ಫಿಟ್ನೆಸ್ ಪರೀಕ್ಷೆಗಾಗಿ ಕಿಶನ್, ಪರಾಗ್ ಬೆಂಗಳೂರಿಗೆ ಭೇಟಿ
ಇಶಾನ್ ಕಿಶನ್ | PC : PTI
ಹೊಸದಿಲ್ಲಿ, ಆ.12: ಭಾರತ ಕ್ರಿಕೆಟ್ ತಂಡದ ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್ ಹಾಗೂ ಆಲ್ ರೌಂಡರ್ ರಿಯಾನ್ ಪರಾಗ್ ಅವರು ನಿಯಮಿತ ಫಿಟ್ನೆಸ್ ಮೌಲ್ಯಮಾಪನ ಪರೀಕ್ಷೆಗಾಗಿ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ(ಸಿಒಇ)ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ.
ಕಿಶನ್ ಅವರು ದುಲೀಪ್ ಟ್ರೋಫಿಯಲ್ಲಿ ಪೂರ್ವ ವಲಯವನ್ನು ನಾಯಕನಾಗಿ ಮುನ್ನಡೆಸಲು ಸಜ್ಜಾಗಿದ್ದು, ಪರಾಗ್ ಇದೇ ತಂಡದಲ್ಲಿದ್ದಾರೆ.
2 ಟೆಸ್ಟ್, 27 ಏಕದಿನ ಹಾಗೂ 32 ಟಿ20 ಪಂದ್ಯಗಳನ್ನು ಆಡಿರುವ ಕಿಶನ್ ಅವರು ಇತ್ತೀಚೆಗೆ ಸ್ಕೂಟಿಯಿಂದ ಬಿದ್ದು ಪಾದದ ನೋವಿಗೆ ಒಳಗಾಗಿದ್ದರು. ಇದರಿಂದಾಗಿ ರಾಷ್ಟ್ರೀಯ ಆಯ್ಕೆ ಸಮಿತಿಯು ಇಂಗ್ಲೆಂಡ್ ಪ್ರವಾಸದ ವೇಳೆ ಗಾಯಗೊಂಡಿದ್ದ ರಿಷಭ್ ಪಂತ್ ಅವರ ಬದಲಿಯಾಗಿ ಎನ್.ಜಗದೀಶನ್ ರನ್ನು ಆಯ್ಕೆ ಮಾಡಬೇಕಾಯಿತು.
ಒಂದು ಏಕದಿನ ಪಂದ್ಯವನ್ನು ಆಡಿರುವ ಪರಾಗ್ ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಕೆಲವು ಪಂದ್ಯಗಳಲ್ಲಿ ನಾಯಕನಾಗಿದ್ದರು.
ಇದೇ ವೇಳೆ, ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಟಿ20 ಪಂದ್ಯದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ನಿಯಮಿತ ಫಿಟ್ನೆಸ್ ಪರೀಕ್ಷೆಗಳಿಗಾಗಿ ಈಗಾಗಲೇ ಸಿಒಇಗೆ ತೆರಳಿದ್ದಾರೆ. ಮಧ್ಯಮ ಸರದಿಯ ಬ್ಯಾಟರ್ ಶ್ರೇಯಸ್ ಅಯ್ಯರ್ ಇತ್ತೀಚೆಗೆ ಇದೇ ಉದ್ದೇಶದಿಂದ ಸಿಒಇಗೆ ತೆರಳಿದ್ದರು.
ಸ್ಪೋರ್ಟ್ಸ್ ಹರ್ನಿಯಾಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಸಿಒಇನಲ್ಲಿದ್ದಾರೆ.
ಟಿ20 ಮಾದರಿಯಲ್ಲಿ ನಡೆಯಲಿರುವ ಏಶ್ಯಕಪ್ ಟೂರ್ನಿಯ ನಂತರ ಭಾರತ ತಂಡವು 2025-26 ಋತುವಿನಲ್ಲಿ ಬಿಡುವಿಲ್ಲದೆ ಸೀಮಿತ ಓವರ್ ಪಂದ್ಯಗಳನ್ನು ಆಡಲಿದೆ. ಅಕ್ಟೋಬರ್ ನಲ್ಲಿ ಸ್ವದೇಶದಲ್ಲಿ ಆಸ್ಟ್ರೇಲಿಯದ ವಿರುದ್ಧ(3 ಏಕದಿನ, 5 ಟಿ20), ದಕ್ಷಿಣ ಆಫ್ರಿಕಾ ವಿರುದ್ಧ ನವೆಂಬರ್-ಡಿಸೆಂಬರ್ ನಲ್ಲಿ(3 ಏಕದಿನ, 5 ಟಿ20), ಜನವರಿಯಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ (3 ಏಕದಿನ, 5 ಟಿ20)ಸರಣಿಯನ್ನು ಆಡಲಿದೆ. ಫೆಬ್ರವರಿ-ಮಾರ್ಚ್‌ನಲ್ಲಿ ಭಾರತ-ಶ್ರೀಲಂಕಾದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್ ನಲ್ಲಿ ಭಾಗವಹಿಸಲಿದೆ. ಕಿಶನ್ ಹಾಗೂ ಪರಾಗ್ ಈ ಎಲ್ಲ ಸೀಮಿತ ಓವರ್ ಪಂದ್ಯಾವಳಿಗಳಲ್ಲಿ ಆಡುವ ಗುರಿ ಇಟ್ಟುಕೊಂಡಿದ್ದಾರೆ.