ಇತಿಹಾಸ ನಿರ್ಮಿಸಿದ ಕಿರೊನ್ ಪೊಲಾರ್ಡ್; ಟಿ-20 ಕ್ರಿಕೆಟ್‌ನಲ್ಲಿ 14 ಸಾವಿರ ರನ್ ಗಳಿಸಿದ 2ನೇ ಆಟಗಾರ
ಕಿರೊನ್ ಪೊಲಾರ್ಡ್ | PC : X
ಜಮೈಕಾ, ಆ.30: ವೆಸ್ಟ್‌ಇಂಡೀಸ್ ಕ್ರಿಕೆಟ್ ದಂತಕತೆ ಕಿರೊನ್ ಪೊಲಾರ್ಡ್ ಟಿ-20 ಕ್ರಿಕೆಟ್ ಇತಿಹಾಸದಲ್ಲಿ 14,000 ರನ್ ಪೂರೈಸಿದ ಎರಡನೇ ಆಟಗಾರ ಎನಿಸಿಕೊಂಡು ಐತಿಹಾಸಿಕ ಮೈಲಿಗಲ್ಲು ತಲುಪಿದ್ದಾರೆ.
2025ರ ಆವೃತ್ತಿಯ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶನಿವಾರ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪರವಾಗಿ ಆಡಿದ ಪೊಲಾರ್ಡ್ ಬಾರ್ಬಡೊಸ್ ರಾಯಲ್ಸ್ ವಿರುದ್ಧ ಔಟಾಗದೆ 19 ರನ್ ಗಳಿಸಿದರು. ಈ ಮೂಲಕ ವಿಂಡೀಸ್ ಲೆಜೆಂಡ್ ಕ್ರಿಸ್ ಗೇಲ್ ಅವರಿದ್ದ ವಿಶೇಷ ಕ್ಲಬ್ ಗೆ ಸೇರ್ಪಡೆಯಾಗಿದ್ದಾರೆ.
38ರ ಹರೆಯದ ಪೊಲಾರ್ಡ್ 712 ಟಿ-20 ಪಂದ್ಯಗಳಲ್ಲಿ ಒಟ್ಟು 14,000 ರನ್ ಗಳಿಸಿದ್ದಾರೆ. 463 ಪಂದ್ಯಗಳಲ್ಲಿ 14,562 ರನ್ ಕಲೆ ಹಾಕಿರುವ ಕ್ರಿಸ್ ಗೇಲ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಪೊಲಾರ್ಡ್ ಈ ಸಾಧನೆ ಮೂಲಕ ಸಾರ್ವಕಾಲಿಕ ರನ್ ಸ್ಕೋರರ್‌ಗಳ ಪಟ್ಟಿಯಲ್ಲಿ ಟಿ-20 ದಿಗ್ಗಜರಾದ ಅಲೆಕ್ಸ್ ಹೇಲ್ಸ್, ಡೇವಿಡ್ ವಾರ್ನರ್ ಹಾಗೂ ಶುಐಬ್ ಮಲಿಕ್ ರನ್ನು ಹಿಂದಿಕ್ಕಿದ್ದಾರೆ.
2006ರಿಂದ 2025ರ ತನಕದ ಟಿ-20 ವೃತ್ತಿಬದುಕಿನಲ್ಲಿ ವೆಸ್ಟ್‌ಇಂಡೀಸ್ ರಾಷ್ಟ್ರೀಯ ತಂಡ ಸಹಿತ 19 ವಿವಿಧ ತಂಡಗಳನ್ನು ಪ್ರತಿನಿಧಿಸಿದ್ದರು. ಟಿ-20ಯಲ್ಲಿ 1 ಶತಕ ಹಾಗೂ 64 ಅರ್ಧಶತಕಗಳನ್ನು, 876 ಬೌಂಡರಿ ಹಾಗೂ 942 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ವೆಸ್ಟ್‌ಇಂಡೀಸ್ ಪರ 101 ಟಿ-20 ಪಂದ್ಯಗಳನ್ನಾಡಿರುವ ಪೊಲಾರ್ಡ್ 1,569 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದ ಪೊಲಾರ್ಡ್ 189 ಪಂದ್ಯಗಳಲ್ಲಿ 3,412 ರನ್ ಗಳಿಸಿದ್ದರು.
ಪೊಲಾರ್ಡ್ ಟಿ-20 ಕ್ರಿಕೆಟ್ ನಲ್ಲಿ ಬ್ಯಾಟಿಂಗ್ ಅಲ್ಲದೆ ಬೌಲಿಂಗ್‌ನಲ್ಲೂ 332 ವಿಕೆಟ್ ಗಳನ್ನು ಉರುಳಿಸಿ ಮಹತ್ವದ ಕೊಡುಗೆ ನೀಡಿದ್ದರು. ತನ್ನ ಆಲ್ ರೌಂಡ್ ಸಾಮರ್ಥ್ಯದಿಂದಾಗಿ ವಿಶ್ವದೆಲ್ಲೆಡೆಯ ವಿವಿಧ ಟಿ-20 ಲೀಗ್ ಗಳಲ್ಲಿ ಆಡುವ ಅವಕಾಶ ಪಡೆದಿದ್ದಾರೆ.