×
Ad

ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರನಾಗಿ ಕೆ.ಎಲ್. ರಾಹುಲ್ ಕಣಕ್ಕೆ?

Update: 2025-05-17 21:22 IST

ಕೆ.ಎಲ್. ರಾಹುಲ್ | PC : PTI  

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ(ಐಪಿಎಲ್)ತನ್ನ ಉಳಿದಿರುವ ಮೂರು ಲೀಗ್ ಹಂತದ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಬ್ಯಾಟಿಂಗ್ ಸರದಿಯಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿದೆ. ಅನುಭವಿ ಬ್ಯಾಟರ್ ಕೆ.ಎಲ್.ರಾಹುಲ್ ಅವರನ್ನು ಅಕ್ಷರ್ ಪಟೇಲ್ ನಾಯಕತ್ವದ ತಂಡದಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಸುವ ಸಾಧ್ಯತೆಯಿದೆ.

11 ಪಂದ್ಯಗಳಲ್ಲಿ 13 ಅಂಕ ಗಳಿಸಿರುವ ಡೆಲ್ಲಿ ತಂಡವು ಪ್ರಸಕ್ತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಅಗ್ರ ಸರದಿಯನ್ನು ಸರಿಪಡಿಸಲು ಮುಂದಾಗಿರುವ ಡೆಲ್ಲಿ ತಂಡವು ರಾಹುಲ್‌ಗೆ ಭಡ್ತಿ ನೀಡುವ ಇರಾದೆಯಲ್ಲಿದೆ.

ರಾಹುಲ್ ಈ ತನಕ ಆಡಿರುವ 10 ಪಂದ್ಯಗಳಲ್ಲಿ ಒಮ್ಮೆ ಮಾತ್ರ ಇನಿಂಗ್ಸ್ ಆರಂಭಿಸಿದ್ದರು. ಎರಡು ಬಾರಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಉಳಿದಿರುವ 7 ಪಂದ್ಯಗಳಲ್ಲಿ 4ನೇ ಕ್ರಮಾಂಕದಲ್ಲಿ ಆಡಿದ್ದರು.

ಮಧ್ಯಮ ಸರದಿಯಲ್ಲಿ ರಾಹುಲ್ ಸಾಧಾರಣ ಪ್ರದರ್ಶನ ನೀಡಿದ್ದಾರೆ. ಟೀಮ್ ಮ್ಯಾನೇಜ್‌ಮೆಂಟ್ ಅನುಭವಿ ಆಟಗಾರ ರಾಹುಲ್‌ರನ್ನು ಓಪನರ್ ಆಗಿ ಕಣಕ್ಕಿಳಿಸಿ ಪವರ್‌ಪ್ಲೇನಲ್ಲಿ ಇನ್ನಷ್ಟು ರನ್ ಕಲೆ ಹಾಕಲು ಬಯಸಿದೆ.

ಜಾಕ್ ಫ್ರೆಸರ್-ಮೆಕ್‌ಗರ್ಕ್ ಅಸ್ಥಿರ ಪ್ರದರ್ಶನ ಹಾಗೂ ಎಫ್ ಡು ಪ್ಲೆಸಿಸ್ ಅವರ ಗಾಯದ ಸಮಸ್ಯೆಯ ಕಾರಣದಿಂದ ಡೆಲ್ಲಿ ತಂಡಕ್ಕೆ ಬದಲಾವಣೆಗಳನ್ನು ಮಾಡುವುದು ಅನಿವಾರ್ಯವಾಗಿದೆ. ಗುಜರಾತ್ ಟೈಟಾನ್ಸ್, ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧದ ಇನ್ನುಳಿದಿರುವ ಪಂದ್ಯಗಳಲ್ಲಿ ಕೆಲವು ಬದಲಾವಣೆ ಮಾಡುವ ನಿರೀಕ್ಷೆ ಇದೆ.

2025ರ ಆವೃತ್ತಿಯ ಐಪಿಎಲ್‌ನಲ್ಲಿ ಉತ್ತಮ ಆರಂಭ ಪಡೆದಿದ್ದ ಡೆಲ್ಲಿ ತಂಡವು ಆ ನಂತರ ಕುಸಿತ ಕಂಡಿತು. ತವರು ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಆಘಾತಕಾರಿ ಸೋಲಿನಿಂದ ಚೇತರಿಸಿಕೊಳ್ಳಲು ಪರದಾಡುತ್ತಿದೆ.

ಮುಂಬೈ ವಿರುದ್ಧ ಸೋತ ನಂತರ ಡೆಲ್ಲಿ ತಂಡವು ಸಂಘಟಿತ ಪ್ರದರ್ಶನ ನೀಡಿಲ್ಲ. ಪಂದ್ಯಾವಳಿಯಲ್ಲಿ ಅಗ್ರ ಮೂರು ಸ್ಥಾನದಲ್ಲಿರುವ ತಂಡಗಳ ವಿರುದ್ಧ ಶ್ರೇಷ್ಠ ಪ್ರದರ್ಶನ ನೀಡುವ ಅಗತ್ಯವಿದೆ. ಪ್ಲೇ ಆಫ್ ಸುತ್ತಿಗಾಗಿ ಸ್ಪರ್ಧೆ ಜೋರಾಗಿದ್ದು, 7 ತಂಡಗಳು ಈಗಲೂ ಸ್ಪರ್ಧಾವಳಿಯಲ್ಲಿ ಸ್ಪರ್ಧೆಯಲ್ಲಿವೆ.

ಸ್ವದೇಶಕ್ಕೆ ಮರಳಿರುವ ಮಿಚೆಲ್ ಸ್ಟಾರ್ಕ್ ಐಪಿಎಲ್‌ಗೆ ವಾಪಸಾಗುವುದಿಲ್ಲ. ಟಿ.ನಟರಾಜನ್, ಮುಸ್ತಫಿಝುರ‌್ರಹ್ಮಾನ್, ಮೋಹಿತ್ ಶರ್ಮಾ ಹಾಗೂ ಮುಕೇಶ್ ಕುಮಾರ್ ಡೆಲ್ಲಿ ಬೌಲಿಂಗ್ ವಿಭಾಗವನ್ನು ಮುನ್ನಡೆಸಬೇಕಾಗಿದೆ.

ಡೆಲ್ಲಿ ತಂಡವು ರವಿವಾರ ತವರು ಮೈದಾನದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಪುನರಾರಂಭಿಸಲಿದೆ. ಆ ನಂತರ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲು ಮುಂಬೈಗೆ ತೆರಳಲಿರುವ ಡೆಲ್ಲಿ ತಂಡವು ಜೈಪುರದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News