ದ್ರಾವಿಡ್, ಗಾವಸ್ಕರ್ ದಾಖಲೆ ಮುರಿದ ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್ (Photo: X/BCCI)
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆಯುತ್ತಿರುವ ಪ್ರಥಮ ಟೆಸ್ಟ್ ನ ಎರಡನೆ ಇನಿಂಗ್ಸ್ ನಲ್ಲಿ ಭಾರತ ತಂಡದ ಆರಂಭಿಕ ಬ್ಯಾಟರ್ ಕೆ.ಎಲ್.ರಾಹುಲ್ ಶತಕ (137) ಗಳಿಸುವ ಮೂಲಕ, ಇಂಗ್ಲೆಂಡ್ ನೆಲದಲ್ಲಿ ವಿಶಿಷ್ಟ ದಾಖಲೆಯೊಂದಕ್ಕೆ ಭಾಜನರಾಗಿದ್ದಾರೆ.
ಭಾರತ ತಂಡದ ಆರಂಭಿಕ ಬ್ಯಾಟರ್ ಗಳ ಪೈಕಿ, ಇಂಗ್ಲೆಂಡ್ ನೆಲದಲ್ಲಿ ಮೂರು ಶತಕಗಳನ್ನು ಬಾರಿಸಿದ ಏಕೈಕ ಬ್ಯಾಟರ್ ಎಂಬ ಶ್ರೇಯಕ್ಕೆ ಕೆ.ಎಲ್.ರಾಹುಲ್ ಪಾತ್ರವಾಗಿದ್ದು, ಆ ಮೂಲಕ, ಈವರೆಗೆ ಭಾರತ ತಂಡದ ಮಾಜಿ ದಿಗ್ಗಜ ಬ್ಯಾಟರ್ ಗಳಾದ ರಾಹುಲ್ ದ್ರಾವಿಡ್, ವಿಜಯ್ ಮರ್ಚೆಂಟ್ ಹಾಗೂ ಸುನೀಲ್ ಗಾವಸ್ಕರ್ ಹೆಸರಿನಲ್ಲಿದ್ದ ದಾಖಲೆಗಳನ್ನು ಮುರಿದಿದ್ದಾರೆ.
ಇಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ನಾಲ್ಕನೆ ದಿನದಾಟದಂದು ಭಾರತ ತಂಡದ ಪರ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದ ಕೆ.ಎಲ್.ರಾಹುಲ್, 247 ಎಸೆತಗಳನ್ನು ಎದುರಿಸಿ, 18 ಬೌಂಡರಿಗಳ ನೆರವಿನಿಂದ 137 ರನ್ ಗಳಿಸುವ ಮೂಲಕ, ಇಂಗ್ಲೆಂಡ್ ನೆಲದಲ್ಲಿ ಮೂರು ಶತಕ ಗಳಿಸಿದ ಭಾರತ ತಂಡದ ಪ್ರಥಮ ಆರಂಭಿಕ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದರು.
ಇದಕ್ಕೂ ಮುನ್ನ, ಆರಂಭಿಕ ಬ್ಯಾಟರ್ ಗಳಾಗಿ ರಾಹುಲ್ ದ್ರಾವಿಡ್, ವಿಜಯ್ ಮರ್ಚೆಂಟ್ ಹಾಗೂ ಸುನೀಲ್ ಗಾವಸ್ಕರ್ ತಲಾ ಎರಡು ಶತಕಗಳನ್ನು ಗಳಿಸಿದ್ದರು.
ಇದಲ್ಲದೆ, SENA (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ) ದೇಶಗಳಲ್ಲಿ ಅತಿ ಹೆಚ್ಚು 50ಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟರ್ ಗಳ ಸಾಲಿನಲ್ಲಿದ್ದ ವಿರೇಂದ್ರ ಸೆಹ್ವಾಗ್ (9) ದಾಖಲೆಯನ್ನೂ ಅವರು ಸರಿಗಟ್ಟಿದ್ದಾರೆ. ಈ ಪಟ್ಟಿಯಲ್ಲಿ ಸುನೀಲ್ ಗಾವಸ್ಕರ್ (19) ಅಗ್ರ ಸ್ಥಾನದಲ್ಲಿದ್ದಾರೆ.