ಕೆ.ಎಲ್.ರಾಹುಲ್ ಔಟಾಗದೆ 176 ರನ್ : ಆಸ್ಟ್ರೇಲಿಯ ‘ಎ’ ವಿರುದ್ಧ ಗರಿಷ್ಠ ರನ್ ಚೇಸ್ ; ಇತಿಹಾಸ ನಿರ್ಮಿಸಿದ ಭಾರತ ‘ಎ’
ಕೆ.ಎಲ್.ರಾಹುಲ್ | PC : PTI
ಲಕ್ನೊ, ಸೆ.26: ಕೆ.ಎಲ್.ರಾಹುಲ್ ಹಾಗೂ ಸಾಯಿ ಸುದರ್ಶನ್ ಅವರ ಶತಕಗಳ ಬಲದಿಂದ ಭಾರತ ‘ಎ’ ತಂಡವು 2ನೇ ಅನಧಿಕೃತ ಟೆಸ್ಟ್ ಪಂದ್ಯದ ಗೆಲುವಿಗೆ ಆಸ್ಟ್ರೇಲಿಯ ‘ಎ’ ತಂಡ ನೀಡಿದ್ದ 412 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಇತಿಹಾಸ ನಿರ್ಮಿಸಿದೆ.
ಶುಕ್ರವಾರ ಎಕಾನ ಕ್ರಿಕೆಟ್ ಕ್ರೀಡಾಂಗಣದಲ್ಲಿ 5 ವಿಕೆಟ್‌ಗಳ ಅಂತರದಿಂದ ಜಯಶಾಲಿಯಾಗಿರುವ ಭಾರತ ‘ಎ’ ತಂಡವು 2 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ. ಮೊದಲ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿತ್ತು.
‘ಎ’ ತಂಡವೊಂದು ಇದೇ ಮೊದಲ ಬಾರಿ 4ನೇ ಇನಿಂಗ್ಸ್‌ನಲ್ಲಿ ಯಶಸ್ವಿಯಾಗಿ ಗರಿಷ್ಠ ರನ್ ಚೇಸ್ ಮಾಡಿದೆ. 2022ರಲ್ಲಿ ಹಂಬನ್‌ಟೋಟದಲ್ಲಿ ಶ್ರೀಲಂಕಾ ‘ಎ’ ವಿರುದ್ಧ ಆಸ್ಟ್ರೇಲಿಯ ‘ಎ’ ತಂಡ ನಿರ್ಮಿಸಿದ್ದ ದಾಖಲೆ(367 ರನ್ ಚೇಸ್)ಪತನವಾಗಿದೆ.
ಭಾರತ ‘ಎ’ ತಂಡವು 2003ರಲ್ಲಿ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ತಂಡದ ವಿರುದ್ಧ 340 ರನ್ ಗುರಿಯನ್ನು ಬೆನ್ನಟ್ಟಿದ್ದು, ಇದೀಗ ಆ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ.
ರಾಹುಲ್ ತನ್ನ 210 ಎಸೆತಗಳ ಇನಿಂಗ್ಸ್‌ನಲ್ಲಿ 16 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇದರೊಂದಿಗೆ ಭಾರತ ‘ಎ’ ತಂಡದ ರನ್ ಚೇಸ್‌ಗೆ ಬೆನ್ನೆಲುಬಾಗಿ ನಿಂತರು. ಸುದರ್ಶನ್(100 ರನ್, 172 ಎಸೆತ)ಹಾಗೂ ನಾಯಕ ಧ್ರುವ ಜುರೆಲ್(56 ರನ್, 66 ಎಸೆತ, 5 ಬೌಂಡರಿ, 3 ಸಿಕ್ಸರ್)ರಾಹುಲ್‌ಗೆ ಸಮರ್ಥ ಸಾಥ್ ನೀಡಿದರು.
ಭಾರತ ‘ಎ’ ತಂಡದ ಕಳಪೆ ಆರಂಭವನ್ನು ಪರಿಗಣಿಸಿದರೆ ಈ ಫಲಿತಾಂಶವು ಭಾರೀ ಮಹತ್ವ ಪಡೆದಿದೆ. ಆಸ್ಟ್ರೇಲಿಯ ‘ಎ’ ತಂಡದ ಮೊದಲ ಇನಿಂಗ್ಸ್ 420 ರನ್‌ಗೆ ಉತ್ತರವಾಗಿ ಭಾರತ ‘ಎ’ ತಂಡವು ಕೇವಲ 194 ರನ್ ಗಳಿಸಿತು. ಸುದರ್ಶನ್ 75 ರನ್ ಗಳಿಸಿ ಹೋರಾಟ ನೀಡಿದರು. ಹೆನ್ರಿ ಥೋರ್ನ್‌ಂಟನ್(4-36)ಭಾರತವನ್ನು ಕಾಡಿದರು.
ಆಸ್ಟ್ರೇಲಿಯದ 2ನೇ ಇನಿಂಗ್ಸ್‌ನಲ್ಲಿ ಭಾರತದ ಬೌಲರ್‌ಗಳು ಎದಿರೇಟು ನೀಡಿದರು. ಆರಂಭದಲ್ಲಿ ಮುಹಮ್ಮದ್ ಸಿರಾಜ್(2-20), ಆ ನಂತರ ಮಾನವ್ ಸುಥಾರ್(3-50) ಹಾಗೂ ಗುರ್ನುರ್ ಸಿಂಗ್(3-42) ಪ್ರವಾಸಿಗರನ್ನು 185 ರನ್‌ಗೆ ನಿಯಂತ್ರಿಸಿದರು. ನಾಯಕ ಮೆಕ್‌ಸ್ವೀನಿ(85 ರನ್)ಹೋರಾಟದಿಂದ ಆಸ್ಟ್ರೇಲಿಯ ‘ಎ’ ತಂಡವು ಭಾರತದ ಗೆಲುವಿಗೆ 412 ರನ್ ನಿಗದಿಪಡಿಸಿತು.
4ನೇ ದಿನದಾಟವಾದ ಶುಕ್ರವಾರ 2 ವಿಕೆಟ್‌ಗಳ ನಷ್ಟಕ್ಕೆ 169 ರನ್‌ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿದ ಭಾರತ ‘ಎ’ ತಂಡಕ್ಕೆ ಗೆಲ್ಲಲು ಇನ್ನೂ 243 ರನ್ ಅಗತ್ಯವಿತ್ತು. ರಾಹುಲ್ ಹಾಗೂ ಸುದರ್ಶನ್ ಅವರ ಶತಕಗಳ ಸಹಾಯದಿಂದ ಭಾರತ ತಂಡವು ಟೀ ವಿರಾಮಕ್ಕೆ ಮೊದಲೇ ಗರಿಷ್ಠ ರನ್ ಚೇಸ್ ಮಾಡಿ ಲಕ್ನೊದಲ್ಲಿ ಇತಿಹಾಸದಲ್ಲಿ ನಿರ್ಮಿಸಿತು.
ಭಾರತ ನೆಲದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ ಆರನೇ ಬಾರಿ 400ಕ್ಕೂ ಅಧಿಕ ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಲಾಗಿದೆ. 2010ರ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಪಶ್ಚಿಮ ವಲಯ ತಂಡವು ದಕ್ಷಿಣ ವಲಯ ನೀಡಿದ್ದ 536 ರನ್ ಗುರಿಯನ್ನು 3 ವಿಕೆಟ್‌ಗಳು ಬಾಕಿ ಇರುವಾಗಲೇ ಗೆದ್ದುಕೊಂಡಿದ್ದು, ಇದು ಗರಿಷ್ಠ ರನ್ ಚೇಸ್ ಆಗಿದೆ.
ಭಾರತದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗರಿಷ್ಠ ಯಶಸ್ವಿ ರನ್ ಚೇಸ್‌ಗಳು
1. ಗುರಿ 536: ದಕ್ಷಿಣ ವಲಯವನ್ನು 3 ವಿಕೆಟ್‌ಗಳಿಂದ ಸೋಲಿಸಿದ ಪಶ್ಚಿಮ ವಲಯ(2010)
2. ಗುರಿ 501: ಇಂಗ್ಲೆಂಡ್ ‘ಎ’ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದ ದಕ್ಷಿಣ ವಲಯ(2004)
3. ಗುರಿ 480: ಮುಂಬೈ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿದ ಶೇಷ ಭಾರತ(2016)
4. ಗುರಿ 424: ಬಂಗಾಳ ಸಿಎಂ ಇಲೆವೆನ್ ತಂಡವನ್ನು 1 ವಿಕೆಟ್‌ನಿಂದ ಸೋಲಿಸಿದ ಕಾಮನ್ವೆಲ್ತ್ ಇಲೆವೆನ್(1964)
5. ಗುರಿ 421: ದಿಲ್ಲಿ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ ಶೇಷ ಭಾರತ(1982)
6. ಗುರಿ 412: ಆಸ್ಟ್ರೇಲಿಯ ‘ಎ’ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಭಾರತ ‘ಎ’ (2025)