ವೇಗವಾಗಿ ಐದು 5 ವಿಕೆಟ್ ಗೊಂಚಲು | ದಾಖಲೆ ನಿರ್ಮಿಸಿದ ಕುಲದೀಪ್ ಯಾದವ್
Photo : AFP
ಹೊಸದಿಲ್ಲಿ, ಅ. 12: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಹಾಗೂ ಕೊನೆಯ ಟೆಸ್ಟ್‌ನ ಮೂರನೇ ದಿನವಾದ ರವಿವಾರ ಭಾರತೀಯ ಸ್ಪಿನ್ನರ್ ಕುಲದೀಪ್ ಯಾದವ್ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಇದರೊಂದಿಗೆ, ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ ಐದು 5 ವಿಕೆಟ್‌ಗಳ ಗೊಂಚಲನ್ನು ಪಡೆದ ಎಡಗೈ ರಿಸ್ಟ್ ಸ್ಪಿನ್ನರ್ ಆಗಿ ಅವರು ದಾಖಲೆ ನಿರ್ಮಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ಹೆಚ್ಚು ಐದು ವಿಕೆಟ್ ಗೊಂಚಲನ್ನು ಪಡೆದ ಎರಡನೇ ಎಡಗೈ ರಿಸ್ಟ್ ಸ್ಪಿನ್ನರ್ ಅವರಾಗಿದ್ದಾರೆ. ಇಂಗ್ಲೆಂಡ್‌ನ ಜಾನಿ ವಾರ್ಡಲ್ ಈಗಾಗಲೇ ಈ ಸಾಧನೆಯನ್ನು ಮಾಡಿದ್ದಾರೆ ಮತ್ತು ಅವರನ್ನು ಕುಲದೀಪ್ ಸರಿಗಟ್ಟಿದ್ದಾರೆ. ಆದರೆ ವಾರ್ಡಲ್ ಈ ಸಾಧನೆಯನ್ನು 28 ಪಂದ್ಯಗಳಲ್ಲಿ ಮಾಡಿದ್ದರೆ, ಕುಲದೀಪ್ ಕೇವಲ 15 ಪಂಂದ್ಯಗಳಲ್ಲಿ ಇದನ್ನು ಸಾಧಿಸಿದ್ದಾರೆ.
ದಕ್ಷಿಣ ಆಫ್ರಿಕದ ಪೌಲ್ ಆ್ಯಡಮ್ಸ್ 45 ಪಂದ್ಯಗಳಲ್ಲಿ ನಾಲ್ಕು ಐದು ವಿಕೆಟ್ ಗಳ ಗೊಂಚಲನ್ನು ಗಳಿಸಿದ್ದಾರೆ.
ವೆಸ್ಟ್ ಇಂಡೀಸ್‌ನ ಮೊದಲ ಇನಿಂಗ್ಸ್‌ನಲ್ಲಿ ಕುಲದೀಪ್ ಯಾದವ್ 82 ರನ್‌ಗಳನ್ನು ನೀಡಿ 5 ವಿಕೆಟ್ ಗಳನ್ನು ಪಡೆದರು. ಮೂರನೇ ದಿನವಾದ ರವಿವಾರ ವೆಸ್ಟ್ ಇಂಡೀಸ್ 81.5 ಓವರ್‌ಗಳಲ್ಲಿ 248 ರನ್‌ಗಳಿಗೆ ಸರ್ವಪತನಗೊಂಡಿತು. ಇದರೊಂದಿಗೆ ಭಾರತವು 270 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆದುಕೊಂಡಿತು ಮತ್ತು ಎದುರಾಳಿ ಮೇಲೆ ಫಾಲೋ-ಆನ್ ಹೇರಿತು.