ಮೆಸ್ಸಿಯಿಂದ ರೊನಾಲ್ಡೊ ತನಕ 12 ಫುಟ್ಬಾಲ್ ಲೆಜೆಂಡ್‌ಗಳಿಗೆ ಕೊನೆಯ ವಿಶ್ವಕಪ್?
ಲಿಯೊನೆಲ್ ಮೆಸ್ಸಿ(X \ @MessiLeoBrasil_) , ಕ್ರಿಸ್ಟಿಯಾನೋ ರೊನಾಲ್ಡೊ(X \ @CR7Brasil)
ಹೊಸದಿಲ್ಲಿ, ಜೂ.2: ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೊ ದೇಶಗಳ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2026ರ ಆವೃತ್ತಿಯ ವಿಶ್ವಕಪ್ ಹಲವು ಪ್ರಥಮಗಳಿಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ. ಪಂದ್ಯಾವಳಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿ 48 ತಂಡಗಳು ಭಾಗವಹಿಸಲಿವೆ.
ಹಲವಾರು ಫುಟ್ಬಾಲ್ ಸ್ಟಾರ್‌ಗಳು ಕೊನೆಯ ಬಾರಿ ಕ್ರೀಡೆಯ ಅತಿದೊಡ್ಡ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹಲವರು ಈಗಾಗಲೇ ಹಲವು ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ್ದು, ತಮ್ಮ ದೇಶದ ನಾಯಕತ್ವವನ್ನು ವಹಿಸಿದ್ದಾರೆ. ಕೆಲವು ಪ್ರಮುಖ ಟ್ರೋಫಿಗಳನ್ನು ಗೆದ್ದಿದ್ದಾರೆ. ಪಂದ್ಯಾವಳಿಯ ಅತ್ಯಂತ ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಿದ್ದಾರೆ. ಇನ್ನೂ ಕೆಲವರು ತಮ್ಮ ವೃತ್ತಿಜೀವನದಲ್ಲಿ ಗೆಲ್ಲಲಾಗದ ಪ್ರಮುಖ ಪ್ರಶಸ್ತಿಯನ್ನು ಬೆನ್ನಟ್ಟುತ್ತಿದ್ದಾರೆ.
ಆಟಗಾರರ ನಿವೃತ್ತಿಯ ಯೋಜನೆಯು ಕೆಲವೊಮ್ಮೆ ಬದಲಾಗಬಹುದು. ಉತ್ತರ ಅಮೆರಿಕದಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್‌ನಲ್ಲಿ ಕೊನೆಯ ಬಾರಿ ಕಾಣಿಸಿಕೊಳ್ಳಲಿರುವ ಆಟಗಾರರತ್ತ ಒಂದು ನೋಟ..
1.ಲಿಯೊನೆಲ್ ಮೆಸ್ಸಿ(ಅರ್ಜೆಂಟೀನ, 39 ವರ್ಷ): ಸ್ಟಾರ್ ಆಟಗಾರತ ಮೆಸ್ಸಿ ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನ ತಂಡದೊಂದಿಗೆ ಈಗಾಗಲೇ ಅಮೆರಿಕಕ್ಕೆ ತಲುಪಿದ್ದಾರೆ. 2022ರಲ್ಲಿ ಖತರ್‌ನಲ್ಲಿ ಗೆದ್ದಿರುವ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ತಯಾರಿಯಲ್ಲಿದ್ದಾರೆ. ಮೆಸ್ಸಿ ದಾಖಲೆಯ ಆರನೇ ಬಾರಿ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ಮೂಲಕ ತನ್ನ ದೀರ್ಘಕಾಲದ ಪ್ರತಿಸ್ಪರ್ಧಿ ಕ್ರಿಸ್ಟಿಯಾನೊ ರೊನಾಲ್ಡೊರ ದಾಖಲೆ ಸರಿಗಟ್ಟಲಿದ್ದಾರೆ. ಮೆಸ್ಸಿಯವರ ನಾಯಕತ್ವ, ಅನುಭವ ಹಾಗೂ ಪಂದ್ಯಗಳನ್ನು ನಿರ್ಧರಿಸುವ ಸಾಮರ್ಥ್ಯವು ಹಾಲಿ ಚಾಂಪಿಯನ್ ತಂಡಕ್ಕೆ ಅವರನ್ನು ಅನಿವಾರ್ಯವಾಗಿಸಿದೆ. ಖತರ್‌ನಲ್ಲಿ ವಿಶ್ವಕಪ್ ಕನಸನ್ನು ಈಡೇರಿಸಿಕೊಂಡಿರುವ ಮೆಸ್ಸಿ ಕೊನೆಯ ಬಾರಿ ವಿಶ್ವಕಪ್‌ನಲ್ಲಿ ಅರ್ಜೆಂಟೀನವನ್ನು ಪ್ರತಿನಿಧಿಸುವ ನಿರೀಕ್ಷೆ ಇದೆ.
2. ಕ್ರಿಸ್ಟಿಯಾನೊ ರೊನಾಲ್ಡೊ(ಪೋರ್ಚುಗಲ್, 41 ವರ್ಷ): ಪೋರ್ಚುಗಲ್ ತಂಡಕ್ಕೆ ಸೇರ್ಪಡೆಯಾಗಿರುವ ರೊನಾಲ್ಡೊ ಅವರು ಮೆಸ್ಸಿಯವರಂತೆ ಆರನೇ ಬಾರಿ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ ನಸ್ರ್ ಎಫ್‌ಸಿ ನಾಯಕ ರೊನಾಲ್ಡೊ ಇತ್ತೀಚೆಗೆ ತನ್ನ ಮೊದಲ ಸೌದಿ ಪೊ ಲೀಗ್ ಪ್ರಶಸ್ತಿ ಜಯಿಸಿದ್ದರು. ಕ್ಲಬ್ ಮಟ್ಟದಲ್ಲಿ ಅಸಾಮಾನ್ಯ ಸ್ಕೋರಿಂಗ್ ರೇಟ್ ಕಾಯ್ದುಕೊಂಡಿದ್ದಾರೆ. ಎರಡು ದಶಕಗಳ ಹಿಂದೆ ಪೋರ್ಚುಗಲ್ ಪರ ಚೊಚ್ಚಲ ಪಂದ್ಯವನ್ನಾಡಿದ್ದ ರೊನಾಲ್ಡೊ 13ನೇ ಪ್ರಮುಖ ಅಂತರ್‌ರಾಷ್ಟ್ರೀಯ ಟೂರ್ನಿ ಆಡಲು ಸಜ್ಜಾಗಿದ್ದಾರೆ. ವಿಶ್ವಕಪ್ ನನ್ನ ಕೊನೆಯ ಪ್ರಮುಖ ಅಂತರ್‌ರಾಷ್ಟ್ರೀಯ ಟೂರ್ನಿಯಾಗಲಿದೆ ಎಂದು ರೊನಾಲ್ಡೊ ಬಹಿರಂಗವಾಗಿ ಹೇಳಿದ್ದಾರೆ. ರೊನಾಲ್ಡೊಗೆ ತನ್ನ ವೃತ್ತಿಜೀವನದಲ್ಲಿ ಈ ತನಕ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ.
3. ಲುಕಾ ಮಾಡ್ರಿಕ್(ಕ್ರೊಯೇಶಿಯ, 40 ವರ್ಷ): ಮಿಡ್‌ಫೀಲ್ಡರ್ ಮಾಡ್ರಿಕ್ ಐದನೇ ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸುತ್ತಿದ್ದು, ಕ್ರೊಯೇಶಿಯಾ ತಂಡವನ್ನು ಕೊನೆಯ ಬಾರಿ ಮುನ್ನಡೆಸುವ ನಿರೀಕ್ಷೆ ಇದೆ.
2018ರ ಬ್ಯಾಲನ್ ಡಿ ಓರ್ ಪ್ರಶಸ್ತಿ ವಿಜೇತ ಮಾಡ್ರಿಕ್ ಇತ್ತೀಚೆಗೆ ಗಾಯಗೊಂಡಿದ್ದರು. ನಂತರ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಓರ್ವ ಅತ್ಯಂತ ಪ್ರಭಾವಿ ಮಿಡ್‌ಫೀಲ್ಡರ್ ಮಾಡ್ರಿಕ್ ಉತ್ತರ ಅಮೆರಿಕದಲ್ಲಿ ಕೊನೆಯ ಬಾರಿ ಆಡುವ ಸಾಧ್ಯತೆಯಿದೆ.
4.ಮ್ಯಾನುಯೆಲ್ ನ್ಯೂಯರ್(ಜರ್ಮನಿ, 40 ವರ್ಷ): ಜರ್ಮನಿಯ ಲೆಜೆಂಡರಿ ಗೋಲ್‌ಕೀಪರ್ ನ್ಯೂಯರ್ ತನ್ನ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ನಂತರ ಸತತ ಐದನೇ ವಿಶ್ವಕಪ್‌ಗಾಗಿ ಸಜ್ಜಾಗಿದ್ದಾರೆ. 2024ರ ಯುರೋ ಕಪ್ ನಂತರ ನಿವೃತ್ತಿಯಾಗಿದ್ದ ನ್ಯೂಯರ್ ಆನಂತರ ನಿರ್ಧಾರ ಬದಲಿಸಿದ್ದರು. ಮ್ಯೂನಿಕ್‌ನ ಹಿರಿಯ ಆಟಗಾರ ಮತ್ತೊಮ್ಮೆ ಜರ್ಮನಿಯ ಪ್ರಮುಖ ಗೋಲ್‌ಕೀಪರ್ ಆಗಲಿದ್ದಾರೆ. ಅಂತರ್‌ರಾಷ್ಟ್ರೀಯ ಫುಟ್ಬಾಲ್‌ನ ಅತ್ಯಂತ ಅನುಭವಿ ಅಟಗಾರನಾಗಿರುವ ನ್ಯೂಯರ್ ಪುನರಾಗಮನವು ಜರ್ಮನಿಗೆ ಹೊಸ ಶಕ್ತಿ ತಂದಿದೆ. ನ್ಯೂಯರ್ ಕೂಡ ಕೊನೆಯ ವಿಶ್ವಕಪ್ ಆಡುವ ಸಾಧ್ಯತೆಯಿದೆ.
5. ಗಿಲ್ಲೆರ್ಮೊ ಒಚೋವಾ(ಮೆಕ್ಸಿಕೊ, 40 ವರ್ಷ): ಮೆಕ್ಸಿಕೊದ ಲೆಜೆಂಡರಿ ಗೋಲ್‌ಕೀಪರ್ ಮತ್ತೊಮ್ಮೆ ಆತಿಥೇಯ ಮೆಕ್ಸಿಕೊದ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಓರ್ವ ಫುಟ್ಬಾಲ್ ವಿಶ್ವಕಪ್ ಸ್ಪೆಷಲಿಸ್ಟ್ ಆಗಿರುವ ಒಚೋವಾ ಹಲವು ಟೂರ್ನಿಗಳಲ್ಲಿ ಅತ್ಯಮೋಘ ಪ್ರದರ್ಶನ ನೀಡಿದ್ದಾರೆ. ವಿಶ್ವದ ಬಲಿಷ್ಠ ತಂಡಗಳ ಎದುರು ವೀರೋಚಿತ ಪ್ರದರ್ಶನ ನೀಡಿದ್ದಾರೆ. ಮೆಕ್ಸಿಕೊದ ಆಧುನಿಕ ವಿಶ್ವಕಪ್ ಇತಿಹಾಸದ ಪ್ರಮುಖ ಭಾಗವಾಗಿದ್ದಾರೆ. 40ರ ವಯಸ್ಸಿನಲ್ಲೂ ಅವರ ನಾಯಕತ್ವ, ಅನುಭವವು ಕೋಚಿಂಗ್ ಸಿಬ್ಬಂದಿ ಅವರ ಮೇಲೆ ನಂಬಿಕೆ ಇಡಲು ಕಾರಣವಾಗಿದೆ. ಒಚೋವಾ ಪಾಲಿಗೆ ಇದು ಕೊನೆಯ ವಿಶ್ವಕಪ್ ಆಗುವ ನಿರೀಕ್ಷೆ ಇದೆ.
6. ಮುಹಮ್ಮದ್ ಸಲಾಹ್(ಈಜಿಪ್ಟ್, 33 ವರ್ಷ): ಲಿವರ್‌ಪೂಲ್ ಸೂಪರ್‌ಸ್ಟಾರ್ ಸಲಾಹ್ ಈಜಿಪ್ಟ್ ಫುಟ್ಬಾಲ್‌ನ ಚಿರಪರಿಚಿತ ಆಟಗಾರನಾಗಿದ್ದು, ಇಡೀ ದೇಶದ ಭರವಸೆಯ ಭಾರದೊಂದಿಗೆ ಟೂರ್ನಿಯನ್ನು ಪ್ರವೇಶಿಸಲಿದ್ದಾರೆ. ಕ್ಲಬ್ ಫುಟ್ಬಾಲ್‌ನ ಎಲೈಟ್ ಮಟ್ಟದಲ್ಲಿ ತನ್ನ ಉತ್ತಮ ಪ್ರದರ್ಶನ ಮುಂದುವರಿಸಿದ್ದಾರೆ. ವಿಶ್ವದ ಅತ್ಯಂತ ಆಕ್ರಮಣಕಾರಿ ಆಟಗಾರನೆಂಬ ಹೆಗ್ಗಳಿಕೆ ಉಳಿಸಿಕೊಂಡಿದ್ದಾರೆ. ಫುಟ್ಬಾಲ್‌ನ ಅತ್ಯಂತ ಪ್ರಮುಖ ಪ್ರಶಸ್ತಿ ಗೆಲ್ಲಲು ಸಲಾಹ್‌ಗೆ ಬಹುಶಃ ಇದು ಕೊನೆಯ ಅವಕಾಶವಾಗಿದೆ.
7: ನೇಮರ್ ಜೂನಿಯರ್(ಬ್ರೆಝಿಲ್, 34 ವರ್ಷ): ಬಲಗಾಲಿನ ನೋವಿನಿಂದ ಬಳಲುತ್ತಿದ್ದರೂ ನೇಮರ್ ಜೂನಿಯರ್ ಬ್ರೆಝಿಲ್ ಫುಟ್ಬಾಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ತಕ್ಷಣವೇ ಲಭ್ಯವಾಗುವ ಸಾಧ್ಯತೆಯಿಲ್ಲ. ಆದರೆ ಬ್ರೆಝಿಲ್ ತಂಡದಲ್ಲಿ ಅವರ ಪ್ರಾಮುಖ್ಯತೆಯು ಪ್ರಶ್ನಾತೀತವಾಗಿದೆ. ತನ್ನ ವೃತ್ತಿಜೀವನದಲ್ಲಿ ಬ್ರೆಝಿಲ್‌ನ ನಿರೀಕ್ಷೆಗಳ ಭಾರವನ್ನು ಹೊತ್ತು ಸಾಗಿದ್ದೇನೆಂದು ನೇಮರ್ ಹಲವು ಬಾರಿ ಹೇಳಿದ್ದಾರೆ. ಇದು ನನ್ನ ಕೊನೆಯ ವಿಶ್ವಕಪ್ ಆಗಲಿದೆ ಎಂದು ಹೇಳಿಕೊಂಡಿದ್ದಾರೆ.
8. ನಿಕೊಲಸ್ ಒಟಮೆಂಡಿ(ಅರ್ಜೆಂಟೀನ, 38 ವರ್ಷ): ಹಿರಿಯ ಡಿಫೆಂಡರ್ ಒಟಮೆಂಡಿ, ಅರ್ಜೆಂಟೀನ ತಂಡದಲ್ಲಿ ತನ್ನ ಸ್ಥಾನ ಉಳಿಸಿಕೊಂಡಿದ್ದಾರೆ. ಅರ್ಜೆಂಟೀನದ ಯುವ ಡಿಫೆಂಡರ್‌ಗಳಿಗೆ ಸಾಥ್ ನೀಡುವ ನಿರೀಕ್ಷೆ ಇದೆ. ಅರ್ಜೆಂಟೀನ ತಂಡದ ಓರ್ವ ಅತ್ಯಂತ ಅನುಭವಿ ಸದಸ್ಯರಾಗಿರುವ ಒಟಮಂಡಿ ತನ್ನ ನಾಲ್ಕನೇ ವಿಶ್ವಕಪ್ ಆಡಲು ಸಜ್ಜಾಗಿದ್ದಾರೆ. ಈ ಹಿಂದೆ 2010, 2018 ಹಾಗೂ 2022ರಲ್ಲಿ ಆಡಿದ್ದರು. ಈಗಾಗಲೇ ಖತರ್‌ನಲ್ಲಿ ವಿಶ್ವಕಪ್ ಗೆದ್ದಿರುವ ಒಟಮಂಡಿ, ತನ್ನ ಕೊನೆಯ ವಿಶ್ವಕಪ್ ಆಡಿ ತನ್ನ ಅಂತರ್‌ರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆಯುವ ವಿಶ್ವಾಸದಲ್ಲಿದ್ದಾರೆ.
9: ಕಾಸೆಮಿರೊ(ಬ್ರೆಝಿಲ್, 34): ಮ್ಯಾಂಚೆಸ್ಟರ್ ಯನೈಟೆಡ್‌ನ ಮಿಡ್‌ಫೀಲ್ಡರ್ ಕಾಸೆಮಿರೊ ಬ್ರೆಝಿಲ್‌ನ 26 ಸದಸ್ಯರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದು ಕಾಸೆಮಿರೊ ಅವರ ನಾಲ್ಕನೇ ವಿಶ್ವಕಪ್ ಟೂರ್ನಿಯಾಗಿದೆ. ವಿಶ್ವಕಪ್, ಅಂತರ್‌ರಾಷ್ಟ್ರೀಯ ವೃತ್ತಿಜೀವನದ ಕೊನೆಯ ಅಧ್ಯಾಯವಾಗುವ ನಿರೀಕ್ಷೆ ಇದೆ. ಬ್ರೆಝಿಲ್‌ನ ಮಿಡ್‌ಫೀಲ್ಡ್‌ನಲ್ಲಿ ಯುವ ಪ್ರತಿಭೆಯ ಕೊರತೆ ಇದ್ದು, ಕಾಸೆಮಿರೊ ಅವರ ಅನುಭವ ಹಾಗೂ ನಾಯಕತ್ವ ಅತ್ಯಂತ ಮೌಲ್ಯಯುತವಾಗಿದೆ.
10: ವರ್ಜಿಲ್ ವ್ಯಾನ್ ಡಿಕ್(ನೆದರ್‌ಲ್ಯಾಂಡ್ಸ್, 34 ವರ್ಷ): ಲಿವರ್‌ಪೂಲ್ ಕ್ಲಬ್‌ನ ನಾಯಕ ವರ್ಜಿಲ್ ನೆದರ್‌ಲ್ಯಾಂಡ್ಸ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. 2026ರ ವಿಶ್ವಕಪ್ ನನ್ನ ಕೊನೆಯ ಅಂತರ್‌ರಾಷ್ಟ್ರೀಯ ಸ್ಪರ್ಧಾವಳಿಯಾಗಿದೆ ಎಂದು ವರ್ಜಿಲ್ ಸಾರ್ವಜನಿಕವಾಗಿ ಹೇಳಿದ್ದರು. 2022ರಲ್ಲಿ ಖತರ್‌ನಲ್ಲಿ ನೆದರ್‌ಲ್ಯಾಂಡ್ಸ್ ತಂಡವನ್ನು ಕ್ವಾರ್ಟರ್ ಫೈನಲ್‌ಗೆ ತಲುಪಿಸಲು ನಾಯಕತ್ವ ವಹಿಸಿದ್ದ ವರ್ಜಿಲ್ ಇದೀಗ ಎರಡನೇ ಬಾರಿ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
11: ಜೇಮ್ಸ್ ರೋಡ್ರಿಗಸ್(ಕೊಲಂಬಿಯಾ, 34 ವರ್ಷ): ಕೊಲಂಬಿಯಾದ ನಾಯಕ ಹಾಗೂ ಪ್ರಮುಖ ಸದಸ್ಯ ರೋಡ್ರಿಗಸ್ 2014ರಲ್ಲಿ ಜಾಗತಿಕ ಮಟ್ಟದಲ್ಲಿ ಬೆಳಕಿಗೆ ಬಂದರು. ಆಗ ಅವರು ಕೇವಲ ಐದು ಪಂದ್ಯಗಳಲ್ಲಿ ಆರು ಗೋಲುಗಳನ್ನು ಗಳಿಸಿ ‘ಗೋಲ್ಡನ್ ಬೂಟ್’ ಗೆದ್ದುಕೊಂಡಿದ್ದರು. ಕೊಲಂಬಿಯಾ ತಂಡವು ಮೊತ್ತ ಮೊದಲ ಬಾರಿ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ಗೆ ತಲುಪಲು ನಾಯಕತ್ವ ವಹಿಸಿದ್ದರು. ಇತ್ತೀಚೆಗೆ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ರೋಡ್ರಿಗಸ್, ಫುಟ್ಬಾಲ್‌ನ ಪ್ರಮುಖ ಹಂತದಲ್ಲಿ ಮತ್ತೊಂದು ಅವಕಾಶ ಪಡೆದಿದ್ದಾರೆ. ಪಂದ್ಯಾವಳಿಯ ವೇಳೆ ತನ್ನ 35ನೇ ಹುಟ್ಟುಹಬ್ಬ ಆಚರಿಸಲಿರುವ ರೋಡ್ರಿಗಸ್ ಪಾಲಿಗೆ ಇದು ಕೊನೆಯ ವಿಶ್ವಕಪ್ ಆಗುವ ನಿರೀಕ್ಷೆ ಇದೆ.
12: ಸನ್ ಹೆಯುಂಗ್-ಮಿನ್(ದಕ್ಷಿಣ ಕೊರಿಯಾ, 33 ವರ್ಷ): ದಕ್ಷಿಣ ಕೊರಿಯಾದ ನಾಯಕ ಸನ್ ಹೆಯುಂಗ್ ಸತತ ನಾಲ್ಕನೇ ವಿಶ್ವಕಪ್ ಟೂರ್ನಿ ಆಡಲು ಸಜ್ಜಾಗಿದ್ದಾರೆ. ಎಲ್‌ಎಎಫ್ಸಿ ಕ್ಲಬ್ ಪರ ಆಡುತ್ತಿರುವ ಸನ್ ದೇಶದ ಪ್ರಮುಖ ಪುಟ್ಬಾಲ್ ಆಟಗಾರನಾಗಿದ್ದಾರೆ. ಏಶ್ಯದ ಓರ್ವ ಪ್ರಮುಖ ಸ್ಟಾರ್ ಆಗಿದ್ದಾರೆ. ಇದು ನನ್ನ ಕೊನೆಯ ವಿಶ್ವಕಪ್ ಆಗಬಹುದು ಎಂದು ಸಂದರ್ಶನದಲ್ಲಿ ಸನ್ ಹೇಳಿದ್ದರು. ದಕ್ಷಿಣ ಕೊರಿಯವು ಸನ್ ಅವರ ನಾಯಕತ್ವ, ಅನುಭವ, ಆಕ್ರಮಣಕಾರಿ ಗುಣವನ್ನು ಹೆಚ್ಚು ಅವಲಂಬಿಸಿದೆ.