ಎರಡನೇ ವಿಕೆಟ್‌ಕೀಪರ್ ಸ್ಥಾನಕ್ಕೆ ಕಿಶನ್, ರಿಷಭ್, ಜುರೆಲ್ ಸ್ಪರ್ಧೆ
ಇಶಾನ್ ಕಿಶನ್, ಧ್ರುವ ಜುರೆಲ್ | Photo Credit : PTI
ಹೊಸದಿಲ್ಲಿ, ಡಿ.29: ಕೆ.ಎಲ್.ರಾಹುಲ್‌ಗೆ ಬೆಂಬಲವಾಗಿ ಎರಡನೇ ವಿಕೆಟ್‌ಕೀಪರ್ ಸ್ಥಾನಕ್ಕಾಗಿ ಮೂವರು ಸ್ಪರ್ಧೆಯಲ್ಲಿದ್ದು, ಈ ಮೂವರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬ ಬಗ್ಗೆ ಸೀನಿಯರ್ ಆಟಗಾರರ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ತಲೆ ಕೆಡಿಸಿಕೊಳ್ಳುವಂತಾಗಿದೆ.
ಟಿ-20 ವಿಶ್ವಕಪ್ ಟೂರ್ನಿಯು ಹತ್ತಿರವಾಗುತ್ತಿರುವ ಕಾರಣ ಏಕದಿನ ಕ್ರಿಕೆಟ್‌ಗೆ ಹೆಚ್ಚು ಮಹತ್ವವಿಲ್ಲ. ಆದರೆ ಜನವರಿ 11ರಿಂದ ಆರಂಭವಾಗಲಿರುವ ನ್ಯೂಝಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಎರಡನೇ ವಿಕೆಟ್‌ಕೀಪರ್ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿದೆ. ಇಶಾನ್ ಕಿಶನ್, ರಿಷಭ್ ಪಂತ್ ಹಾಗೂ ಧ್ರುವ ಜುರೆಲ್ ಈ ಸ್ಪರ್ಧೆಯಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಪಂತ್ ಅವರು ಹೆಚ್ಚುವರಿ ವಿಕೆಟ್‌ಕೀಪರ್ ಆಗಿದ್ದರು. ಜುರೆಲ್ ಬ್ಯಾಟರ್ ಆಗಿದ್ದರು. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಕಿಶನ್ ಟೀಮ್ ಇಂಡಿಯಾದ ಟಿ-20 ತಂಡಕ್ಕೆ ವಾಪಸಾಗಿದ್ದಾರೆ. ಇದೀಗ ಕಿಶನ್ ಕೂಡ ಪ್ರಬಲ ಸ್ಪರ್ಧಿಯಾಗಿದ್ದಾರೆ.
ಕಿಶನ್ ನಾಯಕತ್ವದ ಜಾರ್ಖಂಡ್ ತಂಡವು ತನ್ನ ಚೊಚ್ಚಲ ಸಯ್ಯದ್ ಮುಷ್ತಾಕ್ ಟ್ರೋಫಿ ಪ್ರಶಸ್ತಿ ಜಯಿಸಿದ್ದು, ಈ ಟಿ-20 ಟೂರ್ನಿಯಲ್ಲಿ ಕಿಶನ್ ಒಟ್ಟು 517 ರನ್ ಗಳಿಸಿದ್ದರು. ಟಿ-20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಹೆಚ್ಚುವರಿ ಓಪನರ್ ಆಗಿ ಮರಳಿದ್ದಾರೆ.
ಇದೀಗ ಉತ್ತರಪ್ರದೇಶದ ಪರ ಆಡುತ್ತಿರುವ ಜುರೆಲ್ ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಮೂರು ಪಂದ್ಯಗಳಲ್ಲಿ 307 ರನ್ ಗಳಿಸಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ.