ಕರುಣ್ ನಾಯರ್ ಗೆ ಕೆ.ಎಲ್.ರಾಹುಲ್ ಸಂತೈಸುತ್ತಿರುವ ಫೋಟೊ ವೈರಲ್
ಕರುಣ್ ನಾಯರ್ , ಕೆ.ಎಲ್.ರಾಹುಲ್ | PTI
ಮ್ಯಾಂಚೆಸ್ಟರ್, ಜು.25: ಕರ್ನಾಟಕದ ಬ್ಯಾಟರ್ ಕರುಣ್ ನಾಯರ್ ದೇಶೀಯ ಕ್ರಿಕೆಟ್ ನಲ್ಲಿ ನೀಡಿರುವ ಅಮೋಘ ಪ್ರದರ್ಶನದ ಹಿನ್ನೆಲೆಯಲ್ಲಿ 8 ವರ್ಷಗಳ ನಂತರ ಟೀಮ್ ಇಂಡಿಯಾಕ್ಕೆ ವಾಪಸಾಗಿದ್ದರು. ಇಂಗ್ಲೆಂಡ್ ತಂಡದ ವಿರುದ್ಧದ ಮೊದಲ 3 ಟೆಸ್ಟ್ ಪಂದ್ಯಗಳಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದ ನಾಯರ್ ನಿರೀಕ್ಷಿತ ಪ್ರದರ್ಶನ ನೀಡದೆ ನಿರಾಶೆಗೊಳಿಸಿದರು. ಹೀಗಾಗಿ ಅವರು ಓಲ್ಡ್ ಟ್ರಾಫರ್ಡ್ ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಆಡುವ 11ರ ಬಳಗದಿಂದ ಕೈಬಿಡಲ್ಪಟ್ಟಿದ್ದಾರೆ.
ಬಲಗೈ ಬ್ಯಾಟರ್ ಆರು ಇನಿಂಗ್ಸ್ ಗಳಲ್ಲಿ ಕೇವಲ 131 ರನ್ ಗಳಿಸಿದ್ದಾರೆ. ಈ ಕಾರಣದಿಂದ ಟೀಮ್ ಮ್ಯಾನೇಜ್ ಮೆಂಟ್ 4ನೇ ಟೆಸ್ಟ್ ಪಂದ್ಯದಲ್ಲಿ ನಾಯರ್ ಸ್ಥಾನಕ್ಕೆ ಬಿ.ಸಾಯಿ ಸುದರ್ಶನ್ ಗೆ ಅವಕಾಶ ನೀಡಿದೆ.
ನಾಯರ್ ಆಡುವ 11ರ ಬಳಗದಿಂದ ಹೊರಗುಳಿದ ನಂತರ ಫೋಟೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಲಾರಂಭಿಸಿದೆ. ಈ ಫೋಟೊದಲ್ಲಿ ನಾಯರ್ ರನ್ನು ಅವರ ಆತ್ಮೀಯ ಸ್ನೇಹಿತ ಹಾಗೂ ಸ್ಟಾರ್ ಕ್ರಿಕೆಟಿಗ ರಾಹುಲ್ ಸಂತೈಸುತ್ತಿರುವುದು ಕಂಡುಬಂದಿದೆ. ಈ ಚಿತ್ರವು ಕ್ಷಿಪ್ರವಾಗಿ ವೈರಲ್ ಆಗಿದ್ದು, ನಾಯರ್ ರನ್ನು ಆಡುವ ಬಳಗದಿಂದ ಕೈಬಿಟ್ಟ ನಂತರದ ದುಃಖಕರ ದೃಶ್ಯ ಇದಾಗಿದೆ ಎಂದು ಹಲವರು ಭಾವಿಸಿದ್ದರು.
‘ಟೈಮ್ಸ್ ಆಫ್ ಇಂಡಿಯಾ’ ಮಾಡಿರುವ ಫ್ಯಾಕ್ಟ್-ಚೆಕ್ ಪ್ರಕಾರ, ಈ ಫೋಟೊವನ್ನು ಓಲ್ಡ್ ಟ್ರಾಫರ್ಡ್ ನಲ್ಲಲ್ಲ, ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ತೆಗೆಯಲಾಗಿತ್ತು ಎಂದು ತಿಳಿದುಬಂದಿದೆ.
ನಾಯರ್ ಹೆಡ್ಡಿಂಗ್ಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. 2ನೇ ಇನಿಂಗ್ಸ್‌ನಲ್ಲಿ ಕೇವಲ 20 ರನ್ ಗಳಿಸಿದ್ದರು. 2ನೇ ಟೆಸ್ಟ್ ಪಂದ್ಯದಲ್ಲಿ ತನ್ನ ಸ್ಥಾನ ಉಳಿಸಿಕೊಂಡಿದ್ದ ನಾಯರ್ 31 ಹಾಗೂ 26 ರನ್ ಗಳಿಸಿದ್ದರು. ಲಾರ್ಡ್ಸ್‌ನಲ್ಲಿ ನಡೆದಿದ್ದ 3ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 40 ರನ್ ಕಲೆ ಹಾಕಿದ್ದರು. ಆದರೆ 2ನೇ ಇನಿಂಗ್ಸ್‌ನಲ್ಲಿ ಕೇವಲ 14 ರನ್ ಗಳಿಸಿ ನಿರಾಶೆಗೊಳಿಸಿದ್ದರು.
4ನೇ ಟೆಸ್ಟ್ ಪಂದ್ಯದಿಂದ ನಾಯರ್ ರನ್ನು ಹೊರಗಿಟ್ಟಿರುವ ನಿರ್ಧಾರವನ್ನು ಭಾರತ ತಂಡದ ಮಾಜಿ ಕ್ರಿಕೆಟಿಗ ಮುಹಮ್ಮದ್ ಕೈಫ್ ಟೀಕಿಸಿದ್ದಾರೆ. ‘‘ಶುಭಮನ್ ಗಿಲ್ ಅವರಿಗೆ ಕರುಣ್ ಅವರನ್ನು ಬೆಂಬಲಿಸುವ ಅವಕಾಶ ಲಭಿಸಿತ್ತು. ಕರುಣ್ ಇನ್ನೊಂದು ಅವಕಾಶಕ್ಕೆ ಅರ್ಹರಾಗಿದ್ದರು. ಅವರು ಕರುಣ್ ನಾಯರ್ ರನ್ನು ಆಯ್ಕೆ ಮಾಡಬೇಕಾಗಿತ್ತು. ನಾಯಕನಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೌರವ ಗಳಿಸುವ ಅವಕಾಶ ತಪ್ಪಿಹೋಯಿತು’’ ಎಂದು ಕೈಫ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಭಾರತ ತಂಡವು 3 ಬದಲಾವಣೆಗಳನ್ನು ಮಾಡಿತ್ತು. ಅಂಶುಲ್ ಕಾಂಬೋಜ್ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟರೆ, ಸುದರ್ಶನ್ ಅವರು ಕರುಣ್ ನಾಯರ್ ಬದಲಿಗೆ ಆಡಿದರು. ಗಾಯದಿಂದಾಗಿ ಸರಣಿಯಿಂದ ಹೊರಗುಳಿದಿರುವ ನಿತೀಶ್ ರೆಡ್ಡಿಯ ಸ್ಥಾನಕ್ಕೆ ಶಾರ್ದುಲ್ ಠಾಕೂರ್ ಅವಕಾಶ ಪಡೆದಿದ್ದಾರೆ.