ಯುದ್ಧದ ಹಿನ್ನೆಲೆಯಲ್ಲಿ ನಿವೃತ್ತಿ ಘೋಷಣೆ ಮುಂದೂಡಿದ್ದ ಕೊಹ್ಲಿ
ವಿರಾಟ್ ಕೊಹ್ಲಿ | PTI
ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಸೋಮವಾರ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಅವರ ಭವ್ಯ ಟೆಸ್ಟ್ ಕ್ರಿಕೆಟ್ ಬದುಕಿಗೆ ತೆರೆ ಬಿದ್ದಿದೆ.
ಅವರು ಟೆಸ್ಟ್‌ನಲ್ಲಿ 123 ಪಂದ್ಯಗಳನ್ನು ಆಡಿ 46.85ರ ಸರಾಸರಿಯಲ್ಲಿ 9,230 ರನ್‌ಗಳನ್ನು ಕಲೆ ಹಾಕಿದ್ದಾರೆ. ಅವರು ಈಗಾಗಲೇ ಅಂತರ್‌ರಾಷ್ಟ್ರೀಯ ಟಿ20 ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ್ದು, ಇನ್ನು ಏಕದಿನ ಪಂದ್ಯಗಳಲ್ಲಿ ಮಾತ್ರ ಆಡಲಿದ್ದಾರೆ.
ಮೇ 7ರಂದು ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ ದಿನಗಳ ಬಳಿಕ, ವಿರಾಟ್ ಕೊಹ್ಲಿಯ ನಿವೃತ್ತಿಯೂ ಬಂದಿದೆ. ಆದರೆ, ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ ದಿನದಂದೇ ನಿವೃತ್ತಿ ಘೋಷಿಸಲು ಕೊಹ್ಲಿ ಬಯಸಿದ್ದರು ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಸೇನಾ ಸಂಘರ್ಷ ತಲೆದೋರಿರುವ ಹಿನ್ನೆಲೆಯಲ್ಲಿ ನಿವೃತ್ತಿ ಘೋಷಣೆಯನ್ನು ಕೆಲವು ದಿನಗಳ ಕಾಲ ಮುಂದೂಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಅವರಿಗೆ ಸಲಹೆ ನೀಡಿತ್ತು ಎಂದು ಪತ್ರಿಕೆ ವರದಿ ಮಾಡಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಶನಿವಾರ ಯುದ್ಧವಿರಾಮ ಏರ್ಪಟ್ಟ ಬಳಿಕ, ತಾನು ತನ್ನ ನಿವೃತ್ತಿ ನಿರ್ಧಾರವನ್ನು ಘೋಷಿಸುವುದಾಗಿ ಕೊಹ್ಲಿ ಬಿಸಿಸಿಐ ಮತ್ತು ಆಯ್ಕೆಗಾರರಿಗೆ ತಿಳಿಸಿದರು. ಅದರಂತೆ ಅವರು ಸೋಮವಾರ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದರು.
ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಅವರ ನಿವೃತ್ತಿ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ ಎಂದು ವರದಿ ಹೇಳಿದೆ. ಅವರ ಪತ್ನಿ ಅನುಷ್ಕಾ ಶರ್ಮಾ, ಮಗಳು ವಮಿಕಾ ಮತ್ತು ಮಗ ಅಕಾಯ್ ಲಂಡನ್ ನಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಕೊಹ್ಲಿ ಹಲವು ಬಾರಿ ಲಂಡನ್ ಗೆ ಹೋಗಿದ್ದಾರೆ.