ಏಶ್ಯ ಕಪ್ ಟಿ-20 ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಕುಲದೀಪ್ ಯಾದವ್
ಕುಲದೀಪ್ ಯಾದವ್ | PC : PTI
ದುಬೈ, ಸೆ.27: ಭಾರತದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ 2025ರ ಆವೃತ್ತಿಯ ಏಶ್ಯ ಕಪ್ ಟೂರ್ನಿಯಲ್ಲಿ ಆರು ಇನಿಂಗ್ಸ್‌ಗಳಲ್ಲಿ 6.04ರ ಇಕಾನಮಿ ರೇಟ್‌ನಲ್ಲಿ ಒಟ್ಟು 13 ವಿಕೆಟ್‌ಗಳನ್ನು ಕಬಳಿಸುವ ಮೂಲಕ ದಾಖಲೆ ಪುಸ್ತಕದಲ್ಲಿ ತನ್ನ ಹೆಸರನ್ನು ಬರೆದರು.
ಯಾದವ್ ಇದೀಗ ಏಶ್ಯಕಪ್ ಟಿ-20 ಪಂದ್ಯಾವಳಿಯಲ್ಲಿ ಗರಿಷ್ಠ ವಿಕೆಟ್‌ಗಳನ್ನು ಸಂಪಾದಿಸಿದ್ದು, ಈ ಮೂಲಕ ಯುಎಇ ತಂಡದ ಅಮ್ಜಾದ್ ಜಾವೇದ್, ಬಾಂಗ್ಲಾದೇಶದ ಅಲ್-ಅಮೀನ್ ಹುಸೇನ್, ಯುಎಇ ತಂಡದ ಮುಹಮ್ಮದ್ ನವೀದ್ ಹಾಗೂ ಭಾರತದ ಭುವನೇಶ್ವರ ಕುಮಾರ್ ಅವರ ದಾಖಲೆಯನ್ನು ಮುರಿದರು.
ಶ್ರೀಲಂಕಾ ವಿರುದ್ಧ ಶುಕ್ರವಾರ ನಡೆದ ಸೂಪರ್ ಓವರ್ ಪಂದ್ಯ ಸಹಿತ ಭಾರತ ತಂಡವು ಸಂಕಷ್ಟದಲ್ಲಿದ್ದಾಗ ಕುಲದೀಪ್ ವಿಕೆಟ್ ಉರುಳಿಸಿದ್ದಾರೆ. ಲಂಕಾದ ಆರಂಭಿಕ ಆಟಗಾರ ಪಥುಮ್ ನಿಸ್ಸಾಂಕ ಬಿರುಗಾಳಿ ವೇಗದ ಶತಕದಿಂದಾಗಿ ಭಾರತೀಯ ಬೌಲರ್‌ಗಳು ಕಂಗಾಲಾಗಿದ್ದರೂ, ಕುಲದೀಪ್ ಏಕರೂಪದ ಸ್ಪಿನ್ ಬೌಲಿಂಗ್‌ನ ಮೂಲಕ ಪಂದ್ಯಾವಳಿಯುದ್ದಕ್ಕೂ ಭಾರತ ತಂಡವು ಹಿಡಿತ ಸಾಧಿಸುವಲ್ಲಿ ನೆರವಾಗಿದ್ದರು. ಲಂಕಾ ವಿರುದ್ಧದ ಪಂದ್ಯದಲ್ಲಿ ಕುಲದೀಪ್ 4 ಓವರ್‌ಗಳಲ್ಲಿ 31 ರನ್ ನೀಡಿ 1 ವಿಕೆಟ್ ಪಡೆದಿದ್ದರು.
ಕೇವಲ 6 ಇನಿಂಗ್ಸ್‌ಗಳಲ್ಲಿ 13 ವಿಕೆಟ್‌ಗಳನ್ನು ಪಡೆದಿರುವ ಕುಲದೀಪ್ ಏಶ್ಯ ಕಪ್ ಟೂರ್ನಿಯಲ್ಲಿ ಟಿ-20 ಮಾದರಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.