ಐಪಿಎಲ್ ಇತಿಹಾಸದಲ್ಲಿ ಅಪರೂಪದ ಸಾಧನೆಗೈದ ಫಿಲ್ ಸಾಲ್ಟ್, ಸುಯಶ್ ಶರ್ಮಾ
ಫಿಲ್ ಸಾಲ್ಟ್ (PTI), ಸುಯಶ್ ಶರ್ಮಾ (@IPL)
ಹೊಸದಿಲ್ಲಿ, ಜೂ.2: ಅಹ್ಮದಾಬಾದ್‌ನಲ್ಲಿ ರವಿವಾರ ಗುಜರಾತ್ ಟೈಟನ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿದ್ದ ಆರ್‌ಸಿಬಿ ತಂಡ ಸತತ ಎರಡನೇ ಬಾರಿ ಐಪಿಎಲ್ ಪ್ರಶಸ್ತಿ ಜಯಿಸಿತ್ತು. ಈ ಗೆಲುವಿನ ವೇಳೆ ಹಲವು ದಾಖಲೆಗಳು ನಿರ್ಮಾಣವಾದವು. ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್ ನಂತರ ಪ್ರಶಸ್ತಿ ಉಳಿಸಿಕೊಂಡ ಮೂರನೇ ಫ್ರಾಂಚೈಸಿ ಎಂಬ ಹಿರಿಮೆಗೆ ಆರ್‌ಸಿಬಿ ಪಾತ್ರವಾಯಿತು. ಈ ಎಲ್ಲ ಸಂಭ್ರಮಾಚರಣೆ ಹಾಗೂ ಮೈಲಿಗಲ್ಲುಗಳ ನಡುವೆ ಪ್ರಮುಖ ದಾಖಲೆಯೊಂದು ಯಾರ ಗಮನಕ್ಕೂ ಬರಲಿಲ್ಲ.
ಆರ್‌ಸಿಬಿ ತಂಡದ ಫಿಲ್ ಸಾಲ್ಟ್ ಹಾಗೂ ಸುಯಶ್ ಶರ್ಮಾ ಅವರು ಐಪಿಎಲ್‌ನಲ್ಲಿ ಹ್ಯಾಟಿಕ್ ಪ್ರಶಸ್ತಿ ಜಯಿಸಿ ಅಪರೂಪದ ಸಾಧನೆ ಮಾಡಿದರು. ವಿಶೇಷವಾದ ಮೂರು ಸದಸ್ಯರ ಕ್ಲಬ್‌ಗೆ ಸೇರ್ಪಡೆಯಾದರು. ಸಾಲ್ಟ್ ಹಾಗೂ ಸುಯಶ್ 2025 ಹಾಗೂ 2026ರಲ್ಲಿ ಆರ್‌ಸಿಬಿ ಪರ ಸತತ ಟ್ರೋಫಿಗಳನ್ನು ಜಯಿಸುವ ಮೊದಲು 2024ರಲ್ಲಿ ಕೆಕೆಆರ್ ತಂಡದಲ್ಲಿದ್ದಾಗ ಐಪಿಎಲ್ ಪ್ರಶಸ್ತಿ ಜಯಿಸಿದ್ದರು.
ಐಪಿಎಲ್ ಇತಿಹಾಸದಲ್ಲಿ ಆಟಗಾರನಾಗಿ ಸತತ ಮೂರು ಪ್ರಶಸ್ತಿಗಳನ್ನು ಗೆದ್ದಿರುವ ಏಕೈಕ ಆಟಗಾರ ಕರಣ್ ಶರ್ಮಾ ಅವರಿದ್ದ ವಿಶೇಷ ಕ್ಲಬ್‌ಗೆ ಸಾಲ್ಟ್ ಹಾಗೂ ಸುಯಶ್ ಸೇರ್ಪಡೆಯಾದರು.
ಕರಣ್ 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್, 2017ರಲ್ಲಿ ಮುಂಬೈ ಇಂಡಿಯನ್ಸ್ ಹಾಗೂ 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾಗ ಟ್ರೋಫಿ ಗೆದ್ದಿದ್ದರು. ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿದ ಮೊದಲ ಆಟಗಾರನಾಗಿದ್ದರು.
ಐಪಿಎಲ್-2025ರ ಹರಾಜಿನ ವೇಳೆ 11.50 ಕೋ.ರೂ.ಗೆ ಆರ್‌ಸಿಬಿ ತೆಕ್ಕೆಗೆ ಸೇರಿದ್ದ ಸಾಲ್ಟ್ 2024ರಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟ್ರೋಫಿ ಗೆದ್ದ ಕೆಕೆಆರ್ ತಂಡದ ಸದಸ್ಯರಾಗಿದ್ದರು. 29ರ ಹರೆಯದ ಸಾಲ್ಟ್ ಇದೀಗ ಸತತ ಮೂರು ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಐಪಿಎಲ್ 2026ರಲ್ಲಿ ಆರು ಪಂದ್ಯಗಳನ್ನು ಆಡಿದ್ದು ಒಟ್ಟು 202 ರನ್ ಗಳಿಸಿದ್ದರು.
ಒಟ್ಟು 40 ಐಪಿಎಲ್ ಪಂದ್ಯಗಳಲ್ಲಿ ಸಾಲ್ಟ್ 174.48ರ ಸ್ಟ್ರೈಕ್‌ರೇಟ್‌ನಲ್ಲಿ 12 ಅರ್ಧಶತಕಗಳ ಸಹಿತ 1,258 ರನ್ ಗಳಿಸಿದ್ದರು.
ಇದೇ ವೇಳೆ ಸುಯಶ್‌ರನ್ನು ಐಪಿಎಲ್ 2025ರ ಹರಾಜಿನ ವೇಳೆ ಆರ್‌ಸಿಬ ತಂಡವು 2.60 ಕೋ.ರೂ.ಗೆ ಖರೀದಿಸಿತ್ತು. ಯುವ ಲೆಗ್ ಸ್ಪಿನ್ನರ್ ಈ ವರ್ಷದ ಐಪಿಎಲ್‌ನಲ್ಲಿ 12 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಉರುಳಿಸಿದ್ದರು. ಒಟ್ಟಾರೆ ಸುಯಶ್ 39 ಐಪಿಎಲ್ ಪಂದ್ಯಗಳಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದರು.
ಅತ್ಯಂತ ಹೆಚ್ಚು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿರುವ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹಾಗೂ ಅಂಬಟಿ ರಾಯುಡು ಅವರಿದ್ದಾರೆ. ಈ ಇಬ್ಬರು ತಲಾ ಆರು ಟ್ರೋಫಿಗಳನ್ನು ಗೆದ್ದಿದ್ದಾರೆ. ರೋಹಿತ್ 2009ರಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಮೊದಲ ಪ್ರಶಸ್ತಿ ಗೆದ್ದಿದ್ದರು. ಆ ನಂತರ ಮುಂಬೈ ಇಂಡಿಯನ್ಸ್ ಪರವಾಗಿ 2013 ಹಾಗೂ 2020ರ ನಡುವೆ ಐದು ಪ್ರಶಸ್ತಿಗಳನ್ನು ಗೆದ್ದಿದ್ದರು. ಇದೇ ವೇಳೆ ರಾಯುಡು ಮುಂಬೈ ತಂಡದ ಪರ ಮೂರು ಹಾಗೂ ಸಿಎಸ್‌ಕೆ ಪರ ಇನ್ನೂ ಮೂರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ತಲಾ ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿರುವ ಆರು ಆಟಗಾರರೆಂದರೆ: ಎಂ.ಎಸ್. ಧೋನಿ, ಹಾರ್ದಿಕ್ ಪಾಂಡ್ಯ, ಜಸ್‌ಪ್ರಿತ್ ಬುಮ್ರಾ, ಕಿರೊನ್ ಪೊಲಾರ್ಡ್, ಆದಿತ್ಯ ತಾರೆ ಹಾಗೂ ಕೃನಾಲ್ ಪಾಂಡ್ಯ.
ಧೋನಿ ಅವರು ಎಲ್ಲ ಐದು ಪ್ರಶಸ್ತಿಗಳನ್ನು ಚೆನ್ನೈಸೂಪರ್ ಕಿಂಗ್ಸ್ ತಂಡದ ಪರ ಗೆದ್ದಿದ್ದರು. ಬುಮ್ರಾ ಹಾಗೂ ಪೊಲಾರ್ಡ್ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದರು.
ಹಾರ್ದಿಕ್ ಪಾಂಡ್ಯ 2022ರಲ್ಲಿ ಗುಜರಾತ್ ಟೈಟನ್ಸ್ ಪ್ರಶಸ್ತಿ ಗೆಲ್ಲಲು ನಾಯಕತ್ವವಹಿಸಿಕೊಳ್ಳುವ ಮೊದಲು ಮುಂಬೈ ತಂಡದಲ್ಲಿ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದ್ದರು.
ಆರ್‌ಸಿಬಿ ಪರ ಸತತ ಎರಡು ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಕೃನಾಲ್ ಪಾಂಡ್ಯ ಐದು ಪ್ರಶಸ್ತಿ ಗೆದ್ದ ಆಟಗಾರರ ಕ್ಲಬ್‌ಗೆ ಹೊಸ ಸೇರ್ಪಡೆಯಾಗಿದ್ದಾರೆ. ಪಾಂಡ್ಯ ಮುಂಬೈ ಇಂಡಿಯನ್ಸ್ ಪರ ಮೂರು ಟ್ರೋಫಿಗಳನ್ನು ಗೆದ್ದಿದ್ದರು.
ಹರ್ಭಜನ್ ಸಿಂಗ್, ಕರಣ್ ಸಿಂಗ್, ಸುರೇಶ್ ರೈನಾ, ಲಸಿತ್ ಮಾಲಿಂಗ ಹಾಗೂ ರವೀಂದ್ರ ಜಡೇಜ ತಲಾ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದ್ದರು.
ಆಟಗಾರನಾಗಿ ಸತತ ಮೂರು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿರುವ ಪಟ್ಟಿಯಲ್ಲಿ ಸಾಲ್ಟ್, ಸುಯಶ್ ಹಾಗೂ ಕರಣ್ ಮಾತ್ರ ಇದ್ದಾರೆ. ಈ ಮೂವರು ಐಪಿಎಲ್ ಇತಿಹಾಸದಲ್ಲಿ ಅಪರೂಪದ ಸಾಧನೆ ಮಾಡಿದ ಕ್ರಿಕೆಟಿಗರಾಗಿದ್ದಾರೆ.