಗೊಳಿಸಿದ್ದಾರೆ.

ಇಂಗ್ಲೆಂಡ್ ನಾಯಕ ಸ್ಟೋಕ್ಸ್ ಅವರ ಫುಲ್ ಔಟ್ ಸ್ವಿಂಗ್ ಎಸೆತವನ್ನು ಕೆಣಕಲು ಹೋದ ಕರುಣ್, ಶಾರ್ಟ್ ಕವರ್‌ ನಲ್ಲಿದ್ದ ಓಲಿ ಪೋಪ್‌ ಗೆ ಕ್ಯಾಚ್ ನೀಡಿದರು. ಪೋಪ್ ಆಕರ್ಷಕ ಕ್ಯಾಚ್ ಪಡೆದು ಗಮನ ಸೆಳೆದರು.

ಕರುಣ್ 2016ರ ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ತ್ರಿಶತಕ ಸಿಡಿಸಿ ಭಾರತೀಯ ಕ್ರಿಕೆಟ್ ಚರಿತ್ರೆಯಲ್ಲಿ ತನ್ನ ಹೆಸರು ಬರೆದಿದ್ದರು. 2017ರಲ್ಲಿ ಕೊನೆಯ ಬಾರಿ ಟೀಮ್ ಇಂಡಿಯಾದ ಪರ ಆಡಿದ್ದರು. ಆ ನಂತರ ದೇಶೀಯ ಕ್ರಿಕೆಟ್‌ ನಲ್ಲಿ ಸಾಕಷ್ಟು ಬೆವರಿಳಿಸಿದ್ದರು. ಟೀಮ್ ಇಂಡಿಯಾಕ್ಕೆ ಮರಳಲು ತಾಳ್ಮೆಯಿಂದ ಕಾದಿದ್ದರು.

‘ಡಿಯರ್ ಕ್ರಿಕೆಟ್, ನನಗೆ ಇನ್ನೊಂದು ಅವಕಾಶ ನೀಡು’ಎಂದು ಭಾವನಾತ್ಮಕ ಪೋಸ್ಟ್ ಹಾಕಿದ್ದರು.

2024-25ರ ದೇಶೀಯ ಋತುವಿನಲ್ಲಿ ವಿದರ್ಭ ತಂಡವನ್ನು ಪ್ರತಿನಿಧಿಸಿದ್ದ ಕರುಣ್ 9 ರಣಜಿ ಟ್ರೋಫಿ ಪಂದ್ಯಗಳಲ್ಲಿ 4 ಶತಕಗಳ ಸಹಿತ ಒಟ್ಟು 863 ರನ್ ಗಳಿಸಿದ್ದರು. ವಿಜಯ್ ಹಝಾರೆ ಟೂರ್ನಿಯ 8 ಪಂದ್ಯಗಳಲ್ಲಿ 5 ಶತಕಗಳ ಸಹಿತ ಒಟ್ಟು 779 ರನ್ ಗಳಿಸಿದ್ದರು.

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಬಿಸಿಸಿಐ ಕರುಣ್ ನಾಯರ್‌ರನ್ನು ಕೊನೆಗೂ ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡಿತ್ತು.

ಕರುಣ್ ಅವರು ಲೆಜೆಂಡರಿ ಸುನೀಲ್ ಗವಾಸ್ಕರ್‌ ರಿಂದ ತನ್ನ ಕಮ್‌ ಬ್ಯಾಕ್ ಕ್ಯಾಪ್ ಸ್ವೀಕರಿಸಿದ ಭಾರತದ 287ನೇ ಟೆಸ್ಟ್ ಕ್ರಿಕೆಟಿಗನಾಗಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News