ಕೊರಿಯಾ ಓಪನ್‌ನಿಂದ ಹಿಂದೆ ಸರಿದ ಸ್ವಿಯಾಟೆಕ್, ಜೆಸ್ಸಿಕಾ ಪೆಗುಲಾ, ರೈಬಾಕಿನಾ
ಇಗಾ ಸ್ವಿಯಾಟೆಕ್, ಜೆಸ್ಸಿಕಾ ಪೆಗುಲಾ | PC ; X
ಲಂಡನ್ : ಅಗ್ರ ಟೆನಿಸ್ ತಾರೆಯರಾದ ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್, ಅಮೆರಿಕನ್ ಓಪನ್ ರನ್ನರ್ಸ್ ಅಪ್ ಜೆಸ್ಸಿಕಾ ಪೆಗುಲಾ, ಮಾಜಿ ವಿಂಬಲ್ಡನ್ ಚಾಂಪಿಯನ್ ಎಲೆನ ರೈಬಾಕಿನಾ ಹಾಗೂ ಯು.ಎಸ್. ಓಪನ್ ಸೆಮಿ ಫೈನಲಿಸ್ಟ್ ಎಮ್ಮಾ ನವಾರೊ ಅವರು ಕೊರಿಯಾ ಓಪನ್ ಟೆನಿಸ್ ಟೂರ್ನಮೆಂಟ್‌ನಿಂದ ಹಿಂದೆ ಸರಿದಿದ್ದಾರೆ ಎಂದು ಪಂದ್ಯಾವಳಿಯ ಸಂಘಟಕರು ತಿಳಿಸಿದ್ದಾರೆ.
ಬಿಡುವಿಲ್ಲದ ಟೆನಿಸ್‌ನಿಂದ ದಣಿದಿರುವ ಸ್ವಿಯಾಟೆಕ್ ಕೊರಿಯಾ ಓಪನ್‌ನಿಂದ ಹಿಂದೆ ಸರಿದಿದ್ದಾರೆ. ಸಿಯೋಲ್‌ನ ಡಬ್ಲ್ಯುಟಿಎ 500 ಸ್ಪರ್ಧೆಯ ಹಾಲಿ ಚಾಂಪಿಯನ್ ಜೆಸ್ಸಿಕಾ ಪೆಗುಲಾ ಕೂಡ ಗಾಯದ ಸಮಸ್ಯೆಯಿಂದ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.
ಜೂನ್‌ನಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿರುವ ಸ್ವಿಯಾಟೆಕ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಕಳೆದ ತಿಂಗಳು ಕೆನಡಾ ಓಪನ್‌ನಿಂದಲೂ ಹಿಂದೆ ಸರಿದಿದ್ದರು. ಇತ್ತೀಚೆಗೆ ಯು.ಎಸ್. ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರೂ ಪೆಗುಲಾಗೆ ಸೋತಿದ್ದರು.
ವಿಶ್ವದ ನಂ.4ನೇ ಆಟಗಾರ್ತಿ ರೈಬಾಕಿನಾ ಬೆನ್ನುನೋವಿನ ಕಾರಣದಿಂದ ಕೊರಿಯಾ ಓಪನ್‌ಗೆ ಲಭ್ಯವಿರುವುದಿಲ್ಲ.
ತನ್ನ ವೇಳಾಪಟ್ಟಿಯಲ್ಲಿ ಬದಲಾವಣೆ ಆದ ಕಾರಣ ಎಮ್ಮಾ ನವಾರೊ ಕೊರಿಯಾ ಓಪನ್‌ನಲ್ಲಿ ಭಾಗವಹಿಸುತ್ತಿಲ್ಲ.
ಕೊರಿಯಾ ಓಪನ್ ಟೂರ್ನಿಯು ಸೆಪ್ಟಂಬರ್ 16 ರಿಂದ 22ರ ತನಕ ನಡೆಯಲಿದೆ.