IPL 2026 | ಫಿನ್ ಅಲೆನ್ ಶತಕ; ಡೆಲ್ಲಿ ತಂಡದ ವಿರುದ್ಧ KKR ಜಯಭೇರಿ
Photo Credit : PTI
ಹೊಸದಿಲ್ಲಿ, ಮೇ 8: ಆರಂಭಿಕ ಆಟಗಾರ ಫಿನ್ ಅಲೆನ್ ಶತಕದ (ಔಟಾಗದೆ 100, 47 ಎಸೆತ, 5 ಬೌಂಡರಿ, 10 ಸಿಕ್ಸರ್) ಸಹಾಯದಿಂದ 51ನೇ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎಂಟು ವಿಕೆಟ್ ಗಳ ಅಂತರದಿಂದ ಸುಲಭವಾಗಿ ಮಣಿಸಿದೆ.
ಶುಕ್ರವಾರ ಟಾಸ್ ಗೆದ್ದ KKR ತಂಡವು ಡೆಲ್ಲಿ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿತು.
ಡೆಲ್ಲಿ ತಂಡವು ಪಥುಮ್ ನಿಸ್ಸಾಂಕ (50 ರನ್, 29 ಎಸೆತ, 5 ಬೌಂಡರಿ, 3 ಸಿಕ್ಸರ್) ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 142 ರನ್ ಗಳಿಸಿತು.
ಗೆಲ್ಲಲು 143 ರನ್ ಗುರಿ ಬೆನ್ನಟ್ಟಿದ KKR ತಂಡವು 14.2 ಓವರ್ ಗಳಲ್ಲಿ ಎರಡು ವಿಕೆಟ್ ಗಳ ನಷ್ಟಕ್ಕೆ 147 ರನ್ ಗಳಿಸಿತು.
KKR ತಂಡವು 31 ರನ್‌ಗೆ ಎರಡು ವಿಕೆಟ್ ಗಳನ್ನು ಕಳೆದುಕೊಂಡಿತು. ಆಗ ಜೊತೆಯಾದ ಅಲೆನ್ ಹಾಗೂ ಕ್ಯಾಮರೂನ್ ಗ್ರೀನ್ (ಔಟಾಗದೆ 33, 27 ಎಸೆತ, 2 ಸಿಕ್ಸರ್) ಮೂರನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 116 ರನ್ ಸೇರಿಸಿ ಇನ್ನೂ 34 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟರು.
ಇದಕ್ಕೂ ಮೊದಲು ಇನಿಂಗ್ಸ್ ಆರಂಭಿಸಿದ ನಿಸ್ಸಾಂಕ ಹಾಗೂ ಕೆ.ಎಲ್. ರಾಹುಲ್ (23 ರನ್, 14 ಎಸೆತ) ಐದು ಓವರ್ ಗಳಲ್ಲಿ 49 ರನ್ ಜೊತೆಯಾಟ ನಡೆಸಿದರು. ರಾಹುಲ್ ವಿಕೆಟ್ ಪಡೆದ ಕಾರ್ತಿಕ್ ತ್ಯಾಗಿ ಈ ಜೋಡಿಯನ್ನು ಬೇರ್ಪಡಿಸಿದರು. ನಿತೀಶ್ ರಾಣಾ (8 ರನ್), ಸಮೀರ್ ರಿಝ್ವಿ (3 ರನ್), ನಿಸ್ಸಾಂಕ, ಟ್ರಿಸ್ಟನ್ ಸ್ಟಬ್ಸ್ (2 ರನ್), ನಾಯಕ ಅಕ್ಷರ್ ಪಟೇಲ್ (11 ರನ್) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಡೆಲ್ಲಿ ತಂಡವು 10.5 ಓವರ್ ಗಳಲ್ಲಿ 89 ರನ್‌ಗೆ ಐದು ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಅಶುತೋಷ್ ಶರ್ಮಾ (39 ರನ್, 28 ಎಸೆತ, 3 ಬೌಂಡರಿ, 3 ಸಿಕ್ಸರ್) ಡೆಲ್ಲಿ ತಂಡವು ಗೌರವಾರ್ಹ ಮೊತ್ತ ಗಳಿಸುವಲ್ಲಿ ನೆರವಾದರು.
ಕಾರ್ತಿಕ್ ತ್ಯಾಗಿ (2-25) ಹಾಗೂ ಅನುಕೂಲ್ ರಾಯ್ (2-31) ತಲಾ ಎರಡು ವಿಕೆಟ್ ಗಳನ್ನು ಪಡೆದರು.
►ಸಂಕ್ಷಿಪ್ತ ಸ್ಕೋರ್
ಡೆಲ್ಲಿ ಕ್ಯಾಪಿಟಲ್ಸ್: 20 ಓವರ್ ಗಳಲ್ಲಿ 142/8
(ಪಥುಮ್ ನಿಸ್ಸಾಂಕ 50, ಅಶುತೋಷ್ ಶರ್ಮಾ 39, ರಾಹುಲ್ 23, ಕಾರ್ತಿಕ್ ತ್ಯಾಗಿ 2-25, ಅನುಕೂಲ್ ರಾಯ್ 2-31)
KKR: 14.2 ಓವರ್ ಗಳಲ್ಲಿ 147/2
(ಫಿನ್ ಅಲೆನ್ ಔಟಾಗದೆ 100, ಕ್ಯಾಮರೂನ್ ಗ್ರೀನ್ ಔಟಾಗದೆ 33, ಅಕ್ಷರ್ ಪಟೇಲ್ 1-27)